ರಾಜ್ಯದ ನೂತನ ಅಡ್ವೋಕೇಟ್ ಜನರಲ್ ಆಗಿ ಉದಯ ಹೊಳ್ಳ ನೇಮಕ

Update: 2018-05-31 16:26 GMT

ಬೆಂಗಳೂರು, ಮೇ 31: ರಾಜ್ಯದ ನೂತನ ಅಡ್ವೋಕೇಟ್ ಜನರಲ್ ಆಗಿ ಹಿರಿಯ ವಕೀಲ ಉದಯ ಹೊಳ್ಳ ಅವರು ನೇಮಕವಾಗಿದ್ದು, ಶುಕ್ರವಾರ(ಜೂನ್ 01) ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಹಿಂದಿನ ಕಾಂಗ್ರೆಸ್ ಸರಕಾರದ ಬದಲಾವಣೆಯಾದ ಹಿನ್ನೆಲೆಯಲ್ಲಿ ಹಿರಿಯ ವಕೀಲ ಮಧುಸೂದನ್ ಆರ್.ನಾಯಕ್ ಅವರು ಅಡ್ವೊಕೇಟ್ ಜನರಲ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ದಿನವೇ ಅಡ್ವೋಕೇಟ್ ಜನರಲ್ ಸ್ಥಾನಕ್ಕೆ ಹಿರಿಯ ವಕೀಲ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ ಪ್ರಭುಲಿಂಗ ಕೆ.ನಾವಡಗಿ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಮೇ 17ರಂದು ಆದೇಶ ಮಾಡಿದ್ದರು.

ತದನಂತರ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾದ ಹಿನ್ನೆಲೆಯಲ್ಲಿ ಹಿರಿಯ ವಕೀಲ ಉದಯ ಹೊಳ್ಳ ಅವರನ್ನು ರಾಜ್ಯ ಅಡ್ವೋಕೇಟ್ ಜನರಲ್ ಹುದ್ದೆಗೆ ನೇಮಕ ಮಾಡಲಾಗಿದ್ದು, ಅವರು ಶುಕ್ರವಾರ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದರೊಂದಿಗೆ ನಾಲ್ಕನೇ ಬಾರಿಗೆ ಉದಯ ಹೊಳ್ಳ ಅವರು ರಾಜ್ಯ ಅಡ್ವೋಕೇಟ್ ಜನರಲ್ ಹುದ್ದೆಗೆ ಏರಿದಂತಾಗಿದೆ. ಈ ಹಿಂದೆ ಮೂರು ಬಾರಿ ಅವರು ಅಡ್ವೋಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಮೊದಲು ಬಾರಿಗೆ 2006ರ ಎ.10ರಿಂದ 2007ರ ಅ.29ರವರೆಗೆ, ಎರಡನೇ ಬಾರಿ 2007ರ ಅ.16ರಿಂದ 2007ರ ನ.22ರವರೆಗೆ, 2008ರ ಜೂನ್ 2ರಿಂದ 2009ರ ಜೂನ್ 24ರವರೆಗೆ ಉದಯ ಹೊಳ್ಳ ಅವರು ಅಡ್ವೋಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News