ಚೆಕ್ ಬೌನ್ಸ್ ಮಾಡಿ ಬಚಾವಾಗುವುದು ಸುಲಭ ಎಂದುಕೊಳ್ಳಬೇಡಿ

Update: 2018-06-01 12:51 GMT

‘ಹಾಸಿಗೆಯಿದ್ದಷ್ಟೇ ಕಾಲು ಚಾಚು’ ಎನ್ನುವ ಹಳೆಯ ನಾಣ್ಣುಡಿಯೊಂದಿದೆ. ನಮ್ಮಲ್ಲಿರುವುದರಲ್ಲಿಯೇ ತೃಪ್ತಿ ಪಟ್ಟುಕೊಳ್ಳಬೇಕು ಎನ್ನವುದು ಇದರ ಸರಳ ಅರ್ಥ. ಇದೇನೋ ಒಳ್ಳೆಯ ಮಾತೇ,ಆದರೆ ಕೆಲವೊಮ್ಮೆ ಹಾಸಿಗೆಯನ್ನು ಮೀರಿ ಕಾಲು ಚಾಚುವ ಅನಿವಾರ್ಯವೂ ಉಂಟಾಗುತ್ತದೆ. ನಾವು ಸಾಲಗಳನ್ನು ಪಡೆಯುವುದು ಇದಕ್ಕೊಂದು ನಿದರ್ಶನವಾಗಿದೆ.

ಮನೆ ಖರೀದಿಗೆ ಅಥವಾ ನಿರ್ಮಾಣಕ್ಕೆ,ವ್ಯಾಪಾರ-ವ್ಯವಹಾರಕ್ಕೆ ಸಾಲ ಮಾಡುವವರು ಅಥವಾ ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ಪಡೆಯುವವರು ಅಥವಾ ತಾವು ನಿಯಮಿತವಾಗಿ ಪಡೆಯುವ ಸೇವೆಗಳ ಶುಲ್ಕವಾಗಿ ಅಥವಾ ಸಾಲದ ಕಂತು ಪಾವತಿಗಾಗಿ ಚೆಕ್‌ಗಳನ್ನು ನೀಡುವುದು ಅಥವಾ ಇಲೆಕ್ಟ್ರಾನಿಕ್ ಕ್ಲಿಯರನ್ಸ್ ಸಿಸ್ಟಮ್(ಇಸಿಎಸ್) ಸೂಚನೆಗೆ ಸಹಿ ಹಾಕುವುದು ಸಾಮಾನ್ಯ. ಆದರೆ ಚೆಕ್ ಅಥವಾ ಇಸಿಎಸ್ ಅಮಾನ್ಯಕ್ಕೆ ಅವಕಾಶ ನೀಡದಂತೆ ಹಣಪಾವತಿಯಲ್ಲಿ ಶಿಸ್ತನ್ನು ಪಾಲಿಸುವುದು ಅತ್ಯಗತ್ಯ ಎನ್ನುವುದೂ ಅವರಿಗೆ ಗೊತ್ತಿರಬೇಕು. ಏಕೆಂದರೆ ಚೆಕ್ ಅಮಾನ್ಯ ಮತ್ತು ಇಸಿಎಸ್ ವೈಫಲ್ಯ ಕ್ರಿಮಿನಲ್ ಅಪರಾಧವಾಗಿದೆ.

ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆಯ ಸೆಕ್ಷನ್ 138 ಚೆಕ್ ಅಮಾನ್ಯ ಪ್ರಕರಣಗಳಿಗೆ ಸಂಬಂಧಿಸಿದೆ. ಪೇಮೆಂಟ್ ಆ್ಯಂಡ್ ಸೆಟ್ಲ್‌ಮೆಂಟ್ಸ್ ಸಿಸ್ಟಮ್ಸ್ ಕಾಯ್ದೆ,2007ರ ಸೆಕ್ಷನ್ 25 ಇಸಿಎಸ್ ಮೂಲಕ ಹಣ ವರ್ಗಾವಣೆಯ ಸೂಚನೆಯ ಅಮಾನ್ಯದ ವಿರುದ್ಧ ಫಲಾನುಭವಿ ಅಥವಾ ಹಣ ಪಾವತಿಯನ್ನು ಪಡೆಯಬೇಕಾದವರಿಗೆ ರಕ್ಷಣೆಯನ್ನು ಒದಗಿಸುತ್ತದೆ.

ವ್ಯಕ್ತಿಯು ಚೆಕ್ ನೀಡಿರಲಿ ಅಥವಾ ಇಸಿಎಸ್ ಸೂಚನೆಗೆ ಸಹಿ ಮಾಡಿರಲಿ,ಆತನ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ಇವು ಅಮಾನ್ಯಗೊಂಡ ಸಂಂದರ್ಭಗಳಲ್ಲಿ ಆತ ಕ್ರಿಮಿನಲ್ ಅಪರಾಧವೆಸಗಿದ್ದಾನೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇವೆರಡೂ ಪ್ರಕರಣಗಳಲ್ಲಿ ಆತನ ಬಾಧ್ಯತೆಗಳು ಒಂದೇ ರೀತಿಯದ್ದಾಗಿರುತ್ತವೆ. ಇಂತಹ ಪ್ರಕರಣಗಳಲ್ಲಿ ಎರಡು ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ ಚೆಕ್/ಇಸಿಎಸ್ ವರ್ಗಾವಣೆಯ ಮೊತ್ತದ ಎರಡು ಪಟ್ಟು ದಂಡ ಅಥವಾ ಜೈಲುಶಿಕ್ಷೆ ಮತ್ತು ದಂಡ ಎರಡನ್ನೂ ಆರೋಪಿಗೆ ವಿಧಿಸಬಹುದಾಗಿದೆ.

 ಯಾವುದೇ ಕಾರಣಕ್ಕೆ ಈಗಿನ ಅಥವಾ ಮುಂದಿನ ದಿನಾಂಕಕ್ಕೆ ಚೆಕ್‌ಗಳನ್ನು ನೀಡಿರುವರು ಅಥವಾ ನಿಗದಿತ ದಿನಾಂಕಗಳಿಗೆ ಇಸಿಎಸ್ ಸೂಚನೆಗಳನ್ನು ನೀಡಿರುವವರು ತಮ್ಮ ಖಾತೆಯಲ್ಲಿ ಅಗತ್ಯ ಹಣವಿಲ್ಲದೆ ಅವು ಅಮಾನ್ಯಗೊಳ್ಳುವ ಸಾಧ್ಯತೆಗಳನ್ನು ಮುಂಗಂಡಿದ್ದರೆ ತಮ್ಮಿಂದ ಹಣ ಪಡೆಯಬೇಕಾಗಿರುವ ವ್ಯಕ್ತಿ/ಸಂಸ್ಥೆಯನ್ನು ಸಂಪರ್ಕಿಸಿ ಹೆಚ್ಚಿನ ಸಮಯಾವಕಾಶವನ್ನು ಕೋರುವುದು ವಿವೇಕದ ನಡೆಯಾಗುತ್ತದೆ. ಚೆಕ್ ಅಥವಾ ಇಸಿಎಸ್ ಅಮಾನ್ಯಗೊಂಡರೆ ಕಾನೂನು ಪ್ರಕ್ರಿಯೆಗಳು ಮುಗಿಯಲು ವರ್ಷಗಟ್ಟಲೆ ಹಿಡಿಯುತ್ತದೆ,ಅಷ್ಟರೊಳಗೆ ಏನಾದರೂ ಮಾಡಬಹುದು ಎಂದು ಕಣ್ಮುಚ್ಚಿಕೊಂಡಿದ್ದರೆ ಅದು ಅವರು ಮಾಡುವ ದೊಡ್ಡ ತಪ್ಪಾಗುತ್ತದೆ.

ನೀವು ಯಾವುದೇ ಸಂಸ್ಥೆಯ ಪಾಲುದಾರ ಅಥವಾ ನಿರ್ದೇಶಕರಾಗಿದ್ದರೆ ಚೆಕ್ ಅಥವಾ ಇಸಿಎಸ್ ಸೂಚನೆಗೆ ಸಹಿ ಹಾಕುವ ಮುನ್ನ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣವಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಕಾನೂನಿನಂತೆ ಸಂಸ್ಥೆಯ ಜೊತೆಗೆ ಚೆಕ್ ಅಥವಾ ಇಸಿಎಸ್ ಸೂಚನೆಗೆ ಸಹಿ ಹಾಕಿದ ವ್ಯಕ್ತಿಯೂ ಬಾಧ್ಯತೆಯನ್ನು ಹೊಂಂದಿರುತ್ತಾನೆ. ಫಲಾನುಭವಿಯು ಚೆಕ್ ಅಥವಾ ಇಸಿಎಸ್‌ಗೆ ಸಹಿ ಹಾಕಿರದ ಇತರ ಪಾಲುದಾರರು/ನಿರ್ದೇಶಕರನ್ನೂ ಕಾನೂನು ಕ್ರಮಕ್ಕೊಳಪಡಿಸಲು ಯತ್ನಿಸಬಹುದು.

ಅಲ್ಲದೆ ಚೆಕ್ ಅಥವಾ ಇಸಿಎಸ್ ಅಮಾನ್ಯದಿಂದ ತೊಂದರೆಗೊಳಗಾದ ಹಣ ಸ್ವೀಕರಿಸಬೇಕಿದ್ದ ವ್ಯಕ್ತಿ ಅಥವಾ ಸಂಸ್ಥೆಯು ನಿಗದಿತ ಅವಧಿಯೊಳಗೆ ಕಾನೂನು ಕ್ರಮಗಳಿಗೆ ಚಾಲನೆ ನೀಡುವುದು ಅತ್ಯಂತ ಮುಖ್ಯವಾಗಿದೆ. ಇಲ್ಲದಿದ್ದರೆ ಕಾನೂನು ಹೋರಾಟ ಲಂಬಿಸುತ್ತದೆ ಮತ್ತು ಕಾನೂನಿನ ಕುಣಿಕೆಯಿಂದ ಪಾರಾಗಲು ಸಾಲಗಾರ ಅಥವಾ ಆರೋಪಿಗೆ ಅವಕಾಶ ನೀಡಿದಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News