ಕೂಡಲೇ 50 ಕೋಟಿ ರೂ.ನೆರವು ನೀಡಲು ದಕ್ಷಿಣ ಕನ್ನಡ ಕಾಂಗ್ರೆಸ್ ನಿಯೋಗದ ಮನವಿ

Update: 2018-05-31 14:53 GMT

ಬೆಂಗಳೂರು, ಮೇ 31: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಸುರಿದ ಭಾರೀ ಮಳೆ-ಅತಿವೃಷ್ಟಿಯಿಂದ ಉಂಟಾದ ಅನಾಹುತವನ್ನೇ ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಶಾಸಕ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಮೊಯಿದ್ದೀನ್ ಭಾವಾ, ಟಿ.ಎಂ.ಶಾಹೀದ್, ಮೇಲ್ಮನೆ ಸದಸ್ಯ ಐವಾನ್ ಡಿಸೋಜಾ ಹಾಜರಿದ್ದ ಜಂಟಿ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

50 ಕೋಟಿ ರೂ.ನೆರವಿಗೆ ಮನವಿ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಮಳೆ ಅನಾಹುತದ ಹಿನ್ನೆಲೆಯಲ್ಲಿ ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕವನ್ನು ಸರಿಪಡಿಸಲು ಕೂಡಲೇ 50ಕೋಟಿ ರೂ.ನೆರವು ನೀಡಲು ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗಿದೆ ಎಂದು ಖಾದರ್ ಹೇಳಿದರು.

ಮೇ 29ರಂದು ಸುರಿದ ಭಾರೀ ಮಳೆ, ಅತಿವೃಷ್ಟಿಯಿಂದ ಸುಮಾರು 20 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ. ಪ್ರವಾಹದ ಹಿನ್ನೆಲೆಯಲ್ಲಿ ಮೃತಪಟ್ಟ ಇಬ್ಬರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ತಲಾ 5 ಲಕ್ಷ ರೂ.ಪರಿಹಾರವನ್ನು ಈಗಾಗಲೇ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಮಳೆಯಿಂದ ಸುಮಾರು 200 ಮನೆಗಳು ಹಾನಿಯಾಗಿದೆ. ಅಲ್ಲದೆ, ರಸ್ತೆ ಬದಿಯ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದ ಪರಿಣಾಮ ನಷ್ಟ ಸಂಭವಿಸಿದೆ. ಹೀಗಾಗಿ ಹಾನಿಗೀಡಾದ ಮನೆ ಸರಿಪಡಿಸಿಕೊಳ್ಳಲು ತುರ್ತಾಗಿ ಪ್ರತಿಮನೆಗೆ 52 ಸಾವಿರ ರೂ. ಹಾಗೂ ಬೀದಿಬದಿ ಅಂಗಡಿಗಳಿಗೆ ನೆರವು ನೀಡಬೇಕೆಂದು ಕೋರಲಾಗಿದೆ ಎಂದರು.

ಹೆದ್ದಾರಿ ಪ್ರಾಧಿಕಾರವೇ ಹೊಣೆ: ಕುಂದಾಪುರ ಹಾಗೂ ತಪಲಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರೇಳು ವರ್ಷಗಳಿಂದ ನಡೆಯುತ್ತಿದ್ದು, ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ‘ನವಯುಗ’ ಕಂಪೆನಿಯ ಅಸಮರ್ಪಕ ಕಾಮಗಾರಿ ಹಾಗೂ ವಿಳಂಬದಿಂದ ಸಮಸ್ಯೆ ಉಂಟಾಗಿದೆ. ಆದರೆ, ಈ ಬಗ್ಗೆ ಪರಿಶೀಲನೆ ನಡೆಸಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಸಂಕಷ್ಟ ಅನುಭವಿಸಬೇಕಾಗಿದೆ. ಹೆದ್ದಾರಿ ಕಾಮಗಾರಿ ವಿಳಂಬದಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಿದ್ದ ಸಂಸದರು ಇತ್ತ ಗಮನವನ್ನೇ ಹರಿಸಿಲ್ಲ ಎಂದು ದೂರಿದರು.

ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದರೂ, ಕಂಪೆನಿ ಕೆಲಸವನ್ನೇ ಮಾಡುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಲಾಗಿದೆ ಎಂದ ಅವರು, ಈ ಮಾರ್ಗದಲ್ಲಿ ಮೂರು ಕಡೆ ಟೋಲ್ ಪಡೆಯುತ್ತಿದ್ದರೂ ಕಾಮಗಾರಿ ಮುಗಿದಿಲ್ಲ ಎಂದು ಆಕ್ಷೇಪಿಸಿದರು.

ಹೆದ್ದಾರಿ ಕಾಮಗಾರಿ ಕೈಗೊಂಡಿರುವ ನವಯುಗ ಕಂಪೆನಿಯ ಬಳಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಒಂದು ಜೆಸಿಬಿಯೂ ಇಲ್ಲ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆಂದ ಅವರು, ಶೀಘ್ರದಲ್ಲೆ ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

‘ಕೇಂದ್ರ ಸರಕಾರ ಸಿಬಿಐ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಮುಖಂಡರ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಮನೆ ಮೇಲೆ ದಾಳಿ ನಡೆಸುವುದು ಖಂಡನೀಯ’

-ಯು.ಟಿ.ಖಾದರ್ ಶಾಸಕ

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ-ಅತಿವೃಷ್ಟಿಯಿಂದ ಉಂಟಾಗಿರುವ ಅನಾಹುತಗಳ ಪರಿಶೀಲನೆಗೆ ನಾಳೆ(ಜೂನ್ 1) ಬೆಳಗ್ಗೆ 11ಗಂಟೆಗೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ’

-ಐವಾನ್ ಡಿಸೋಜಾ ವಿಧಾನ ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News