ಯುವ ನಿರ್ದೇಶಕರಿಗಾಗಿ ಕಿರುಚಿತ್ರ ಸ್ಪರ್ಧೆ

Update: 2018-05-31 16:19 GMT

ಬೆಂಗಳೂರು, ಮೇ 31: ಯುವ ನಿರ್ದೇಶಕರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆಯುಷ್ ಟಿವಿ ‘ನಾಳೆಯ ನಿರ್ದೇಶಕರು’ ಎಂಬ ವಿನೂತನ ಕಿರುಚಿತ್ರ ಸ್ಪರ್ಧೆ ಆಯೋಜಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪರ್ಧೆಯ ಜ್ಯೂರಿ ಆನಂದ್ ಬಾಬು, ಅನೇಕ ಪ್ರತಿಭಾವಂತ ನಿರ್ದೇಶಕರು 5 ರಿಂದ 30 ನಿಮಿಷದವರೆಗೂ ವಿವಿಧ ವಿಷಯಗಳನ್ನಾಧರಿಸಿ ಕಿರುಚಿತ್ರಗಳನ್ನು ತಯಾರಿಸಿ ಯೂಟ್ಯೂಬ್, ಫೇಸ್‌ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇಂತಹ ಪ್ರತಿಭಾನ್ವಿತ ನಿರ್ದೇಶಕರುಗಳಿಗೆ ಉತ್ತೇಜನ ನೀಡಲು ಆಯುಷ್ ಟಿವಿ ಮುಂದಾಗಿದೆ ಎಂದರು.

ನಿರ್ದೇಶಕರ ಸ್ಪರ್ಧೆಯಲ್ಲಿ ರಾಜ್ಯದ ಜನತೆ ಸಹ ಅಂಕಗಳನ್ನು ನೀಡುವ ಅವಕಾಶ ಕಲ್ಪಿಸಲಾಗಿದೆ. ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ಚಿತ್ರಗಳು ಇಷ್ಟವಾದಲ್ಲಿ ಲೈಕ್ ಬಟನ್ ಒತ್ತುವ ಮೂಲಕ ಚಿತ್ರಕ್ಕೆ ಅಂಕಗಳನ್ನು ನೀಡಬಹುದಾಗಿದೆ ಹಾಗೂ ಫೇಸ್‌ಬುಕ್‌ನಲ್ಲಿಯೂ ಸಹ ಈ ಅವಕಾಶವಿದೆ ಎಂದು ತಿಳಿಸಿದರು.

ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಉತ್ತಮ ನಿರ್ದೇಶಕ, ಉತ್ತಮ ನಾಯಕ ನಟ, ಉತ್ತಮ ನಾಯಕ ನಟಿ, ಉತ್ತಮ ಸಂಗೀತ, ನಿರ್ದೇಶಕ, ಗಾಯಕ, ಪೋಷಕ ನಟ-ನಟಿ, ಛಾಯಾಗ್ರಾಹಕ, ನಿರೂಪಣೆ, ಕಥೆ, ಹಾಸ್ಯಚಿತ್ರ, ಸಂಕಲನ ಹಾಗೂ ಉತ್ತಮ ಸಂಭಾಷಣೆಗೆ ಪ್ರಶಸ್ತಿ ನೀಡಲಾಗುವುದು ಎಂದು ವಿವರಿಸಿದರು.

ಸ್ಪರ್ಧೆಯಲ್ಲಿ ಆಯ್ಕೆಯಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡುವುದರ ಜೊತೆಗೆ ಆಯ್ಕೆಯಾಗಿರುವ ಚಿತ್ರಗಳನ್ನು ಜೂ. 3 ರಿಂದ ಬೆಳಗ್ಗೆ 11 ಗಂಟೆಗೆ ಹಾಗೂ ರಾತ್ರಿ 9 ಗಂಟೆಗೆ ಆಯುಷ್ ಟಿವಿಯಲ್ಲಿ ಮರುಪ್ರಸಾರ ಮಾಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News