ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ಪ್ರಕರಣ: ನಾಲ್ವರು ಆರೋಪಿಗಳು ಹತ್ತು ದಿನ ಎಸ್‌ಐಟಿ ವಶಕ್ಕೆ

Update: 2018-05-31 14:11 GMT

ಬೆಂಗಳೂರು, ಮೇ 31: ವಿಚಾರವಾದಿ ಕೆ.ಎಸ್.ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಪ್ರಕರಣ ಸಂಬಂಧ ಬಂಧಿತವಾಗಿರುವ ನಾಲ್ವರನ್ನು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ(ಸಿಟ್) ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ.

ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಯಾನೆ ಪ್ರವೀಣ್(37), ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ಯಾನೆ ಪ್ರದೀಪ್(38) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪ ಯಡವೆ ಯಾನೆ ಮನೋಜ್(29) ಎಂಬವರನ್ನು ಸಿಟ್ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದೆ.

ಬುಧವಾರ ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ನಾಲ್ವರನ್ನು ಹಾಜರುಪಡಿಸಿದ ಉಪ್ಪಾರಪೇಟೆ ಠಾಣಾ ಪೊಲೀಸರು, ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಇವರನ್ನು 13 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿದರು. ಬಳಿಕ 10 ದಿನಗಳ ಕಾಲ ಸಿಟ್ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದರು.

ಏನಿದು ಪ್ರಕರಣ?: ಗೌರಿ ಹತ್ಯೆ ಪ್ರಕರಣದ ತನಿಖೆಯ ಆರಂಭದಲ್ಲಿ, ಅನುಮಾನದ ಮೇಲೆ ಕೆಲ ಸಂಘಟನೆಗಳ ಮುಖಂಡರ ಮೊಬೈಲ್ ಸಂಭಾಷಣೆಯನ್ನು ಆಲಿಸಿದಾಗ ನವೀನ್ ಹಾಗೂ ಸುಜಿತ್, ಕೆ.ಎಸ್.ಭಗವಾನ್ ಅವರನ್ನು ಹತ್ಯೆಗೈಯ್ಯುವ ಬಗ್ಗೆ ಮೊಬೈಲ್ ಸಂಭಾಷಣೆ ನಡೆಸಿದ್ದರು. ಆ ಕೂಡಲೇ ಕಾರ್ಯಾಚರಣೆ ನಡೆಸಿ, ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನವೀನ್‌ನನ್ನು ವಶಕ್ಕೆ ಪಡೆದಿದ್ದೆವು. ಆ ನಂತರ ತಲೆಮರೆಸಿಕೊಂಡು ಓಡಾಡುತ್ತಿದ್ದ ಸುಜಿತ್‌ನನ್ನು ಇತ್ತೀಚೆಗೆ ಮಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿತ್ತು.

ಬಂಧಿತರಿಂದ ಕಪ್ಪುಬಣ್ಣದ ಎರಡು ಬ್ಯಾಗ್, ನಾಲ್ಕು ಮೊಬೈಲ್ ಬ್ಯಾಟರಿಗಳು, ಅಗರಬತ್ತಿ ಪೊಟ್ಟಣ, ಬೆಂಗಳೂರಿನ ನಕ್ಷೆ, ನಾಲ್ಕು ಮೊಬೈಲ್‌ಗಳು, ಮೊಬೈಲ್ ಸಂಖ್ಯೆಗಳಿರುವ ಡೈರಿ, ಶಿವಪಾರ್ವತಿ, ಕೃಷ್ಣರುಕ್ಮಿಣಿಯ ಫೋಟೊಗಳು ಹಾಗೂ 22,931 ನಗದು ವಶಕ್ಕೆ ಪಡೆಯಲಾಗಿತ್ತು.

ಹಿಂದೂ ಯುವ ಸೇನೆ ಹೆಸರಿನಲ್ಲಿ ಸಂಘಟನೆ ಕಟ್ಟಿದ್ದ ಚಿಕ್ಕಮಗಳೂರಿನ ನವೀನ್‌ಕುಮಾರ್, 2017ರ ಜೂನ್‌ನಲ್ಲಿ ಗೋವಾದ ಸಭೆಯಲ್ಲಿ ಪಾಲ್ಗೊಂಡಿದ್ದ. ಬಂದೂಕು ತೆಗೆದುಕೊಂಡು ಅಧರ್ಮೀಯರನ್ನು ಸುಟ್ಟು ಹಾಕಬೇಕು ಎಂದು ಆಕ್ರೋಶಭರಿತ ಭಾಷಣವನ್ನೂ ಮಾಡಿದ್ದ. ಆಗ ಅಲ್ಲೇ ಇದ್ದ ಸುಜಿತ್, ನವೀನ್‌ನನ್ನು ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ.

ಎಸೆಸ್ಸೆಲ್ಸಿವರೆಗೆ ಓದಿರುವ ಸುಜಿತ್, ಕೃಷಿಕ ದಂಪತಿಗಳ ಮಗನಾಗಿದ್ದು, ಹಿಂದುತ್ವದ ಬಗ್ಗೆ ಅಪಾರ ಒಲವು ಹೊಂದಿದ್ದ. 2001ರಲ್ಲಿ ಮನೆ ತೊರೆದು, ಇನ್ನುಳಿದ ಆರೋಪಿಗಳ ಜೊತೆ ಗೆಳೆತನ ಬೆಳೆಸಿದ್ದ. 2017ರ ನವೆಂಬರ್‌ನಲ್ಲಿ ನವೀನ್, ಸುಜಿತ್, ಅಮಿತ್, ಅಮೋಲ್, ಮನೋಹರ್ ದುಂಡಪ್ಪಯಡವೆ ಹಾಗೂ ನಿಹಾಲ್, ಚಾಮರಾಜನಗರದ ಗುಂಡಾಲ್ ಜಲಾಶಯ ಸಮೀಪದ ಅರಣ್ಯ ಪ್ರದೇಶದಲ್ಲಿ 2017ರ ನವೆಂಬರ್‌ನಲ್ಲಿ ಸಭೆ ಸೇರಿದ್ದರು ಎನ್ನಲಾಗಿದೆ.

ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮಾಹಿತಿ ದೊರೆಯುವ ವಿಶ್ವಾಸವಿದ್ದು, ತನಿಖೆ ತೀವ್ರಗೊಳಿಸಲಾಗುವುದು’

-ಸಿಟ್ ತನಿಖಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News