ಕೇಂದ್ರ ಸರಕಾರದಿಂದ ಸೇಡಿನ ರಾಜಕಾರಣ: ಡಿ.ಕೆ.ಶಿವಕುಮಾರ್
ಬೆಂಗಳೂರು, ಮೇ 31: ಕೇಂದ್ರ ಸರಕಾರ ನಮ್ಮನ್ನು ಟಾರ್ಗೆಟ್ ಮಾಡುತ್ತಿದೆ. ಸಿಬಿಐ, ಐಟಿ ಹಾಗೂ ಇಡಿಯನ್ನು ಬಳಸಿಕೊಂಡು ನಮ್ಮ ವಿರುದ್ಧ ಸೇಡಿನ ರಾಜಕಾರಣ ನಡೆಸುತ್ತಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ಗುರುವಾರ ಬೆಳಗ್ಗೆ 8 ಗಂಟೆಗೆ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಡಿ.ಕೆ.ಸಹೋದರರು, ಕೇಂದ್ರ ಸರಕಾರವು ಸಿಬಿಐ, ಐಟಿ ಹಾಗೂ ಇಡಿಯನ್ನು ಬಳಸಿಕೊಂಡು ನಮ್ಮ ವಿರುದ್ಧ ಸೇಡಿನ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇಡಿನ ರಾಜಕಾರಣ ಮಾಡುವ ಮೂಲಕ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಲ್ಲಿ ನನ್ನ ಪಾತ್ರ ಇರುವುದರಿಂದ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಕುಟುಂಬವನ್ನು ಈ ರೀತಿ ಬೆದರಿಕೆಗಳಿಂದ ಬಗ್ಗಿಸಬಹುದು ಎಂದು ಭಾವಿಸಿಕೊಂಡಿದ್ದರೆ ಅದು ತಪ್ಪು. ನಾವು ಯಾವುದಕ್ಕೂ ಜಗ್ಗುವವರಲ್ಲ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ. ನಾವು ಯಾವ ತಪ್ಪನ್ನೂ ಮಾಡಿಲ್ಲ, ಕಾನೂನು ಮೀರಿ ರಾಜಕಾರಣ ಮಾಡಿದವರಲ್ಲ ಎಂದು ಅವರು ಹೇಳಿದರು.
ಸುಳ್ಳು ಪ್ರಕರಣಗಳನ್ನು ದಾಖಲಿಸಿ ನಮ್ಮ ಧ್ವನಿಯನ್ನು ಅಡಗಿಸಬಹುದು ಎಂದರೆ ಅದು ನಿಮ್ಮ ಭ್ರಮೆ. ಹುಟ್ಟು ಸಾವಿನ ನಡುವೆ ಏನು ಬೇಕಾದರೂ ಆಗಬಹುದು. ನಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಬಹುದು. ನಾವು ಎಲ್ಲದಕ್ಕೂ ಸಿದ್ಧವಿದ್ದು, ನ್ಯಾಯಾಂಗಕ್ಕೆ ಬೆಲೆ ನೀಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.