ಬೆಂಗಳೂರು: ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ನಡಿಗೆ

Update: 2018-05-31 16:30 GMT

ಬೆಂಗಳೂರು, ಮೇ 31: ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ಜನತೆಗೆ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಇಲಾಖೆವತಿಯಿಂದ ನಗರದ ಆನಂದ ರಾವ್ ವೃತ್ತದಿಂದಾಗಿ ನಗರದ ಫ್ರೀಡಂ ಪಾರ್ಕ್‌ವರೆಗೆ ವಾಕಥಾನ್ ಜಾಗೃತಿ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಗುರುವಾರ ನಗರದ ವಿವಿಧ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು ತಂಬಾಕು ಕುರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಹಿಡಿದು, ಉತ್ತಮ ಆರೋಗ್ಯಕ್ಕೆ ತಂಬಾಕು ತ್ಯಜಿಸಿ, ಸಿಗರೇಟ್ ಬಿಡಿ ಆರೋಗ್ಯ ವೃದ್ಧಿಸಿ ಎಂದು ಘೊಷಣೆಗಳನ್ನು ಕೂಗುತ್ತಾ ಜಾಥಾದಲ್ಲಿ ಭಾಗವಹಿಸಿದ್ದರು.

ಈ ವೇಳೆ ಕ್ಯಾನ್ಸರ್ ಪೀಡಿತೆ ನಳಿನಿ ಮಾತನಾಡಿ, ನನ್ನ ಪತಿ ಸಿಗರೇಟು ಸೇದುತ್ತಿದ್ದ ಪರಿಣಾಮವಾಗಿ ನಾನು ಗಂಟಲು ಕ್ಯಾನ್ಸರ್ ರೋಗಕ್ಕೆ ತುತ್ತಾದೆ. ಈಗ ನನ್ನ ಧ್ವನಿ ಪಟ್ಟೆಗೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಿದ್ದಾರೆ. ನನ್ನದಲ್ಲದ ತಪ್ಪಿಗೆ ನನ್ನ ಧ್ವನಿ ಕಳೆದುಕೊಂಡಿದ್ದೇನೆ ಎಂದು ತಮ್ಮ ನೋವನ್ನು ತೋಡಿಕೊಂಡರು.

ಪೋಷಕರು ತಮ್ಮ ಮಕ್ಕಳನ್ನು ಆಸ್ಥೆಯಿಂದ ಸಾಕುತ್ತಾರೆ. ಆದರೆ, ಮಕ್ಕಳು ಕಾಲೇಜು ಹಂತಕ್ಕೆ ಹೋಗುತ್ತಿದ್ದಂತೆ ದುಶ್ಚಟಗಳ ದಾಸರಾಗುತ್ತಿದ್ದಾರೆ. ತಂಬಾಕು ಸೇವನೆ ಫ್ಯಾಷನ್ ಆಗುತ್ತಿರುವುದು ದುರಂತ. ಹೀಗಾಗಿ ಆರೋಗ್ಯ ಸಂಸ್ಥೆಗಳು ಸೇರಿದಂತೆ ಸಾಮಾಜಿಕ ಸಂಘಟನೆಗಳು ತಂಬಾಕು ಸೇವನೆಯಿಂದಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ತಂಬಾಕು ಸೇವನೆಯಲ್ಲಿ ಯುವ ಜನತೆಯ ಪ್ರಮಾಣ ಹೆಚ್ಚುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಈ ಅಪಾಯಕಾರಿ ಬೆಳವಣಿಗೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಿ ತಂಬಾಕು ಉತ್ಪನ್ನಗಳ ದರಗಳನ್ನು ಮತ್ತಷ್ಟು ಹೆಚ್ಚಳ ಮಾಡಬೇಕು ಎಂದು ತಿಳಿಸಿದರು.

ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಸೇವನೆ ನಿಷೇಧವೆಂದು ನಿಯಮ ಜಾರಿಯಾಗಿದೆ. ಈ ಸಂಬಂಧ ಸೂಚನಾ ಫಲಕಗಳನ್ನು ಹಾಕಲಾಗುತ್ತದೆ. ಆದರೂ ಜನತೆ ಕಾನೂನುಗಳನ್ನು ಗಾಳಿಗೆ ತೂರಿ ಸೂಚನಾ ಫಲಕಗಳ ಬಳಿಯೆ ತಂಬಾಕು ಸೇವನೆ ಮಾಡುತ್ತಾರೆ. ಇಂತಹ ಮನಸ್ಥಿತಿಯನ್ನು ಬದಲಾಯಿಸಿ ಶಿಸ್ತು ಬದ್ಧ ಜೀವನದ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಿಸಿದರು. ಈ ವೇಳೆ ತುಂಬಾಕಿನಿಂದಾಗುವ ದುಷ್ಪರಿಣಾಮಗಳ ಕುರಿತು ಕಿರು ನಾಟಕವನ್ನು ಪ್ರದರ್ಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News