×
Ad

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ತನಿಖೆಯನ್ನು ಸಮರ್ಥವಾಗಿ ನಡೆಸಿಲ್ಲ: ಸಿಐಡಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಆಕ್ರೋಶ

Update: 2018-06-01 21:32 IST

ಬೆಂಗಳೂರು, ಜೂ.1: ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಮರ್ಥವಾಗಿ ನಡೆಸಿಲ್ಲ. ಒಂದು ತನಿಖಾ ಸಂಸ್ಥೆಯಿಂದ ನಿರೀಕ್ಷಿಸಬಹುದಾದ ವೃತ್ತಿಪರ ತನಿಖೆ ಇಲ್ಲಿ ನಡೆದಿಲ್ಲ. ಈವರೆಗಿನ ವಿದ್ಯಮಾನ ಗಮನಿಸಿದರೆ ತನಿಖೆಯು ಕೇವಲ ಕಣ್ಣೊರೆಸುವ ತಂತ್ರದಂತಿದೆ. ಈವರೆಗೂ ಅಜಿತಾಬ್ ಬದುಕಿದ್ದಾನೋ ಅಥವಾ ಇಲ್ಲವೋ? ಎಂಬುದನ್ನೇ ಕಂಡುಕೊಂಡಿಲ್ಲ ಎಂದು ಸಿಐಡಿ ತನಿಖಾಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಒಂದೊಮ್ಮೆ ದೇಶದ ಹಿತಾಸಕ್ತಿ ವಿರುದ್ಧ ಕೆಲಸ ಮಾಡುವ ಸಂಘಟನೆಗಳ ಕೈಗೆ ಆತ ಸಿಕ್ಕಿಹಾಕಿಕೊಂಡು, ಅವು ಆತನ ಕೌಶಲ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ ಏನು ಮಾಡೋದು? ಎಂದು ಆತಂಕವೂ ವ್ಯಕ್ತಪಡಿಸಿದೆ.

ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು, ಸಿಐಡಿಯ ತನಿಖಾ ವಿಧಾನವನ್ನು ಟೀಕಿಸಿತು.

ವಿಚಾರಣೆ ವೇಳೆ ಸರಕಾರಿ ವಕೀಲರು, ಅಜಿತಾಬ್ ನಾಪತ್ತೆಯಾದ ನಂತರ ಆತನ ಮೊಬೈಲ್ ಕರೆಗಳ ಮಾಹಿತಿ ಒಳಗೊಂಡ ವರದಿಯನ್ನು ಹಾಜರುಪಡಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಅಜಿತಾಬ್ ಮೊಬೈಲ್‌ಗೆ ಯಾರು ಕರೆ ಮಾಡಿದರು? ಆತ ಯಾರಿಗೆ ಕರೆ ಮಾಡಿದ್ದ? ಕರೆ ಮಾಡಿದವರನ್ನು ತನಿಖಾಧಿಕಾರಿಗಳು ಸಂಪರ್ಕಿಸಿದರೇ? ಎಂದು ಪ್ರಶ್ನಿಸಿದರು. ಇದಕ್ಕೆ ಸರಕಾರಿ ವಕೀಲರು ಯಾರನ್ನೂ ಸಂಪರ್ಕಿಸಿಲ್ಲ ಎಂದು ಉತ್ತರಿಸಿದರು.

ಇದರಿಂದ ಕೋಪಗೊಂಡ ನ್ಯಾಯಮೂರ್ತಿಗಳು, ನಾಪತ್ತೆಯಾದ ನಂತರ ಅಜಿತಾಬ್‌ಗೆ ಕರೆ ಮಾಡಿದವರ್ಯಾರು? ಆತ ಯಾರಿಗೆ ಕರೆ ಮಾಡಿದ? ಎಂಬುದು ತಿಳಿದುಕೊಳ್ಳಲಿಲ್ಲ ಎಂದಾದರೆ ಇನ್ಯಾವ ರೀತಿ ತನಿಖೆ ಮಾಡಲಾಗಿದೆ ಎದು ಪ್ರಶ್ನಿಸಿದರು. ಈ ವಿಚಾರಗಳನ್ನು ಸಾಮಾನ್ಯರೂ ಯೋಚಿಸುತ್ತಾರೆ. ತನಿಖಾಧಿಕಾರಿ ಯೋಜಿಸಿಲ್ಲ ಎಂದಾದರೆ ತುಂಬಾ ಆಶ್ಚರ್ಯವಾಗುತ್ತದೆ. ನ್ಯಾಯಾಧೀಶನಾಗಿಯೇ ನಾನು ಇಷ್ಟೆಲ್ಲಾ ದಿಕ್ಕುಗಳಿಂದ ಯೋಚಿಸಬೇಕಾದರೆ? ತನಿಖಾಧಿಕಾರಿಯು ಸಾವಿರಾರು ದಿಕ್ಕುಗಳಿಂದ ಚಿಂತಿಸಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಜಿತಾಬ್ ಈವರೆಗೆ ಪತ್ತೆಯಾಗದಿರುವುದು ನೋಡಿದರೆ, ಯಾರಿಗೆ ಗೊತ್ತು ದೇಶದ ಹಿತಾಸಕ್ತಿ ವಿರುದ್ಧ ಕೆಲಸ ಮಾಡುವ ಸಂಘಟನೆಗಳ ಕೈಗೆ ಆತ ಸಿಕ್ಕಿರಬಹುದೇನೊ? ಮೇಲಾಗಿ ಆತ ಟೆಕ್ಕಿಯಾಗಿದ್ದು, ಆ ಸಂಘಟನೆಗಳು ಆತನ ಕೌಶಲ್ಯವನ್ನು ದೇಶದ ವಿರುದ್ಧ ಬಳಸುತ್ತಿದ್ದರೆ ಏನು ಮಾಡಲು ಸಾಧ್ಯವಿದೆ. ಈಗಿನ ತಂತ್ರಜ್ಞಾನದಲ್ಲಿ ಒಬ್ಬ ವ್ಯಕ್ತಿ ಎಲ್ಲಿದ್ದಾನೆಂಬುದನ್ನು ಶ್ರಮವಿಲ್ಲದೇ ಕಂಡು ಹಿಡಿಯಬಹುದು. ಆದರೆ, ಅಜಿತಾಬ್ ಬದುಕಿದ್ದಾನೋ? ಇಲ್ಲವೋ, ಎಲ್ಲಿದ್ದಾನೋ? ಎಂಬುದನ್ನೆ ಕಂಡು ಹಿಡಿದಿಲ್ಲ. ತನಿಖೆ ಅಸಮರ್ಪಕ ಹಾಗೂ ಅಸಮರ್ಥತೆಯಿಂದ ಕೂಡಿದೆ. ತನಿಖಾಧಿಕಾರಿ ಶ್ರಮ ಹಾಕಿಲ್ಲ. ತನಿಖಾ ಸಂಸ್ಥೆಯಿಂದ ನಿರೀಕ್ಷಿಸಬಹುದಾದ ವೃತ್ತಿಪರ ತನಿಖೆ ಇಲ್ಲಿ ಆಗಿಲ್ಲ. ಇದು ಕೋರ್ಟ್‌ಗೆ ಆಘಾತ ತರಿಸಿದೆ ಎಂದರು.

ಅಂತಿಮವಾಗಿ ಮುಂದಿನ ವಿಚಾರಣೆ ವೇಳೆ 2017ರ ಡಿ.18ರಿಂದ 26ರವರೆಗಿನ ಅಜಿತಾಬ್‌ನ ಮೊಬೈಲ್ ಕರೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಕೋರ್ಟ್‌ಗೆ ಸಲ್ಲಿಸಬೇಕು. ಸಾಧ್ಯವಾದರೆ ಮೊಬೈಲ್ ಸೇವೆ ಕಂಪೆನಿಗಳಿಂದ ಕರೆಗಳ ಧ್ವನಿಮುದ್ರಿಕೆ ಪಡೆಯುವಂತೆ ತನಿಖಾಧಿಕಾರಿಗಳಿಗೆ ಸಲಹೆ ನೀಡಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News