ಬಂಜಾರ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲು ಒತ್ತಾಯ

Update: 2018-05-31 16:32 GMT

ಬೆಂಗಳೂರು, ಮೇ 31: ಬಂಜಾರ(ಲಂಬಾಣಿ) ಸಮುದಾಯದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಬಂಜಾರ ಸಮುದಾಯದ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿತೈಷಿಗಳು ಒತ್ತಾಯಿಸಿದ್ದಾರೆ.

ನಗರದಲ್ಲಿ ಶಾಸಕರ ಭವನದಲ್ಲಿ ಬಂಜಾರ ಸಮುದಾಯಕ್ಕೆ ಸಚಿವ ಸಂಪುಟದ ಸ್ಥಾನ ನೀಡಲು ಒತ್ತಾಯಿಸಿ ಆಯೋಜಿಸಿ ಹಕ್ಕೊತ್ತಾಯ ಸಭೆಯಲ್ಲಿ, ರಾಜ್ಯದಲ್ಲಿ ಮೂವತ್ತು ಲಕ್ಷದಷ್ಟಿರುವ ಬಂಜಾರ (ಲಂಬಾಣಿ) ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದೆ ನಿಜವಾದ ಸಾಮಾಜಿಕ ನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಗಂಭೀರವಾಗಿ ಚಿಂತಿಸಬೇಕು ಎಂದು ಸಮುದಾಯ ಮುಖಂಡರು ಹಕ್ಕೊತ್ತಾಯ ಮಂಡಿಸಿದರು.

ಈ ವೇಳೆ ಸಮುದಾಯದ ಮುಖಂಡ ಅನಂತ್ ನಾಯಕ್ ಮಾತನಾಡಿ,ಲಂಬಾಣಿ ತಾಂಡಾಗಳು ಇನ್ನೂ ಕಂದಾಯ ಗ್ರಾಮಗಳಾಗಿಲ್ಲ. ಮಕ್ಕಳ ಮಾರಾಟ, ಮಹಿಳೆಯರ ಮಾರಾಟ, ವಲಸೆ, ದೌರ್ಜನ್ಯ, ಅನಾರೋಗ್ಯ, ಅನಕ್ಷರತೆ, ಅಪೌಷ್ಟಿಕತೆ, ಸಮಾನ ಪ್ರಾತಿನಿಧ್ಯ ಇತ್ಯಾದಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಅಗತ್ಯ ನೀತಿ ರೂಪಿಸಬೇಕಿದೆ. ಶೋಷಿತ ಸಮುದಾಯಗಳ ವಿಮೋಚನೆಗಾಗಿ ನೀತಿ ನಿರೂಪಿಸಲಾಗುವ ಸಚಿವ ಸಂಪುಟದಲ್ಲಿ ಲಂಬಾಣಿ ಜನಾಂಗದವರು ಇರುವಂತಾದರೆ ಅದುವೇ ನಿಜವಾದ ಸಾಮಾಜಿಕ ನ್ಯಾಯವಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಬಂಜಾರ ಸಮುದಾಯದ ಮುಖಂಡರಾದ ಡಿ.ರಾಮನಾಯ್ಕ, ಅನಂತನಾಯ್ಕ, ಡಾ.ಎ.ಆರ್.ಗೊವೀಂದಸ್ವಾಮಿ, ಇಂದ್ರನಾಯ್ಕಾ, ಭೋಜ್ಯನಾಯ್ಕಾ, ರಾಜನಾಯ್ಕಾ, ಲಿಂಗಾನಾಯ್ಕ, ಮಾದೇವನಾಯ್ಕಾ, ವಿಜಯ್ ಜಾದವ್ ಮತ್ತಿತರರು ಭಾಗವಹಿಸಿದ್ದರು.

ಹಕ್ಕೊತ್ತಾಯಗಳು
-ರಾಜ್ಯ ಸಚಿವ ಸಂಪುಟದಲ್ಲಿ ಬಂಜಾರ ಸಮುದಾಯಕ್ಕೆ ಸ್ಥಾನ ನೀಡಬೇಕು.
-ಸರಕಾರದ ಅಡಿಯಲ್ಲಿರುವ ನಿಗಮ, ಮಂಡಳಿ, ಆಯೋಗ, ವಿವಿಗಳ ಸಿಂಡಿಕೇಟ್ಗಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳ ನೇಮಕ ಪ್ರಕ್ರಿಯೆಯಲ್ಲಿ ಲಂಬಾಣಿ ಸಮುದಾಯದ ಅರ್ಹ ವ್ಯಕ್ತಿಗಳಿಗೆ ಆದ್ಯತೆ ನೀಡಬೇಕು.
-ರಾಜ್ಯದ ಎಸ್ಸಿ, ಎಸ್ಟಿ ಸಮುದಾಯದ ನೌಕರರಿಗೆ ಹಿಂಭಡ್ತಿ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಲು ರಾಜ್ಯ ಸರಕಾರ ಮುಂದಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News