ಜೂ.4ರಂದು ಮೆಟ್ರೊ ನೌಕರರ ಮುಷ್ಕರ ಇಲ್ಲ
ಬೆಂಗಳೂರು, ಮೇ 30: ಮೆಟ್ರೊ ರೈಲು ನಿಗಮದ ನೌಕರರು ಜೂ.4ರಂದು ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಕೈ ಬಿಡಲು ನಿರ್ಧರಿಸಿದ್ದಾರೆ.
ಮೆಟ್ರೊ ನೌಕರರ ಮುಷ್ಕರ ಕುರಿತಂತೆ ಹೈಕೋರ್ಟ್‌ನಲ್ಲಿ ಮೇ 28ರಂದು(ಸೋಮವಾರ) ನಡೆಯಬೇಕಿದ್ದ ವಿಚಾರಣೆ ಜೂ.4ಕ್ಕೆ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ನಡೆಸದಿರಲು ನಿರ್ಧರಿಸಲಾಗಿದೆ.
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮೆಟ್ರೊ ನೌಕರರ ಸಂಘ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ, ಮುಷ್ಕರವನ್ನು ತಡೆಯುವಂತೆ ಬಿಎಂಆರ್‌ಸಿಎಲ್ ಹೈಕೋರ್ಟ್‌ನ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಮುಷ್ಕರ ಕುರಿತ ಪ್ರಕರಣ ವಿಚಾರಣೆಯು ಜೂ.4ಕ್ಕೆ ಮುಂದೂಡಿಕೆ ಆಗಿರುವುದರಿಂದ ಮುಷ್ಕರವನ್ನು ನಡೆಸದಿರಲು ಮೆಟ್ರೊ ನೌಕರರ ಸಂಘದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.
ಮೆಟ್ರೊ ನೌಕರರ ಮುಷ್ಕರ ಸಂಬಂಧ ಜೂ.4ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಅಂದು ಕೋರ್ಟ್ ನೀಡುವ ತೀರ್ಪು ಆಧರಿಸಿ ಮುಷ್ಕರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ನ್ಯಾಯಾಲಯ ನೌಕರರ ಪರ ತೀರ್ಪು ನೀಡಲಿದೆ ಎಂದು ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯ ನಾರಾಯಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.