ಅಂತಾರಾಷ್ಟ್ರೀಯ ಪರಿಸರ ದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ
ಬೆಂಗಳೂರು, ಮೇ 30: ವಿಶ್ವ ಪರಿಸರ ದಿನದ ಅಂಗವಾಗಿ 2018-19ನೆ ಸಾಲಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ‘ಮಗುವಿಗೊಂದು ಮರ, ಶಾಲೆಗೊಂದು ವನ’ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ವಿಶ್ವ ಪರಿಸರ ದಿನದಿಂದ ಆಗಸ್ಟ್ ಕೊನೆಯವರೆಗೆ ಪ್ರತಿ ವಿದ್ಯಾರ್ಥಿ ಅಥವಾ ವಿದ್ಯಾರ್ಥಿ ತಂಡದಿಂದ ಪರಿಸರಕ್ಕೆ ಉಪಯುಕ್ತವಾಗುವ, ನೆರಳು ಹಾಗೂ ಹಣ್ಣುಗಳನ್ನು ನೀಡುವ ಗಿಡಗಳ್ನು ನೆಟ್ಟು ಪೋಷಣೆ ಮಾಡಬೇಕು.
ಕ್ರೀಡಾ ಮೈದಾನ ಬಿಟ್ಟು, ಶಾಲೆಗೆ ಸೇರಿದ ಇತರೆ ಜಾಗದಲ್ಲಿ ಆಲಂಕಾರಿಕ ಗಿಡಗಳು, ಹೂ, ಹಣ್ಣಿನ ಗಿಡಗಳು, ಸ್ಥಳೀಯ ಉಪಯುಕ್ತ ಸಸ್ಯಗಳನ್ನು ಸಮೀಪದ ತೋಟಗಾರಿಕೆ ಇಲಾಖೆಯಿಂದ ಪಡೆದು ಹಸಿರೀಕರಣ ಹೆಚ್ಚಿಸುವಂತೆ ನೋಡಿಕೊಳ್ಳುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಬಿಸಿಯೂಟಕ್ಕೆ ಅಗತ್ಯವಾದ ತರಕಾರಿ, ಸೊಪ್ಪು ಸೇರಿದಂತೆ ಕರಿಬೇವು, ತೆಂಗು, ನುಗ್ಗೇಕಾಯಿ ಬೆಳೆದು ‘ಶಾಲಾ ಕೈತೋಟ’ ನಿರ್ಮಿಸಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವುದು ಕೂಡ ಇದರಲ್ಲಿ ಸೇರಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.