ಸಾಮರ್ಥ್ಯ-ದಕ್ಷತೆಯಿಂದ ಯುವ ವಕೀಲರಿಗೆ ಯಶಸ್ಸು ಸಾಧ್ಯ: ನ್ಯಾ.ಬಿ.ಎಸ್.ಪಾಟೀಲ್
ಬೆಂಗಳೂರು, ಮೇ 31: ಯುವ ವಕೀಲರು ತಮ್ಮ ಸಾಮರ್ಥ್ಯ ಮತ್ತು ದಕ್ಷತೆ ಮೂಲಕ ವೃತ್ತಿಯಲ್ಲಿ ನಿರಂತರ ಶ್ರಮ ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದ್ದಾರೆ.
ಹದಿನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ಗುರುವಾರ ನಿವೃತ್ತಿ ಹೊಂದಿದರು. ಬೆಂಗಳೂರು ವಕೀಲರ ಸಂಘವು ಅವರಿಗೆ ನೀಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರು ವಕೀಲರ ಸಂಘವು ದೇಶದಲ್ಲೇ ಘನತೆ ಹೊಂದಿದ ಸಂಘವಾಗಿದೆ. ಅಂತೆಯೇ ಇಲ್ಲಿನ ನ್ಯಾಯಮೂರ್ತಿಗಳೂ ಕೂಡಾ ನ್ಯಾಯಾಂಗದ ಘನತೆ ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ವಕೀಲರ ವೈಯಕ್ತಿಕ ಶ್ರಮ ಸಾಂಘಿಕ ಫಲಶೃತಿಗೆ ನಾಂದಿಯಾಗಬೇಕು. ಇದರಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದರು.
ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮಾತನಾಡಿ, ಬಿ.ಎಸ್. ಪಾಟೀಲರ ನಿವೃತ್ತಿ ನಂತರದ ಜೀವನ ಸುಖವಾಗಿರಲಿ ಎಂದು ಕೋರಿದರು.
ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ಕರ್ನಾಟಕ ಹೈಕೋರ್ಟ್ ಹಿಂದೆಂದೂ ಕಂಡರಿಯದ ನ್ಯಾಯಮೂರ್ತಿಗಳ ಕೊರತೆ ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜೂನ್ ತಿಂಗಳಿನಲ್ಲಿ ಮತ್ತೊಬ್ಬ ನ್ಯಾಯಮೂರ್ತಿ ನಿವೃತ್ತರಾಗುತ್ತಿದ್ದಾರೆ. ಶೀಘ್ರವೇ ಇನ್ನಿಬ್ಬರು ಹೊಸ ನ್ಯಾಯಮೂರ್ತಿಗಳು ನೇಮಕಗೊಳ್ಳುವ ಸಾಧ್ಯತೆಯಿದೆ. ಈ ದಿಸೆಯಲ್ಲಿನ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ ಎಂದರು. ಪ್ರಧಾನ ಕಾರ್ಯದರ್ಶಿ ಎಂ.ಎನ್. ಗಂಗಾಧರಯ್ಯ, ಹಿರಿಯ ವಕೀಲ ಉದಯ ಹೊಳ್ಳ ಉಪಸ್ಥಿತರಿದ್ದರು.