×
Ad

ಕನ್ನಡ ಸಾಹಿತ್ಯದಲ್ಲಿ ಕಟ್ ಅಂಡ್ ಪೇಸ್ಟ್ ಸಂಸ್ಕೃತಿ ಹೆಚ್ಚಾಗುತ್ತಿದೆ: ಹಿರಿಯ ಕವಿ ಪ್ರೊ.ದೊಡ್ಡರಂಗೇಗೌಡ

Update: 2018-06-01 21:41 IST

ಬೆಂಗಳೂರು, ಜೂ.1: ಮೊಬೈಲ್ ಹಾಗೂ ಡಿಟಿಪಿ ಸಂಸ್ಕೃತಿಯಿಂದ ಎಲ್ಲರೂ ಕವಿಗಳಾಗಲು ಪ್ರಯತ್ನಿಸುತ್ತಿದ್ದು, ಸೃಜನಶೀಲ ಸಾಹಿತ್ಯ ಸೊರಗುತ್ತಿದೆ ಎಂದು ಹಿರಿಯ ಕವಿ ಪ್ರೊ.ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಸಪ್ನ ಬುಕ್‌ಹೌಸ್ ವತಿಯಿಂದ ಆಯೋಜಿಸಿದ್ದ, ರಂಗರಾಜು ನಾಗವಾರ ರಚಿತ ’ನಾನೂ ಕಂಡ ಅಮೆರಿಕ’ ಮತ್ತು ’ಪ್ರೀತಿ ಪ್ರೀತಿಯ ರೀತಿ’ ಪುಸ್ತಕಗಳನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದಲ್ಲಿ ಕಟ್ ಅಂಡ್ ಪೇಸ್ಟ್ (ಕತ್ತರಿಸು, ಅಂಟಿಸು) ಹೆಚ್ಚಾಗುತ್ತಿದೆ, ಇದು ಒಳ್ಳೆಯ ಸಂಸ್ಕೃತಿಯಲ್ಲ ಎಂದರು.

ವ್ಯಕ್ತಿಯೊಬ್ಬರು ಚನ್ನವೀರ ಕಣವಿ ಅವರ ಪದ್ಯಕ್ಕೆ ತಮ್ಮ ಹೆಸರನ್ನು ಹಾಕಿಕೊಂಡಿರುವುದು ಗಮನಕ್ಕೆ ಬಂದಿದೆ. ಇದು ನಿಜಕ್ಕೂ ನಾಚಿಕೆಯ ಸಂಗತಿ. ನಮ್ಮ ಕವಿಗಳು ಎತ್ತ ಸಾಗುತ್ತಿದ್ದಾರೆ, ಸಂಸ್ಕೃತಿ ಎತ್ತ ಹೋಗುತ್ತಿದೆ ಎಂದು ಪ್ರಶ್ನಿಸಿದರು.

ಮತ್ತೊಬ್ಬರ ಬಟ್ಟೆ ತೊಡುವುದನ್ನು ಬಿಟ್ಟು, ತಮ್ಮದೇ ಬಟ್ಟೆ ತೊಟ್ಟಾಗ ಮಾತ್ರ ಅದರಲ್ಲಿ ಸಿಗುವ ಸಂತೋಷ ಬೇರೆ. ಅದೇ ರೀತಿ ತಾವು ರಚಿಸಿರುವ ಕವಿತೆ, ಕವನ, ಪುಸ್ತಕಗಳಿಂದ ಸಿಗುವ ಆನಂದವೇ ಒಂದು ಸುಖ ನೀಡುತ್ತದೆ. ಹಾಗಾಗಿ ಬರವಣಿಗೆಯಲ್ಲಿ ಆಸಕ್ತಿ ಇರುವವರು ಹೀಗೆ ಕಟ್ ಅಂಡ್ ಪೇಸ್ಟ್ ಮಾಡಬಾರದು. ಒಂದು ವೇಳೆ ಅದನ್ನು ಅನುಸರಿಸುತ್ತಿದ್ದರೆ ನಿಲ್ಲಿಸುವುದು ಒಳಿತು ಎಂದು ಸಲಹೆ ನೀಡಿದರು.

ಇಂಜಿನಿಯರ್ ಆಗಿದ್ದ ರಂಗರಾಜು ಅವರಲ್ಲಿದ್ದ ಕವಿ 60 ವರ್ಷದ ನಂತರ ಪುಟಿದು ಹೊರಬಂದಿದ್ದಾನೆ. ಇವರು ಕಾವ್ಯ ಮಂದಾರದ ದಂಡೆಯನ್ನೇ ಕೊಟ್ಟಿದ್ದಾರೆ. ಕವನ ಸಂಕಲನದಲ್ಲಿ 11 ರೀತಿಯ ಪ್ರೀತಿಯ ಬಗ್ಗೆ ಬರೆದಿದ್ದಾರೆ. ಜೊತೆಗೆ ಸಮಾಜದ ಬಗ್ಗೆ ಅವರಿಗಿರುವ ಕಾಳಜಿಯನ್ನು ಕಳಕಳಿಯಿಂದ ಬರೆದಿದ್ದಾರೆ ಎಂದರು.

ಸಾಹಿತಿ ಜರಗನಹಳ್ಳಿ ಶಿವಶಂಕರ್ ಮಾತನಾಡಿ, ಜೀವನದಲ್ಲಿ ಕೈಬಿಸಿ ಮಾಡುವ ವೃತ್ತಿ, ಕೈ ಖಾಲಿ ಮಾಡಿಕೊಳ್ಳುವ ವೃತ್ತಿಗಳಿವೆ. ಈಗ ರಂಗರಾಜು ಕೈಖಾಲಿ ಮಾಡಿಕೊಳ್ಳುವ ವೃತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ಸ್ವಾಗತ ಎಂದು ಹೇಳಿದರು.

ರಂಗರಾಜುರವರ ಪ್ರವಾಸ ಕಥನದಲ್ಲಿ ತಾಯಿ ತುಂಬಿಕೊಂಡಿದ್ದಾರೆ. ಜಾಗತೀಕರಣದ ಪ್ರಭಾವದಿಂದ ತುಂಬು ಕುಟುಂಬದ ಕಲ್ಪನೆ ಕ್ಷೀಣಿಸುತ್ತಿದೆ. ತಂದೆ ತಾಯಿಯಿಂದ ದೂರವಾಗಿ ಬದುಕುವ ವೈರುಧ್ಯ ಸೇರಿದಂತೆ ಅಮೆರಿಕಾದ ಜೊತೆಗೆ ನಾಗವಾರವನ್ನು ನೋಡುವ ಮೂಲಕ ಜೀವನವನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜರಗನಹಳ್ಳಿ ಶಿವಶಂಕರ್, ಕನ್ನಡಪರ ಚಿಂತಕ ರಾ.ನಂ.ಚಂದ್ರಶೇಖರ್, ರಂಗರಾಜು ನಾಗವಾರ, ಸಪ್ನ ಬುಕ್‌ಹೌಸ್‌ನ ದೊಡ್ಡೇಗೌಡ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News