ಸಂವಿಧಾನ ವಿರೋಧಿ ರಾಜ್ಯಪಾಲರನ್ನು ತೊಲಗಿಸಬೇಕು: ಚಿಂತಕ ಡಾ.ಜಿ.ರಾಮಕೃಷ್ಣ

Update: 2018-05-31 16:06 GMT

ಬೆಂಗಳೂರು, ಮೇ 31: ವಿಶ್ವಾಸ ಮತ ಸಾಬೀತು ಪಡಿಸಲು 15 ದಿನಗಳ ಕಾಲಾವಕಾಶ ನೀಡಿದ ಸಂವಿಧಾನ ವಿರೋಧಿ ರಾಜ್ಯಪಾಲರನ್ನು ರಾಜ್ಯದಿಂದ ತೊಲಗಿಸಬೇಕು ಎಂದು ಚಿಂತಕ ಡಾ.ಜಿ.ರಾಮಕೃಷ್ಣ ಹೇಳಿದರು.

ಗುರುವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯಿಂದ ಹಮ್ಮಿಕೊಂಡಿದ್ದ ‘ಹೊಸ ಸರಕಾರದ ಹೊಣೆ’ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಘನತೆ ಎತ್ತಿ ಹಿಡಿಯಬೇಕಾದ ರಾಜ್ಯಪಾಲರು ಒಂದು ಪಕ್ಷದ ಪರವಾಗಿ ನಡೆದುಕೊಂಡಿದ್ದಾರೆ. ರಾಜ್ಯದ ಜನತೆ ಅವರನ್ನು ತೊಲಗಿ ಎಂದು ಹೇಳಬೇಕಿತ್ತು. ಜನರ ಪರವಾಗಿ ರಾಜ್ಯ ಸರಕಾರ ಈ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಸಚಿವ ಸಂಪುಟ ರಚನೆಯ ಗೊಂದಲದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ತ್ರಿಕೋನ ಸ್ಪರ್ಧೆ ಬಿಜೆಪಿಗೆ ವರದಾನ. ಹೀಗಾಗಿ, ಸಮ್ಮಿಶ್ರ ಸರಕಾರ ಜನರ ನಿರ್ದಿಷ್ಟ ಸಮಸ್ಯೆಗಳನ್ನು ಕ್ರೋಡೀಕರಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದರು.

ಸಚಿವ ಸಂಪುಟ ರಚನೆ ಮಾಡಿ ಖಾತೆ ಹಂಚಿಕೆ ಮಾಡಲು ಆಗಿಲ್ಲ. ಇನ್ನು ಸರಕಾರ ನಿಲ್ಲುತ್ತದೆಯೇ ಎಂಬ ಬಗ್ಗೆ ಅನುಮಾನವಿದೆ. ಈ ಗೊಂದಲಕ್ಕೆ ತೆರೆ ಎಳೆದು ಒಮ್ಮತದ ಅಭಿಪ್ರಾಯಕ್ಕೆ ಬಂದು ಜನಪರ ಯೋಜನೆಗಳನ್ನು ರೂಪಿಸಿ ಜನರಲ್ಲಿ ಭರವಸೆ ಮೂಡಿಸಲು ಸಮ್ಮಿಶ್ರ ಸರಕಾರ ಮುಂದಾಗಬೇಕಿದೆ ಎಂದರು.

ಚುನಾವಣೆಯಲ್ಲಿ ಜಾತಿ ಆಧಾರಿತ ರಾಜಕಾರಣಕ್ಕೆ ಹೆಚ್ಚು ಮಹತ್ವನೀಡಲಾಗುತ್ತಿದೆ. ಫ್ಯಾಶಿಸ್ಟ್ ಶಕ್ತಿಗಳ ಆಕ್ರಮಣಕ್ಕೆ ಕಡಿವಾಣ ಹಾಕಿ ಶಾಂತಿಯುತ ಸಮಾಜ ನಿರ್ಮಾಣ ಮಾಡುವತ್ತ ಗಮನ ನೀಡಬೇಕು.

ಆರ್‌ಟಿಇ ಕಾಯಿದೆ ಖಾಸಗಿ ಶಾಲೆಗಳ ಪರ ನೀತಿಯಾಗಿದೆ. ಹೀಗಾಗಿ, ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು. ಇನ್ನು, ನೀಟ್ ಪರೀಕ್ಷೆ ಹೆಸರಿನಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದನ್ನು ವಿರೋಧಿಸಿ ಫೆಡರಲಿಸಂ ನೀತಿ ರೂಪಿಸಿ ಬೇರೆ ರಾಜ್ಯಗಳ ಸಹಕಾರದಿಂದ ಶಕ್ತಿ ತುಂಬಲು ಸರಕಾರ ಮುಂದಾಗಬೇಕು ಎಂದರು.

ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಅವಸರದಿಂದ ತೆಗೆದುಕೊಳ್ಳುವ ತೀರ್ಮಾನದಿಂದ ಸಮ್ಮಿಶ್ರ ಸರಕಾರ ಅಲ್ಪಾಯುಷಿಯಾಗುತ್ತದೆ. ಹೀಗಾಗಿ, ಬಹಳ ತಾಳ್ಮೆಯಿಂದ ಕುಳಿತು ವಿಚಾರಗಳನ್ನು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಹೇಳಿದರು.

ಜನ-ಸೇವೆಯೇ ಸರಕಾರದ ಗುರಿಯನ್ನಾಗಿಸಿ ಅರ್ಥಪೂರ್ಣವಾಗಿ ಸರಕಾರ ನಡೆಸಬೇಕಾದರೆ ರಾಜ್ಯದ ಬಗ್ಗೆ ಕಳಕಳಿಯಿರುವ ತಜ್ಞರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಬೇಕು. ಹೀಗಾದಾಗ ಮಾತ್ರ ಸಮ್ಮಿಶ್ರ ಸರಕಾರ 5 ವರ್ಷ ಪೂರೈಸಲು ಸಾಧ್ಯ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ಡಾ.ರಾಜಪ್ಪ ದಳವಾಯಿ, ಪರ್ತಕರ್ತರಾದ ಎನ್.ಎ.ಎಂ. ಇಸ್ಮಾಯಿಲ್, ಆರ್.ಜಿ.ಹಳ್ಳಿ ನಾಗರಾಜ, ಕಾಂ.ವರಲಕ್ಷ್ಮಿ ಸೇರಿ ಪ್ರಮುಖರಿದ್ದರು.

ಇತ್ತೀಚಿನ ರಾಜಕೀಯ ವಿದ್ಯಮಾನಗಳಲ್ಲಿ ಒಂದು ಪಕ್ಷದ ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ಹೋಗಿ ಬರುವುದು ಹೆಚ್ಚಾಗುತ್ತಿದೆ. ಇದರಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ತೊಡಕಾಗುತ್ತದೆ ಎಂಬುದನ್ನು ಎರಡೂ ಪಕ್ಷಗಳು ಮನಗಾಣಬೇಕು.
-ಡಾ.ಜಿ.ರಾಮಕೃಷ್ಣ, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News