ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ವಿಚಾರ: ಬಿಬಿಎಂಪಿ ಆಯುಕ್ತರ ಆದೇಶಕ್ಕೆ ಹೈಕೋರ್ಟ್ ತಡೆ
ಬೆಂಗಳೂರು, ಮೇ 30: ಗಿರಿನಗರದ ನಿವೇಶನವೊಂದರಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಮತ್ತು ಖಾತೆ ನೋಂದಣಿಗೆ ಕೋರಿ ರಾಮಚಂದ್ರಾಪುರ ಮಠ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಬಿಬಿಎಂಪಿ ಆಯುಕ್ತರ ಆದೇಶಕ್ಕೆ ಹೈಕೋರ್ಟ್ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬಿಬಿಎಂಪಿ ಆಯುಕ್ತರ ಆದೇಶ ಪ್ರಶ್ನಿಸಿ ರಾಮಚಂದ್ರಾಪುರ ಮಠ ಮತ್ತು ರಾಘವೇಶ್ವರ ಭಾರತೀ ಸ್ವಾಮೀಜಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಬಿಬಿಎಂಪಿ ಆಯುಕ್ತರ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಅಲ್ಲದೆ, ಬಿಬಿಎಂಪಿ, ನಗರ ಯೋಜನೆ ಸಹಾಯಕ ನಿರ್ದೇಶಕರು (ಬೆಂಗಳೂರು ದಕ್ಷಿಣ) ದೂರುದಾರ ಎಂ.ಪವನ್ ಪ್ರಸಾದ್‌ಗೆ ತುರ್ತು ನೋಟಿಸ್ ಜಾರಿ ಮಾಡಿದರು.
ಈ ಮಧ್ಯೆ ಜಾಗದ ಒಡೆತನದ ಬಗ್ಗೆ ಬಿಬಿಎಂಪಿ ಆಯುಕ್ತರು ತೀರ್ಮಾನ ಕೈಗೊಂಡಿರುವ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭೂಮಿಯ ಒಡೆತನದ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಬಿಬಿಎಂಪಿ ಆಯುಕ್ತರಿಗೆ ಇಲ್ಲ. ಆದರೂ ಅವರು ಭೂಮಿಯ ಒಡೆತನದ ಬಗ್ಗೆ ತೀರ್ಮಾನಿಸಿದ್ದಾರೆ. ಐಎಎಸ್ ಅಧಿಕಾರಿಯಾದ ಮಾತ್ರಕ್ಕೆ ಸಿವಿಲ್ ಕೋರ್ಟ್‌ನ ಅಧಿಕಾರ ಚಲಾಯಿಸಬಹುದೇ? ಆ ಅಧಿಕಾರವನ್ನು ಆಯುಕ್ತರಿಗೆ ಕೊಟ್ಟವರು ಯಾರು? ಎಂದು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿ ಮೇಲಿನಂತೆ ಮಧ್ಯಂತರ ಆದೇಶ ಹೊರಡಿಸಿತು.
ಪ್ರಕರಣವೇನು: ಗಿರಿನಗರದಲ್ಲಿ ರಾಮಚಂದ್ರಾಪುರ ಮಠವು ನಿವೇಶನ ಖರೀದಿಸಿತ್ತು. ಈ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಲು ಬಿಬಿಎಂಪಿ 2010ರಲ್ಲಿ ಮಠಕ್ಕೆ ನಕ್ಷೆ ಮಂಜೂರಾತಿ ನೀಡಿತ್ತು. ಆದರೆ, ಹಾಲಿ ಕಟ್ಟಡವನ್ನು ನೆಲಸಮಗೊಳಿಸಿ ಮೂರು ಮಹಡಿಯ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ನವೀಕರಿಸಿಕೊಡಲು ಮಠವು ಬಿಬಿಎಂಪಿಗೆ ಮನವಿ ಮಾಡಿತ್ತು.
ಆದರೆ, ಮಠವು ಪಾರ್ಕ್ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿದೆ ಎಂದು ತಿಳಿಸಿದ್ದ ಬಿಬಿಎಂಪಿಯು, ಮಠಕ್ಕೆ ನೀಡಲಾಗಿದ್ದ ನಕ್ಷೆ ಮಂಜೂರಾತಿಯನ್ನು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಮಠವು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ ತೀರ್ಮಾನಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿತ್ತು. ಅದರಂತೆ ನಕ್ಷೆ ಮಂಜೂರಾತಿ ಮತ್ತು ಖಾತೆ ನೋಂದಣಿಗೆ ಕೋರಿ ರಾಮಚಂದ್ರಾಪುರ ಮಠ ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದು, ಅದನ್ನು ಆಯುಕ್ತರು ಈಚೆಗೆ ವಜಾಗೊಳಿಸಿದ್ದರು.
ವಿಶ್ವಭಾರತಿ ಗೃಹ ನಿರ್ಮಾಣ ಸಂಘದಿಂದ ಈ ನಿವೇಶನವನ್ನು 1979ರಲ್ಲಿ ಖರೀದಿಸಿರುವುದಾಗಿ ಮಠ ಹೇಳಿದೆ. ಅದಾದ 31 ವರ್ಷದ ಬಳಿಕ ಸಿಎ ನಿವೇಶನದ ಖಾತೆ ನೋಂದಣಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ. ಹಾಗೂ ಬಿಡಿಎನಿಂದ ನಿರಾಕ್ಷೇಪಣಾ ಪತ್ರ ಪಡೆಯಲು 1985ರ ಎಪ್ರಿಲ್ 6ರ ದಿನಾಂಕ ಹೊಂದಿದ್ದ ಒಂದು ಪುಟದ ಆದೇಶವನ್ನು ಕಾನೂನುಬಾಹಿರವಾಗಿ ಸೃಷ್ಟಿಸಿದೆ. ಅದರ ಮೂಲ ದಾಖಲೆಗಳು ಬಿಡಿಎ ಬಳಿ ಇಲ್ಲ. ನಿವೇಶನವನ್ನು ತಾನು ಮಂಜೂರು ಸಹ ಮಾಡಿಲ್ಲ ಎಂದು ಬಿಡಿಎ ಹೇಳಿದೆ. ಇನ್ನು ಈ ನಿವೇಶನವು ಇದು ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟಿದ್ದಾಗಿದೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದರು. ಇದರಿಂದ ಮಠ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಆಯುಕ್ತರ ಆದೇಶ ರದ್ದಪಡಿಸಬೇಕು ಹಾಗೂ ತಮಗೆ ನಕ್ಷೆ ಮಂಜೂರಾತಿ ನೀಡಲು ನಿರ್ದೇಶಿಸಬೇಕು ಎಂದು ಕೋರಿದೆ.