ದಾವಣಗೆರೆ: ಅತ್ಯಾಚಾರ ಆರೋಪಿಗೆ 7 ವರ್ಷ ಜೈಲು, 10 ಸಾವಿರ ರೂ.ದಂಡ ವಿಧಿಸಿದ ಹೈಕೋರ್ಟ್

Update: 2018-05-31 15:28 GMT

ಬೆಂಗಳೂರು, ಮೇ 31: ದಾವಣಗೆರೆ ಜಿಲ್ಲೆಯ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡವನ್ನು ವಿಧಿಸಿ ಹೈಕೋರ್ಟ್ ಆದೇಶಿಸಿದೆ.

ಅಪರಾಧಿ ವೇದಮೂರ್ತಿಗೆ ಹೆಚ್ಚಿನ ಶಿಕ್ಷೆಯನ್ನು ನೀಡಬೇಕೆಂದು ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಹಾಗೂ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ಸರಕಾರದ ಪರ ವಾದಿಸಿದ ವಕೀಲ ವಿಜಯಕುಮಾರ್ ಮಜ್ಜಿಗೆ ಅವರು, ಆರೋಪಿ ವೇದಮೂರ್ತಿ, 2010ರ ನವೆಂಬರ್ 12ರಂದು ಯುವತಿ ಶೃತಿ(ಹೆಸರು ಬದಲಾಯಿಸಲಾಗಿದೆ)ಗೆ ನಿಮ್ಮ ತಾಯಿಗೆ ಅಪಘಾತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಲ್ಲದೇ, ತನ್ನದೆ ಕಾರಿನಲ್ಲಿ ಕೂರಿಸಿಕೊಂಡು, ಬಲವಂತವಾಗಿ ತಿರುಪತಿಗೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ಹಾಗೂ ಆ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೀಠಕ್ಕೆ ತಿಳಿಸಿದರು.

ಮದುವೆಯಾದ ಬಳಿಕ ಶೃತಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಮೊದಲ ಪತ್ನಿಯೊಂದಿಗೆ ಹೊಂದಾಣಿಕೆಯಿಂದ ಬದುಕು ಎಂದು ಹೇಳಿದ್ದಾನೆ. ಆದರೆ, ವೇದಮೂರ್ತಿಯ ಮೊದಲ ಪತ್ನಿಯು ಶೃತಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಇದರಿಂದ, ಯುವತಿ ಶೃತಿ, ತಮ್ಮ ಪೋಷಕರ ಮನೆಗೆ ಹೋಗಿ ನಡೆದ ಘಟನೆ ಎಲ್ಲವನ್ನೂ ವಿವರಿಸಿದ್ದಾಳೆ. ಹೀಗಾಗಿ, ಪೋಷಕರು ಜಗಳೂರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದು, ಆರೋಪಿ ವೇದಮೂರ್ತಿ, ಯುವತಿಯ ಮೇಲೆ ಅತ್ಯಾಚಾರ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರೋಪಿ ವೇದಮೂರ್ತಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿ ರೂ.ದಂಡವನ್ನು ವಿಧಿಸಿ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News