×
Ad

ಇಂಥ ಹುದ್ದೆಯಲ್ಲಿ ಮುಂದುವರೆಯಲು ನೀವುಗಳು ಯೋಗ್ಯರೇ ಅಲ್ಲ: ಹೈಕೋರ್ಟ್

Update: 2018-06-01 21:46 IST

ಬೆಂಗಳೂರು, ಜೂ.1: ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಲ್ಲಿರುವವರು ಕಣ್ಣು ಮುಚ್ಚಿಕೊಂಡು ಖಾಲಿ ಪತ್ರದ ಮೇಲೆ ಸಹಿ ಹಾಕುತ್ತಾರೆಂದರೆ ಏನರ್ಥ? ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ನಿಮ್ಮ ಕಾರ್ಯವೈಖರಿ ಹೇಗಿದೆ ಎಂಬುದು ಇದರಿಂದಲೇ ತಿಳಿಯುತ್ತದೆ. ಇಂಥ ಹುದ್ದೆಗಳಲ್ಲಿ ಮುಂದುವರಿಯಲು ನೀವು ಯೋಗ್ಯರೇ ಅಲ್ಲ. 

ಖಾಲಿ ಪತ್ರದ ಮೇಲೆ ಸಹಿ ಪಡೆದು ತಮ್ಮಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಚುಂಚನಕುಪ್ಪೆ ಗ್ರಾಮಪಂಚಾಯತ್ ಅಧ್ಯಕ್ಷ ಮಂಜುನಾಥ್ ಹಾಗೂ ಉಪಾಧ್ಯಕ್ಷೆ ಶಾರದಾ ಅವರಿಗೆ ನ್ಯಾಯಮೂರ್ತಿ ಬಿ. ವೀರಪ್ಪ ಶುಕ್ರವಾರ ಈ ರೀತಿ ತರಾಟೆಗೆ ತೆಗೆದುಕೊಂಡರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ರಾಜಕೀಯ ಏಳಿಗೆ ಸಹಿಸದ ಪಂಚಾಯತ್ ಕೆಲ ಸದಸ್ಯರು, ಅವರಿಂದ ಖಾಲಿ ಪತ್ರದ ಮೇಲೆ ಸಹಿ ಪಡೆದು, ಆನಂತರ ಅದರಲ್ಲಿ ರಾಜೀನಾಮೆ ಪತ್ರ ಬರೆದು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಗೆ ನೀಡಿದ್ದಾರೆ. ರಾಜೀನಾಮೆ ಕುರಿತು ಅರ್ಜಿದಾರರಿಂದ ಯಾವುದೇ ಸ್ಪಷ್ಟನೆ ಕೇಳದೇ ಉಪ ವಿಭಾಗಾಧಿಕಾರಿಗಳು ಅದನ್ನು ಅಂಗೀಕರಿಸಿದ್ದಾರೆ. ಆದರೆ ಅರ್ಜಿದಾರರು ಸ್ವಯಿಚ್ಛೆಯಿಂದ ನೀಡದ ರಾಜೀನಾಮೆಯನ್ನು ಅಂಗೀಕರಿಸಿರುವ ಉಪ ವಿಭಾಗಾಧಿಕಾರಿಗಳ ಕ್ರಮ ಸರಿಯಲ್ಲ ಎಂದು ದೂರಿದರು.

ಇದನ್ನು ಕೇಳಿ ಆಕ್ರೋಶಗೊಂಡ ನ್ಯಾಯಮೂರ್ತಿಗಳು, ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರಾಗಿರುವ ನೀವು ಖಾಲಿ ಪತ್ರದ ಮೇಲೆ ಹಿಂದೆ ಮುಂದೆ ಯೋಚಿಸದೆ ಸಹಿ ಹಾಕಲು ಹೇಗೆ ಸಾಧ್ಯ? ಇದೇ ಏನು ನೀವು ಮಾಡುವ ಕೆಲಸ? ನೀವೇ ಹೀಗೆ ಬೇಜವಾಬ್ದಾರಿಯಿಂದ ವರ್ತಿಸುತ್ತೀರಿ ಎಂದರೆ ಅದು ದುರ್ನಡತೆಗೆ ದಾರಿ ಮಾಡಿಕೊಡುತ್ತದೆ. ಇದೆಲ್ಲವನ್ನೂ ಗಮನಿಸಿದರೆ ಪ್ರಕರಣ ಅನುಮಾನಾಸ್ಪದವಾಗಿ ತೋರುತ್ತಿದೆ. ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ ಎಂದರು.

ಸರಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ವಾದಿಸಿ, ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ - 1993ರ ಸೆಕ್ಷನ್ 43ರ ಅಡಿಯಲ್ಲಿ ನಿಯಮಗಳ ಪ್ರಕಾರವೇ ಅರ್ಜಿದಾರರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅರ್ಜಿದಾರರೇ ಖುದ್ದು ಉಪ ವಿಭಾಗಾಧಿಕಾರಿಗಳ ಮುಂದೆ ಹಾಜರಾಗಿ ರಾಜೀನಾಮೆ ನೀಡಿದ್ದಾರೆ. ಈ ವೇಳೆ ರಾಜೀನಾಮೆ ನೀಡುವಂತೆ ಯಾರಿಂದಾದರೂ ಬೆದರಿಕೆ ಅಥವಾ ಒತ್ತಡಗಳಿದ್ದವೇ ಎಂದು ಉಪ ವಿಭಾಗಾಧಿಕಾರಿಗಳು ಪ್ರಶ್ನಿಸಿದ್ದಾರೆ. ಆದರೆ ತಮ್ಮ ವೈಯಕ್ತಿಕ ಹಾಗೂ ಆರೋಗ್ಯ ಸಮಸ್ಯೆಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ಅರ್ಜಿದಾರರು ಉತ್ತರಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

2018ರ ಜ.10ರಂದು ಅರ್ಜಿದಾರರು ರಾಜೀನಾಮೆ ನೀಡಿದ್ದಾರೆ. ಆದರೆ ಕಾಯ್ದೆಯ ಪ್ರಕಾರ ರಾಜೀನಾಮೆ ಹಿಂಪಡೆಯಲು ಅರ್ಜಿದಾರರಿಗೆ 10 ದಿನಗಳ ಕಾಲಾವಕಾಶವನ್ನೂ ನೀಡಲಾಗಿತ್ತು. ಆದರೆ ರಾಜೀನಾಮೆ ಹಿಂಪಡೆಯದ ಹಿನ್ನೆಲೆಯಲ್ಲಿ ಜ.22ರಂದು ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು, ಉಪ ವಿಭಾಗಾಧಿಕಾರಿಗಳ ಕ್ರಮ ಸರಿಯಾಗಿಯೇ ಇದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದರಿಂದ ಅರ್ಜಿದಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ನಿಮ್ಮಂಥವರು ಇಂಥ ಹುದ್ದೆಗಳಲ್ಲಿ ಮುಂದುವರಿಯಲು ಅರ್ಹರಲ್ಲ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಿಮ್ಮಿಂದ ರಾಜೀನಾಮೆ ಪಡೆದಿರುವುದು ಸರಿಯಲ್ಲ ಎಂದು ವಾದಿಸುವುದಾದರೆ, ದುರ್ನಡತೆಯ ಆಧಾರದ ಮೇಲೆ ನಿಮ್ಮನ್ನು ವಜಾಗೊಳಿಸಲು ನ್ಯಾಯಾಲಯವೇ ಶಿಫಾರಸು ಮಾಡಲಿದೆ. ನಿಮ್ಮ ಅರ್ಜಿಯನ್ನು ವಜಾಗೊಳಿಸಿ, 1 ಲಕ್ಷ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿತು. ಇದರಿಂದ ಅರ್ಜಿದಾರರು ತಮ್ಮ ಅರ್ಜಿಗಳನ್ನು ಹಿಂಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News