ಚಾಲಕನ ಮೇಲೆ ಹಲ್ಲೆ ನಡೆಸಿ ದರೋಡೆ: ನಾಲ್ವರ ಬಂಧನ
ಬೆಂಗಳೂರು, ಜೂ. 1: ಟಿಪ್ಪರ್ ಲಾರಿಯನ್ನು ಅಡ್ಡಗಟ್ಟಿ ಚಾಲಕನಿಗೆ ಬೆದರಿಸಿ ಮೊಬೈಲ್, ನಗದು ಕಸಿದುಕೊಂಡು ಪರಾರಿಯಾಗಿದ್ದ ಆರೋಪ ಪ್ರಕರಣ ಸಂಬಂಧ ನಾಲ್ವರನ್ನು ಇಲ್ಲಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಗೋಪಿ 22), ಸಲ್ಮಾನ್ 26), ಗಂಗಾಧರ್ 23) ಮತ್ತು ನವಾಝ್(28) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ಮೊಬೈಲ್, ಒಂದು ಬೈಕನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ಸಂಬಂಧ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರೆಸಲಾಗಿದೆ.
ಪ್ರಕರಣದ ವಿವರ: ಮೇ 26ರಂದು ಸುಧಾಮ ಕುಮಾರ್ ಎಂಬುವವರು ಮಾರುತಿ ನಗರದಲ್ಲಿ ಟಿಪ್ಪರ್ ಲಾರಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಆರು ಮಂದಿ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಮಾರ್ಗಮಧ್ಯೆ ಟಿಪ್ಪರ್ ಲಾರಿಯನ್ನು ದರೋಡೆಕೋರರು ಅಡ್ಡಗಟ್ಟಿ ಡ್ರಾಪ್ ಪಡೆಯುವ ನೆಪವೊಡ್ಡಿ ಲಾರಿಯನ್ನು ಹತ್ತಿ ಚಾಲಕ ಸುಧಾಮ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್, ನಗದು ಕಸಿದುಕೊಂಡಿದ್ದಾರೆ.
ನಂತರ ಲಾರಿಯನ್ನು ದುಷ್ಕರ್ಮಿಗಳು ಚಾಲನೆ ಮಾಡಿಕೊಂಡು ಹೋಗಿ ಸ್ವಲ್ಪದೂರ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಯಲಹಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.