ಬೆಂಗಳೂರು: ವೇತನ ಪಾವತಿಗೆ ಆಗ್ರಹಿಸಿ ಪೌರ ಕಾರ್ಮಿಕರ ಪ್ರತಿಭಟನೆ
ಬೆಂಗಳೂರು, ಮೇ 30: ಬಿಬಿಎಂಪಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರರಿಗೆ ಬಯೋಮೆಟ್ರಿಕ್ ಆಧಾರಿತ ವೇತನ ಪಾವತಿಸುವಂತೆ ಆಗ್ರಹಿಸಿ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.
ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಪೌರಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ತಮ್ಮ ಬೇಡಿಕೆಗಳನ್ನು ಈೇರಿಸಬೇಕು ಎಂದು ಒತ್ತಾಯಿಸಿದರು.
ನಗರ ಅಭಿವೃದ್ಧಿ, ಜನಸಂಖ್ಯಾ ಕಾರಣದಿಂದಾಗಿ ದಿನದಿಂದ ದಿನಕ್ಕೆ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ, ಕೆಲಸದ ಒತ್ತಡ ಸಹ ಹೆಚ್ಚುತ್ತಿದೆ. ಜೊತೆಗೆ, ಕಾರ್ಮಿಕರಲ್ಲಿ ನೈರ್ಮಲ್ಯ ಕಾಪಾಡುವುದು ಕಷ್ಟವಾಗುತ್ತಿದ್ದು, ಶ್ರಮಕ್ಕೆ ತಕ್ಕ ವೇತನ ಸಿಗದೆ ಕಾರ್ಮಿಕರು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಪದಾಧಿಕಾರಿ ಶ್ರೀನಿವಾಸ್, ಕೆಲವು ಅಧಿಕಾರಿಗಳು ಹಲವು ವರ್ಷಗಳಿಂದ ದುಡಿಯುತ್ತಿರುವ ನಿಷ್ಠಾವಂತ ಕಾರ್ಮಿಕರನ್ನು ಕಡೆಗಣಿಸಿ, ಬೇನಾಮಿ ಕಾರ್ಮಿಕರನ್ನು ನೇಮಿಸಿಕೊಂಡು ಅವರಿಗೆ ಮಾತ್ರ ಬಯೋಮೆಟ್ರಿಕ್ ಮೂಲಕ ವೇತನ ನೀಡುತ್ತಿದ್ದಾರೆ ಎಂದು ದೂರಿದರು.
ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ ಶೇ.60 ಪೌರಕಾರ್ಮಿಕರಿಗೆ ಮಾತ್ರವೇ ಬಯೋಮೆಟ್ರಿಕ್ ಆಧಾರಿತ ವೇತನ ಪಾವತಿ ಆಗುತ್ತಿದ್ದು, ಉಳಿದ ಶೇ.40 ಪೌರ ಕಾರ್ಮಿಕರನ್ನು ಈ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು. 18 ಸಾವಿರ ನೌಕರರು ಸಕಾಲದಲ್ಲಿ ಸಂಬಳ ಪಡೆಯುತ್ತಿದ್ದು, ಸುಮಾರು 6 ಸಾವಿರ ನೌಕರರು ಸಂಬಳವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫ್‌ರಾಜ್ ಖಾನ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.
ಸರಕಾರದ ಆದೇಶದಂತೆ ’ಬಿಬಿಎಂಪಿ’ಯ ಶೇ.60 ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಹಾಜರಾತಿ ಅಡಿ ವೇತನ ನೀಡಲಾಗುತ್ತಿದೆ. ಉಳಿದ ಎಲ್ಲ ಕಾರ್ಮಿಕರನ್ನು ಈ ವ್ಯಾಪ್ತಿಗೆ ಸೇರಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು.
-ಸರ್ಫ್‌ರಾಜ್ ಖಾನ್, ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ