ಜೂನ್ ಮೊದಲ ವಾರದಲ್ಲಿ ಸಚಿವ ಸಂಪುಟ ರಚನೆ?
ಬೆಂಗಳೂರು, ಮೇ 30: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಒಂದು ವಾರ ಕಳೆದರೂ ಉಭಯ ಪಕ್ಷಗಳ ನಾಯಕರ ಮಧ್ಯೆ ಖಾತೆ ಹಂಚಿಕೆ ಗೊಂದಲದ ಹಿನ್ನೆಲೆಯಲ್ಲಿ ಸಚಿವ ಸಂಪುಟ ರಚನೆ ಇದೀಗ ಜೂನ್ ಮೊದಲ ವಾರಕ್ಕೆ ಮುಂದೂಡಲಾಗಿದೆ.
ಶೀಘ್ರದಲ್ಲೇ ಸಂಪುಟ ರಚನೆ ಮಾಡಲಾಗುವುದೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಎರಡೂ ಪಕ್ಷಗಳಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಪ್ರಮುಖ ಖಾತೆಗಳಿಗೆ ಹಗ್ಗಜಗ್ಗಾಟ ಆರಂಭವಾಗಿದೆ.
ಈ ಮಧ್ಯೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ ಹಿನ್ನೆಲೆಯಲ್ಲಿ ಸಂಪುಟ ರಚನೆ ವಿಳಂಬವಾಗಿತ್ತು. ಜೂನ್ 2ಕ್ಕೆ ಸಂಪುಟ ರಚನೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ, ಈವರೆಗೂ ಸಂಪುಟಕ್ಕೆ ಸೇರ್ಪಡೆಯಾಗಲಿರುವವರು ಸೇರಿದಂತೆ ಯಾವುದು ಖಚಿತವಾಗಿಲ್ಲ.
ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಪುಟ ಸೇರುವವರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಜೂನ್ 4ರ ಸೋಮವಾರ ಸಂಪುಟ ರಚಿಸಲು ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಆದರೆ, ಜೂನ್ 6ಕ್ಕೆ ‘ಒಳ್ಳೆಯ ಮುಹೂರ್ತ’ ಇದ್ದು, ಅದೇ ದಿನ ಸಂಪುಟ ರಚನೆ ಮಾಡಲಾಗುವುದು ಎಂದು ಗೊತ್ತಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಯು.ಟಿ ಖಾದರ್, ರೋಷನ್‌ಬೇಗ್, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಈ.ತುಕಾರಾಂ ಸೇರಿದಂತೆ ಹಲವು ಮಂದಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಈ ಮಧ್ಯೆ ಅತ್ತ ಜೆಡಿಎಸ್ ಪಕ್ಷದಿಂದ ಬಂಡೆಪ್ಪ ಕಾಶೆಂಪೂರ್, ಜಿ.ಟಿ.ದೇವೇಗೌಡ, ಎಚ್.ಕೆ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ವೆಂಕಟರಾವ್ ನಾಡಗೌಡ, ಎಚ್.ವಿಶ್ವನಾಥ್, ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವು ಗಣ್ಯರು ಸೇರ್ಪಡೆ ಆಗುವ ನಿರೀಕ್ಷೆ ಇದೆ ಎಂದು ಗೊತ್ತಾಗಿದೆ.
‘ಇನ್ನು ಎರಡು ಅಥವಾ ಮೂರು ದಿನಗಳ ಒಳಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ನೂತನ ಸಚಿವ ಸಂಪುಟ ರಚನೆಯಾಗಲಿದ್ದು, ರಾಜ್ಯದಲ್ಲಿನ ರೈತರ ಸಾಲಮನ್ನಾ ಸೇರಿ ಕರ್ನಾಟಕ ರಾಜ್ಯವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವತ್ತ ಕೊಂಡೊಯ್ಯಲಾಗುವುದು’
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ