ಬಸ್ ನಿಲ್ದಾಣಗಳಲ್ಲಿ ಧೂಮಪಾನ ನಿಷೇಧ ಕಾರ್ಯಕ್ರಮ: ನಾಲ್ಕ ವರ್ಷದಲ್ಲಿ 2.30 ಕೋಟಿ ರೂ.ದಂಡ ವಶ

Update: 2018-05-31 16:10 GMT

ಬೆಂಗಳೂರು, ಮೇ 31: ಕಳೆದ ನಾಲ್ಕು ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳ ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡುವವರಿಂದ ಕಳೆದ ನಾಲ್ಕು ವರ್ಷದಲ್ಲಿ ಅಂದಾಜು 1,14,997 ಪ್ರಯಾಣಿಕರಿಂದ 2.30ಕೋಟಿ ರೂ.ದಂಡ ವಶಪಡಿಸಿಕೊಳ್ಳಲಾಗಿದೆ.

ಕೆಎಸ್ಸಾರ್ಟಿಸಿ ಸಂಸ್ಥೆಯು ತಂಬಾಕು ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತಂಬಾಕು ನಿಷೇಧ ಕುರಿತು ಕೆಎಸ್ಸಾರ್ಟಿಸಿ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳನ್ನು ದೇಶದ ಇತರೆ ಯಾವುದೆ ಸಾರಿಗೆ ನಿಗಮಗಳಲ್ಲಿ ಕಂಡುಬರುವುದಿಲ್ಲವೆಂದು ಕೆಎಸ್ಸಾರ್ಟಿಸಿ ನಿರ್ದೇಶಕ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ತಂಬಾಕು ನಿಷೇಧ ಕಾರ್ಯಕ್ರಮ: ಕೆಎಸ್ಸಾರ್ಟಿಸಿ ಸಂಸ್ಥೆಯು ತಂಬಾಕು ನಿಷೇಧ ಕಾರ್ಯಕ್ರಮಕ್ಕೆ ಸಿಗರೇಟು ಹಾಗೂ ತಂಬಾಕಿನ ಮೇಲೆ ನೀರನ್ನು ಸುರಿಯುವುದರ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಅವರು, ತಂಬಾಕು ಸೇವನೆಯನ್ನು ತಡೆಯಲು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ವಿಭಾಗೀಯ ಕಚೇರಿಗಳು, ಘಟಕಗಳು, ಕಾರ್ಯಾಗಾರಗಳು, ತರಬೇತಿ ಕೇಂದ್ರಗಳಲ್ಲಿ ಧೂಮಪಾನ ನಿಷೇಧಿತ ಪ್ರದೇಶ. ಇಲ್ಲಿ ಧೂಮಪಾನ ಮಾಡುವುದು ಅಪರಾಧ, ಉಲ್ಲಂಘನೆಯಾದಲ್ಲಿ 200ರೂ.ವರೆಗೆ ದಂಡ ವಿಧಿಸಲಾಗುವುದು ಎಂಬ ಫಲಕಗಳನ್ನು ಪ್ರದರ್ಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತಿ ದಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 1 ರಿಂದ 1.25 ಲಕ್ಷ ಜನ ಪ್ರಯಾಣಿಸುತ್ತಾರೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ, ಮಾರಾಟ, ಬಳಕೆಯನ್ನು ಸಂಪೂರ್ಣ ನಿಷೇಧಿಸಿದ್ದು ತಂಬಾಕು ಸೇವನೆ ವಿರುದ್ಧ ನಮ್ಮ ಸಾರಿಗೆ ಸಂಸ್ಥೆಯ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ತಂಬಾಕು ಉಪಯೋಗಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಕೆಎಸ್ಸಾರ್ಟಿಸಿ ಮುಖ್ಯ ಅಭಿಯಂತರ ಡಾ.ಕೆ.ರಾಮಮೂರ್ತಿ, ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ರಾವ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News