ಗೃಹ ಇಲಾಖೆಗೆ ಸಲಹೆಗಾರರ ಅವಶ್ಯಕತೆ ಇಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-05-31 14:32 GMT

ಬೆಂಗಳೂರು, ಮೇ 31: ಗೃಹ ಇಲಾಖೆಗೆ ಯಾವುದೇ ರೀತಿಯ ಸಲಹೆಗಾರರ ಅವಶ್ಯಕತೆ ಇಲ್ಲ. ಪೊಲೀಸ್ ಇಲಾಖೆಯಲ್ಲೇ ಪ್ರಾಮಾಣಿಕ ಅಧಿಕಾರಿಗಳಿದ್ದು, ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪೊಲೀಸ್ ಇಲಾಖೆ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಲಿದ್ದಾರೆ. ಅವರಿಗೆ ಮುಕ್ತವಾಗಿ ಕೆಲಸ ನಿರ್ವಹಿಸಲು ಸೂಚಿಸಿದ್ದೇನೆ ಎಂದರು.

ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಒಂದು ಕುಟುಂಬದಂತೆ ಕೆಲಸ ಮಾಡಬೇಕು. ಜನತೆಗೆ ವಿಶ್ವಾಸ ಬರುವ ರೀತಿ ಕೆಲಸ ಮಾಡಬೇಕು. ಯಾವುದೇ ಜಾತಿ ಆಧಾರದ ಮೇಲೆ ಕೆಲಸ ಮಾಡಬಾರದು ಎಂದು ಸೂಚನೆ ನೀಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕೆಲ ಸೂಕ್ಷ್ಮ ಇಲಾಖೆಗಳಲ್ಲಿ ಸಲಹೆಗಾರರ ಅವಶ್ಯಕತೆ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆಗೆ ನಡೆಸಿ ನಿರ್ಧಾರ ಮಾಡುತ್ತೇನೆ ಎಂದ ಕುಮಾರಸ್ವಾಮಿ, ಹಿಂದಿನ ಸರಕಾರದ ಅವಧಿಯಲ್ಲಿ ಗೃಹ ಇಲಾಖೆ ಸಲಹೆಗಾರರಾಗಿದ್ದ ಕೆಂಪಯ್ಯನವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಾಳೆ ಸ್ಪಷ್ಟ ನಿರ್ಧಾರ: ಸಚಿವ ಸಂಪುಟ ರಚನೆ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ನಡುವೆ ಸಮನ್ವಯ ಸಮಿತಿ ರಚನೆ ಸಂಬಂಧ ನಾಳೆ(ಜೂನ್ 1) ಸ್ಪಷ್ಟ ನಿರ್ಧಾರ ಆಗುವ ಸಾಧ್ಯತೆಗಳಿದ್ದು, ಈ ಸಂಬಂಧ ಉಭಯ ನಾಯಕರು ಜಂಟಿ ಸುದ್ಧಿಗೋಷ್ಠಿ ನಡೆಸಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಾಳೆ ಬೆಂಗಳೂರಿಗೆ ಆಗಮಿಸಲಿದ್ದು, ನಾನೂ ಜೆಡಿಎಸ್ ವರಿಷ್ಠ ದೇವೇಗೌಡ ಅವರೊಂದಿಗೆ ಚರ್ಚೆ ಮಾಡಿ ಖಾತೆ ಹಂಚಿಕೆ ಹಾಗೂ ಸಮನ್ವಯ ಸಮಿತಿ ಕುರಿತು ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ರಚನೆ ಹಿನ್ನೆಲೆಯಲ್ಲಿ ಚರ್ಚೆಗಳು ಅಗತ್ಯ. ಅನೇಕ ಜನರಿಗೆ ಸಚಿವರಾಗಬೇಕೆಂಬ ಆಕಾಂಕ್ಷೆ ಸಹಜ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಯಾವುದೇ ಗೊಂದಲವಿಲ್ಲ. ಸಂಪುಟ ರಚನೆ ಬಗ್ಗೆ ನಾಳೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News