ವೈದ್ಯಕೀಯ ಸೌಲಭ್ಯ, ಗ್ರಾಚ್ಯುಟಿ ನೀಡಲು ಆಗ್ರಹ: ಜೂ.5ಕ್ಕೆ ಕರಾಳ ದಿನಾಚರಣೆ

Update: 2018-05-30 15:22 GMT

ಬೆಂಗಳೂರು, ಮೇ 30: ನಿವೃತ್ತ ಸಿಬ್ಬಂದಿಗೆ ವೈದ್ಯಕೀಯ ಸೌಲಭ್ಯ ವಿತರಿಸುವುದು, ಎಲ್‌ಐಸಿ ಒಡಂಬಡಿಕೆ ಗ್ರಾಚ್ಯುಟಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೂ. 5ರ ವಿಶ್ವ ಪರಿಸರ ದಿನಾಚರಣೆಯನ್ನು ಕರಾಳ ದಿನಾಚರಣೆಯನ್ನಾಗಿ ಆಚರಿಸುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿವೃತ್ತ ನೌಕರರ ಸಂಘ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಚನ್ನಯ್ಯ, ಕೆರೆಗಳ ಸ್ವಚ್ಛತೆಗಾಗಿ ನೂರು ಕೋಟಿ ನೀಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಸ್ಥೆಯ ನೌಕರರ ಪಿಂಚಣಿ ಹಣ ಭರಿಸಲು ಅನುದಾನವಿಲ್ಲ ಎನ್ನುತ್ತಿದೆ. ಇದು ಯಾವ ನ್ಯಾಯ ಪ್ರಶ್ನಿಸಿದರು.

ರಾಜ್ಯ ಸರಕಾರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇದುವರೆಗೆ ಅನುದಾನ ನೀಡುತ್ತಿಲ್ಲ. ತನ್ನ ಸಂಪನ್ಮೂಲದಲ್ಲೇ ಮಂಡಳಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಕೆರೆ ಸ್ವಚ್ಛತೆಗೆ ಮಂಡಳಿಯಿಂದ ನೂರು ಕೋಟಿ ನೀಡಿರುವುದು ಎಷ್ಟು ಸರಿ? ಬಿಡಬ್ಲುಎಸ್‌ಎಸ್‌ಬಿ ಯುಟಿಲೈಸೇಷನ್ ಪತ್ರ ನೀಡಿದ ತಕ್ಷಣ ಕೋಟಿ ಕೋಟಿ ನೀಡಲಾಗುತ್ತಿದೆ ಎಂದು ದೂರಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೆರೆ ಸ್ವಚ್ಛತೆಗೆ ಹಣ ನೀಡಲು ಅಧಿಕಾರ ಇಲ್ಲ. ಆದರೂ ಮಂಡಳಿ ಅಧ್ಯಕ್ಷರಾದ ಐಎಫ್‌ಎಸ್ ಅಧಿಕಾರಿ ರಾಮಚಂದ್ರ ಅವರು ಸಭೆ ನಡೆಸಿ ನೂರಾರು ಕೋಟಿ ಕೆರೆ ಸ್ವಚ್ಛತೆಗೆ ನೀಡುತ್ತಿದ್ದಾರೆ. ಕಳೆದ 20 ವರ್ಷದಿಂದ ನಿವೃತ್ತ ನೌಕರರ ಪಿಂಚಣಿ ನೀಡಲು ಮಾತ್ರ ಮಂಡಳಿಯಲ್ಲಿ ಹಣವಿಲ್ಲ ಎನ್ನಲಾಗುತ್ತಿದೆ. ಈ ಕೂಡಲೇ ಕೆರೆ ಸ್ವಚ್ಛತೆಗಾಗಿ ನೀಡಿರುವ ನೂರು ಕೋಟಿ ವಾಪಸ್ಸು ಪಡೆದು ನಿವೃತ್ತ ನೌಕರರ ಪಿಂಚಣಿ ಫಂಡ್‌ಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಸತತ 8 ವರ್ಷಗಳಿಂದ ನಿವೃತ್ತ ಸಿಬ್ಬಂದಿಗೆ ವೈದ್ಯಕೀಯ ಸೌಲಭ್ಯ, ಈ ಹಿಂದಿನಂತೆ ಎಲ್‌ಐಸಿ ಒಡಂಬಡಿಕೆಯಂತೆ ಗ್ರಾಚ್ಯುಟಿ ನೀಡಬೇಕೆಂದು ಮನವಿ ಮಾಡಲಾಗುತ್ತಿದೆ. ಇಲ್ಲಿಯವರೆಗೆ ನಮ್ಮ ಬೇಡಿಕೆಗಳಿಗೆ ಮಂಡಳಿ ಸ್ಪಂದಿಸಿಲ್ಲ. ಇದರಿಂದ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಸುಮಾರು 22 ಮಂದಿ ಮೃತಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಹತ್ತು ವರ್ಷಗಳಿಂದ ಸಿಎಫ್‌ಇ, ಸಿಎಫ್‌ಓ ಕನ್‌ಸೆಂಟ್‌ಗಳನ್ನು ಬೇಕಾಬಿಟ್ಟಿ ನೀಡಲಾಗಿದೆ. ರೆಡ್ ಮತ್ತು ಆರೆಂಜ್ ಕಾರ್ಖಾನೆಗಳನ್ನು ಪರಿಶೀಲನೆ ನಡೆಸುತ್ತಿಲ್ಲ. ಕಾರ್ಖಾನೆಗಳು, ಅಪಾರ್ಟ್‌ಮೆಂಟ್‌ಗಳ ಮಾಲಕರೊಂದಿಗೆ ಅಧಿಕಾರಿಗಳು ಶಾಮೀಲಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಕೆರೆಗಳೆಲ್ಲ ಮಾಲಿನ್ಯಗೊಂಡಿವೆ ಎಂದರು.

ಹಸಿರು ನ್ಯಾಯಾಧೀಕರಣ ಆದೇಶದ ಮೇರೆಗೆ ಮುಚ್ಚಿಸಿದ್ದ ಕಾರ್ಖಾನೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಮಹಾಲೇಖಪಾಲರ ವರದಿಯಲ್ಲಿ ಕೆರೆಗಳ ಮೇಲ್ವಿಚಾರಣೆ ನಡೆಸಿಲ್ಲ ಎಂದಿದ್ದರೂ ಯಾವೊಬ್ಬ ಪರಿಸರ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಹೇಳಿದರು.

ಮಂಡಳಿಯ ಅಕ್ರಮಗಳ ತನಿಖೆಗೆ ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಅವರನ್ನು ನೇಮಿಸಬೇಕು. ಹಸಿರು ಪೀಠ ನ್ಯಾಯಾಲಯದ ಆದೇಶದಂತೆ ಐಎಫ್‌ಎಸ್ ಅಧಿಕಾರಿಗಳನ್ನು ಮಂಡಳಿಯಿಂದ ಪರಿಸರ ಇಲಾಖೆಗೆ ವರ್ಗಾಯಿಸಿ ಐಎಎಸ್ ಅಧಿಕಾರಿಗಳನ್ನು ನೇಮಿಸಬೇಕು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವೇತನವನ್ನೇ ಶ್ರೇಣಿ ಮಂಡಳಿ ಸಿಬ್ಬಂದಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು, ಗೌರವಾಧ್ಯಕ್ಷರಾದ ಕೆ.ಭರತ್‌ಭೂಷಣ್, ಸಂಪಂಗಿರಾಮಯ್ಯ, ಉಪಾಧ್ಯಕ್ಷ ಕೆ.ಎಸ್.ವಾಸುಕಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News