18 ವರ್ಷಗಳಿಂದ ಹಾಸಿಗೆಗೆ ಅಂಟಿಕೊಂಡಿರುವ ಇರ್ಫಾನ್ ಹಫೀಝ್ ಮೂರು ಖ್ಯಾತ ಪುಸ್ತಕಗಳ ಲೇಖಕ!

Update: 2018-06-01 09:24 GMT

ಈ ಯುವಕನ ತೋರು ಬೆರಳೊಂದನ್ನು ಬಿಟ್ಟು ದೇಹದ ಯಾವುದೇ ಅಂಗಗಳೂ ಚಲನೆಯಲ್ಲಿಲ್ಲ, ವೆಂಟಿಲೇಟರ್ ಇಲ್ಲದೆ ಉಸಿರಾಡಲೂ ಈತನಿಗೆ ಸಾಧ್ಯವಿಲ್ಲ. ವೈದ್ಯರು ಈತ 17 ವರ್ಷಗಳಷ್ಟೇ ಬದುಕಬಲ್ಲ ಎಂದು ನಿಶ್ಚಯವಾಗಿ ಹೇಳಿದ್ದರೂ, 17 ವರ್ಷಗಳ ನಂತರ ಇನ್ನೂ 17 ವರ್ಷಗಳನ್ನು ಈತ ಈಗಾಗಲೇ ಪೂರೈಸಿದ್ದಾನೆ. ನಡೆದಾಡಲು, ಕುಳಿತುಕೊಳ್ಳಲು, ಎದ್ದು ನಿಲ್ಲಲು, ಕೊನೆಯ ಪಕ್ಷ ವೀಲ್ ಚೇರ್ ನಲ್ಲಿ ಕೂರಲು ಈತನಿಗೆ ಸಾಧ್ಯವಿಲ್ಲ. 18 ವರ್ಷಗಳಿಂದ ಹಾಸಿಗೆಗೆ ಅಂಟಿಕೊಂಡಿದ್ದಾನೆ. ಆದರೆ ಉತ್ಸಾಹದ ಚಿಲುಮೆಯಂತಿರುವ ಈ ಯುವಕ ಒಂದೇ ಒಂದು ಬೆರಳಿನ ಸಹಾಯದಿಂದ ಮೂರು ಪುಸ್ತಕಗಳನ್ನು ಬರೆದಿದ್ದಾನೆ. ಅದೂ ಮೊಬೈಲ್ ಹಾಗು ಲ್ಯಾಪ್ ಟಾಪನ್ನು ಒಂದೇ ಬೆರಳಲ್ಲಿ ಬಳಸಿ!.

ಈತನ ಹೆಸರು ಇರ್ಫಾನ್ ಹಫೀಝ್. ಶ್ರೀಲಂಕಾ ನಿವಾಸಿ. ಸಣ್ಣ ವಯಸ್ಸಿನಲ್ಲಿ ಎಲ್ಲಾ ಮಕ್ಕಳಂತಿದ್ದ ಇರ್ಫಾನ್ ಗೆ 11ನೆ ವಯಸ್ಸಿಗಾಗಲೇ ನಡೆದಾಡಲು, ಓಡಲು ಸಮಸ್ಯೆಯಾಯಿತು. ಈತನ ಕಾಲುಗಳು ನಡೆದಾಡಲಾಗಲೀ, ಓಡಲಾಗಲೀ ಎಲ್ಲಾ ಮಕ್ಕಳಂತೆ ಸಹಕರಿಸುತ್ತಿರಲಿಲ್ಲ. ಮೊದಮೊದಲು ಇರ್ಫಾನ್ ತಂದೆ ಇದನ್ನು ನಿರ್ಲಕ್ಷಿಸಿದ್ದರೂ ನಂತರ ನನ್ನ ಮಗ ಎಲ್ಲಾ ಮಕ್ಕಳ ಹಾಗೆ ಸಹಜವಾಗಿಲ್ಲ ಎನ್ನುವುದು ಅವರಿಗೆ ಅರ್ಥವಾಗಿತ್ತು. 12ನೆ ವಯಸ್ಸಿಗೇ ಇರ್ಫಾನ್ ವೀಲ್ ಚೇರನ್ನು ಅವಲಂಬಿಸುವಂತಾಯಿತು.

ಕೊನೆಗೆ ಇರ್ಫಾನ್ ಚಿಕಿತ್ಸೆಯೇ ಇಲ್ಲದ 'ದೂಶೆನ್ ಮಸ್ಕ್ಯುಲರ್ ಡಿಸ್ಟ್ರೊಫಿ' (ಡಿಎಂಡಿ) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿಯೂ, ನಿಮ್ಮ ಪುತ್ರನ ಆಯಸ್ಸು 17 ಎಂದೂ ವೈದ್ಯರು ಹೇಳಿದ್ದರು. ಆಕಾಶವೇ ಕಳಚಿಬಿದ್ದಂತಹ ಸುದ್ದಿ ಕೇಳಿದ್ದರೂ ಇರ್ಫಾನ್ ತಂದೆ ತನ್ನೊಳಗಿನ ಸಂಕಟವನ್ನು ಎಂದೂ ತೋರಿಸಿಕೊಂಡಿರಲಿಲ್ಲ ಎಂದು ಇರ್ಫಾನ್ ಹೇಳುತ್ತಾರೆ.

16 ವರ್ಷಗಳವರೆಗೆ ವೀಲ್ ಚೇರ್ ಮೇಲೆ ಕಾಲ ಕಳೆದ ಇರ್ಫಾನ್ ಗೆ ನಂತರ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತು. ಆನಂತರ ಹಾಸಿಗೆ ಬಿಟ್ಟು ಏಳಲು ಸಾಧ್ಯವಾಗಲಿಲ್ಲ. ಹಲವು ದಿನಗಳ ಕಾಲ ಮಲಗಿದಲ್ಲಿಯೇ ಇದ್ದ ಪರಿಣಾಮ ಕೀವು ಕಾಣಿಸಿಕೊಂಡಿತು. ಆ ಸಮಯದಲ್ಲೆಲ್ಲಾ ಇರ್ಫಾನ್ ತೀವ್ರ ಯಾತನೆ ಅನುಭವಿಸಿದರು. ಇದಾದ ನಂತರ ಇವರನ್ನು ಕಾಡಿದ ಮತ್ತೊಂದು ಸಮಸ್ಯೆ ಉಸಿರಾಟ. ಬರಬರುತ್ತಾ ಇರ್ಫಾನ್ ರಿಗೆ ಉಸಿರಾಟ ಕಷ್ಟವೆನಿಸತೊಡಗಿತು. ಉಸಿರಾಟದ ಸ್ನಾಯುಗಳು ದುರ್ಬಲವಾದುದೇ ಇದಕ್ಕೆ ಕಾರಣ. ನಂತರ ಇರ್ಫಾನ್ ಗಾಗಿ ವೆಂಟಿಲೇಟರ್ ಖರೀದಿಸಲಾಯಿತು. ಈಗಲೂ ಸಹ ಇರ್ಫಾನ್ ವೆಂಟಿಲೇಟರ್ ಸಹಾಯದಿಂದಲೇ ಉಸಿರಾಡುತ್ತಿದ್ದಾರೆ.

ಈ ನಡುವೆ ಇರ್ಫಾನ್ ತನ್ನ ದೇಹದಲ್ಲಿ ಚಲನೆಯಲ್ಲಿರುವ ಏಕೈಕ ಅಂಗವಾದ ತೋರುಬೆರಳನ್ನು ಸಮರ್ಪಕವಾಗಿ ಬಳಸಿಕೊಂಡರು. ಲ್ಯಾಪ್ ಟಾಪ್ ಹಾಗು ಮೊಬೈಲನ್ನು ಸಮರ್ಪಕವಾಗಿ ಬಳಸಿಕೊಂಡು ನ್ಯೂನ್ಯತೆಯನ್ನು ಮೆಟ್ಟಿ ನಿಂತರು. ಇಂಗ್ಲಿಷ್ ಮಾತನಾಡುವುದನ್ನು ಬರೆಯುವುದನ್ನು, ಕಂಪ್ಯೂಟರ್ ಬಳಕೆಯನ್ನು ಮಲಗಿದ್ದಲ್ಲಿಂತಲೇ ಕಲಿತರು. ಪುಸ್ತಕವೊಂದನ್ನು ಬರೆಯಲು ಆರಂಭಿಸಿದರು. ಲ್ಯಾಪ್ ಟಾಪ್ ನಲ್ಲಿ ಬರೆಯುವುದು ಕಷ್ಟವಾದಾಗ ಮೊಬೈಲ್ ನಲ್ಲಿ ಬರೆಯಲು ಆರಂಭಿಸಿದರು. ಸತತ ಪ್ರಯತ್ನದ ಮೂಲಕ ಇರ್ಫಾನ್, “ಸೈಲೆಂಟ್ ಸ್ಟ್ರಗಲ್”, “ಸೈಲೆಂಟ್ ಥಾಟ್ಸ್” ಹಾಗು “ಮೊಮೆಂಟ್ಸ್ ಆಫ್ ಮೆರಿಮೆಂಟ್” ಎನ್ನುವ ಮೂರು ಇಂಗ್ಲಿಷ್ ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಇದರಲ್ಲಿ ಒಂದು ಪುಸ್ತಕ ಬರೆಯಲು ಅವರಿಗೆ ಒಂದು ವರ್ಷ ಬೇಕಾಗಿತ್ತು. ಇವರ ಎಲ್ಲಾ ಪುಸ್ತಕಗಳ ಸಾವಿರಾರು ಸಂಖ್ಯೆಯಲ್ಲಿ ಮಾರಾಟವಾಗಿದೆ ಹಾಗು ಜನಪ್ರಿಯತೆ ಗಳಿಸಿದೆ.

ವೈದ್ಯರು ಹೇಳಿದ್ದ ಆಯಸ್ಸಿನ ಅವಧಿ ಮುಗಿದ 17 ವರ್ಷಗಳ ನಂತರವೂ ಬದುಕಿರುವ, ಜೀವನಪಾಠದ ಬಗೆಗಿನ ಪುಸ್ತಕಗಳನ್ನು ಒಂದೇ ಬೆರಳಿನಲ್ಲಿ ಬರೆದ ಇರ್ಫಾನ್ ರ ಉತ್ಸಾಹ ಸಾವಿಗೇ ಸವಾಲೊಡ್ಡಿದೆ. ನಮ್ಮಿಂದೇನೂ ಸಾಧ್ಯವಿಲ್ಲ, ಎಲ್ಲವನ್ನೂ ನೀಡುವ ದೇವರು ನನಗೆ ಮಾತ್ರ ಕೊರತೆಯನ್ನು ಕೊಟ್ಟಿದ್ದಾನೆ ಎನ್ನುವವರಿಗೆ ಇರ್ಫಾನ್ ನ ತೋರು ಬೆರಳು “ನಿಮಗೂ ಸಾಧ್ಯ” ಎನ್ನುವ ಸ್ಫೂರ್ತಿ ನೀಡುವ ಹಾಗಿದೆ ಎಂದರೆ ತಪ್ಪಾಗಲಾರದು.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News