ಆದಿತ್ಯನಾಥ್ ಸರಕಾರದ ಭ್ರಷ್ಟಾಚಾರವೇ ಪಕ್ಷದ ಸೋಲಿಗೆ ಕಾರಣ : ಬಿಜೆಪಿ ಶಾಸಕರ ಆರೋಪ

Update: 2018-06-01 12:07 GMT

ಲಕ್ನೋ,ಜೂ.1 : ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಸರಕಾರದಲ್ಲಿನ ವ್ಯಾಪಕ ಭ್ರಷ್ಟಾಚಾರವೇ ಪಕ್ಷ ಕೈರಾನ ಲೋಕಸಭಾ ಹಾಗೂ ನೂರ್ಪುರ್ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲಲು ಕಾರಣವೆಂದು ಪಕ್ಷದ ಶಾಸಕರೇ ದೂರಿದ್ದಾರೆ.

ಕೆಲವು ಬಿಜೆಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದರೂ ಆದಿತ್ಯನಾಥ್ ಸರಕಾರ ಭ್ರಷ್ಟಾಚಾರವನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಗೊಪಮವು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶ್ಯಾಮ್ ಪ್ರಕಾಶ್ ಮಾತನಾಡುತ್ತಾ ರಾಜ್ಯ ಸರಕಾರಿ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ ಎಂದು ಅವರು ದೂರಿದ್ದಾರೆ. "ರೈತರು ಸರಕಾರದ ಕಾರ್ಯನಿರ್ವಹಣೆಯ ಬಗ್ಗೆ ತೃಪ್ತಿ ಹೊಂದಿಲ್ಲ, ಮೇಲಾಗಿ ಬಿಜೆಪಿಯ  ಸೋಲಿಗೆ ಹಲವಾರು ಕಾರಣಗಳಿವೆ,'' ಎಂದು ಅವರು ತಿಳಿಸಿದ್ದಾರೆ. ಹಿಂದಿನ ಸರಕಾರದ ಅವಧಿಗೆ ಹೋಲಿಸಿದಾಗ ಈ ಸರಕಾರದ ಅವಧಿಯಲ್ಲಿ  ಭ್ರಷ್ಟಾಚಾರ ಹೆಚ್ಚಾಗಿದೆ,'' ಎಂದೂ ಅವರು ಹೇಳಿದ್ದಾರೆ.

ಬೆರಿಯಾ ಕ್ಷೇತ್ರದ ಶಾಸಕ  ಸುರೇಂದರ ಸಿಂಗ್ ಕೂಡ ಕೈರಾನ ಸೋಲಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. "ಇಲ್ಲಿ ಪ್ರಧಾನಿ ಪ್ರಚಾರ ನಡೆಸಿಲ್ಲ ಆದರೆ ಆದಿತ್ಯನಾಥ್ ಮಾತ್ರ ಪ್ರಚಾರ ನಡೆಸಿದ್ದರು, ಇದೇ ಕಾರಣದಿಂದ ಬಿಜೆಪಿ ಸೋಲು ಕಂಡಿದೆ,'' ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಕೂಡ ರಾಜ್ಯ ಸರಕಾರದಲ್ಲಿನ ಭ್ರಷ್ಟಾಚಾರವೇ ಸೋಲಿಗೆ ಕಾರಣವೆಂದು ಆರೋಪಿಸಿದ್ದಾರೆ. “ಇಡೀ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ, ಜನರಿಗೆ ಕಲ್ಯಾಣ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ,'' ಎಂದು ಅವರು ದೂರಿದ್ಧಾರೆ.

ಎಸ್‍ಬಿಎಸ್‍ಪಿ ಅಧ್ಯಕ್ಷ ಓಂ ಪ್ರಕಾಶ್ ರಾಜಭರ್ ಕೂಡ ಸೋಲಿಗೆ ಇದೇ ಕಾರಣ ನೀಡಿದ್ದಾರೆ. ಮುಖ್ಯಮಂತ್ರಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲೂ ಜನ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News