ಜೂ.4 ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಪರಿವರ್ತನಾ ಸಮಾವೇಶ
ಬೆಂಗಳೂರು, ಮೇ 30: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಅಂಗವಾಗಿ ಪರಿವರ್ತನಾ ಸಮಾವೇಶವನ್ನು ಜೂ.4 ರಂದು ಹಾಸನದ ಹಾಸನಾಂಭ ಕಲಾಕ್ಷೇತ್ರದಲ್ಲಿ ಸಮತಾ ಸೈನಿಕ ದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ಮುಖಂಡ ವೈ.ಎಸ್.ದೇಗೂರ್, ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಡಳಿತದಲ್ಲಿ ದಲಿತ ಹಿಂದುಳಿದ ಹಾಗೂ ಮಹಿಳೆಯರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಾಕಷ್ಟು ಕೆಲಸವನ್ನು ಮಾಡುವ ಮೂಲಕ ಪರಿವರ್ತನೆಯ ಹರಿಕಾರರಾಗಿದ್ದರು. ಇವರ ಮೀಸಲಾತಿ ಪರಿಕಲ್ಪನೆಯು ಇಂದಿಗೂ ದೇಶಕ್ಕೆ ಮಾದರಿಯಾಗಿದೆ. ಅಂತಹ ಮಹನೀಯರ ಜಯಂತಿಯಂದು ಪರಿವರ್ತನಾ ಸಮಾವೇಶವನ್ನು ಹಮ್ಮಿಕೊಳ್ಳಾಗುತ್ತಿದೆ ಎಂದರು.
ಹಾಸನದಲ್ಲಿ ನಡೆಯುವ ಸಮಾವೇಶವನ್ನು ಮಾಜಿ ಕೇಂದ್ರ ಸಚಿವ ಬಿ. ಶ್ರೀನಿವಾಸ ಪ್ರಸಾದ್ ಅವರು ಉದ್ಘಾಟಿಸುತ್ತಿದ್ದಾರೆ. ನೂತನ ಶಾಸಕರಾದ ಪ್ರೀತಂ ಜೆ.ಗೌಡ ಅವರು ಸಾಮಾಜಿಕ ನ್ಯಾಯ ಪ್ರವರ್ತಕ ಎಂಬ ಕಿರುಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಾಸನ ಜಿಲ್ಲೆಯ ಸಾಮಾಜಿಕ ಹೋರಾಟಗಾರ ಆರ್.ಪಿ.ಐ ಸತೀಶ್ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಇದೇ ಸಂದರ್ಭದಲ್ಲಿ ರಿಪಬ್ಲಿಕನ್ ಪಾರ್ಟಿ ಹಾಗೂ ಸಮತಾ ಸೈನಿಕದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರ ಜನ್ಮದಿನವೂ ಅಂದೇ ಇರುವುದರಿಂದ ಉದ್ಯಾನವನದಲ್ಲಿ ಸಸಿ ನೆಡುವುದು, ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ತಿಳಿಸಿದರು.