ನಿಂತುಕೊಂಡೇ ಸಿಬಿಎಸ್‍ಇ ಪರೀಕ್ಷೆ ಬರೆದು ಶೇ.93.4 ಅಂಕ ಗಳಿಸಿದ ಆಶ್ಮಿತ್

Update: 2018-05-31 11:10 GMT

ಜೈಪುರ್, ಮೇ 31: ಹದಿನಾರು ವರ್ಷದ ಆಶ್ಮಿತ್ ಭಟ್ನಾಗರ್ ನಿಂತುಕೊಂಡೇ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆ ಬರೆದು ಶೇ.93.4 ಅಂಕಗಳನ್ನು ಗಳಿಸಿ ವಿಶೇಷ ಸಾಧನೆ ಮೆರೆದಿದ್ದಾರೆ. ಈ ಬಾಲಕನಿಗೆ ಕುಳಿತುಕೊಳ್ಳಲು ಅಥವಾ ಹಾಸಿಗೆಯಲ್ಲಿ ಮಲಗಲು ಸಾಧ್ಯವಿಲ್ಲ, ಕೀಲುಗಳಲ್ಲಿನ ಬಿಗಿತ (ಸ್ಟಿಫ್ ನೆಸ್) ಸಮಸ್ಯೆ ಆತನನ್ನು ಅತಿಯಾಗಿ ಕಾಡುತ್ತಿದೆ. ಈತನ ಸಮಸ್ಯೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ 'ಮಯೋಸಿಟಿಸ್ ಒಸ್ಸಿಫಿಕೆನ್ಸ್' ಎನ್ನುತ್ತಾರೆ. ಮೂಳೆಗಳಿಗೆ ಹಾನಿಯುಂಟಾದಾಗ ಆಗುವ ಕ್ಯಾಲ್ಸಿಫಿಕೇಶನ್ ನಿಂದ ಈ ಸಮಸ್ಯೆ ಉದ್ಭವಿಸುತ್ತಿದೆ.

ಇಂತಹ ಒಂದು ಆರೋಗ್ಯ ಸಮಸ್ಯೆಯಿಟ್ಟುಕೊಂಡೇ ಆತ ಶೇ. 93.4 ಅಂಕ ಗಳಿಸಿರುವುದು ನಿಜಕ್ಕೂ ಗಮನಾರ್ಹ ಸಾಧನೆಯೇ ಸರಿ. ಆತನ ತಂದೆ ಸುಮೀತ್ ಭಟ್ನಾಗರ್ (52) ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಆಶ್ಮಿತ್ ಒಂದು ವರ್ಷದವನಿರುವಾಗ ಆತನಿಗೆ ಡಿಪಿಟಿ ಲಸಿಕೆ ನೀಡಿದ ನಂತರ ಗಡ್ಡೆಯಂತಹ ಬೆಳವಣಿಗೆಯಾಗಿದ್ದು, ಇದನ್ನು ತೆಗೆಯಲು ಶಸ್ತ್ರಕ್ರಿಯೆ ನಡೆಸಲಾಯಿತು. ಆನಂತರ ಆತನ ಸೊಂಟದ ಭಾಗ ಜಡವಾಗಿತ್ತು ಎಂದು ಆತನ ತಂದೆ ಹೇಳುತ್ತಾರೆ. ನಂತರ ಆಶ್ಮಿತ್ 'ಮಯೋಸಿಟಿಸ್ ಒಸ್ಸಿಫಿಕೆನ್ಸ್' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆಂದು ವೈದ್ಯರು ತಿಳಿಸಿದ್ದರು. ಆತನಿಗೆ ದೈಹಿಕ ಸಮಸ್ಯೆಯಿದ್ದರೂ ಮಾನಸಿಕವಾಗಿ ದೃಢವಾಗಿದ್ದಾನೆ, ಕ್ರಿಕೆಟ್, ಬ್ಯಾಡ್ಮಿಂಟನ್ ಹಾಗೂ ಚೆಸ್ ಆಟವೆಂದರೆ ಆತನಿಗೆ ಇಷ್ಟ. ಛಾಯಾಗ್ರಹಣವೂ ಆತನಿಗೆ ಅಚ್ಚುಮೆಚ್ಚು ಎನ್ನುತ್ತಾರೆ ತಂದೆ ಸುಮೀತ್. ಹನ್ನೊಂದನೇ ತರಗತಿಯಲ್ಲಿ ಆಶ್ಮಿತ್ ವಾಣಿಜ್ಯ ವಿಷಯವನ್ನು ಆಯ್ದುಕೊಂಡಿದ್ದಾನೆ, ಮುಂದೆ ಆತನಿಗೆ ಸರಕಾರಿ ಅಧಿಕಾರಿಯಾಗಬೇಕೆಂಬ ಇಚ್ಛೆಯಿದೆ.

ಆತನ  ಹಿರಿಯ ಸೋದರ ಚೈತನ್ಯ (19) ಕೂಡ ಭಿನ್ನ ಸಾಮರ್ಥ್ಯದ ಯುವಕ. ಆಶ್ಮಿತ್ ಜೈಪುರದ ರಯಾನ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿ. ಆತನಿಗೆ ಅಲ್ಲಿ ವಿಶೇಷ ಮೇಜೊಂದನ್ನು ವ್ಯವಸ್ಥೆ ಮಾಡಿ ಆತ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಲಾಗಿತ್ತು. ಆಶ್ಮೀತ್ ಎದುರಿಸುವ ಸಮಸ್ಯೆಗೆ ಪರಿಹಾರವಿಲ್ಲ. ಆತ ಬಿದ್ದು ಗಾಯಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞ ವೈದ್ಯರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News