×
Ad

ಸೊರಬ: ಸಾಲ ಬಾಧೆ ತಾಳಲಾರದೆ ರೈತ ಅತ್ಮಹತ್ಯೆ

Update: 2018-06-01 21:54 IST

ಸೊರಬ,ಜೂ.01: ಸಾಲ ಬಾಧೆ ತಾಳಲಾರದೆ ರೈತನೊರ್ವ ಅತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಜಂಬೇಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. 

ಶುಕ್ರವಾರ ಬೆಳಗ್ಗೆ 10ಗಂಟೆಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕೆತ್ಸೆ ಫಲಕಾರಿಯಾಗದೆ ಜಂಬೆಹಳ್ಳಿ ಗ್ರಾಮದ ರೈತ ಕಂಠೀಗೌಡ ಬಿನ್ ಶಿವಶಂಕರಪ್ಪ ಗೌಡ ಮೃತ ಪಟ್ಟಿದ್ದು, ಜಂಬೇಹಳ್ಳಿ ಗ್ರಾಮದ ತಮ್ಮ ತೋಟದಲ್ಲಿ ಸಾಲ ಬಾದೆ ತಾಳಲಾರದೆ ಮೇ18ರಂದು ತಮ್ಮ ತೋಟದಲ್ಲಿ ಕ್ರಿಮಿ ನಾಶಕ ಔಷಧಿ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಮೃತರ ಕುಟುಂಬದವರು ಪೊಲೀಸ್‍ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮೃತ ರೈತ 15 ಎಕರೆ ಜಮೀನು ಮತ್ತು 3ಎಕರೆ ಅಡಿಕೆ ತೋಟ ಹೊಂದಿದ್ದರು. ಕೃಷಿ ಸಂಬಂಧ ಸೊರಬದ ಕೆನರಾ ಬ್ಯಾಕ್‍ನಲ್ಲಿ 87 ಸಾವಿರ, ಪಿಎಲ್‍ಡಿ ಬ್ಯಾಕ್‍ನಲ್ಲಿ 4 ಲಕ್ಷ ಮತ್ತು ಹಳೇಸೊರಬದ ವಿಎಸ್‍ಎಸ್‍ಎನ್‍ನಲ್ಲಿ 1ಲಕ್ಷದ 50ಸಾವಿರ ರೂಪಾಯಿಗಳ ಒಟ್ಟು 6 ಲಕ್ಷ 37 ಸಾವಿರ ಸಾಲ ಮಾಡಿಕೊಂಡಿದ್ದರು. ಕಳೆದ ವರ್ಷ ಶುಂಠಿ ಬೆಳೆ ಬೆಳೆದಿದ್ದು, ಸರಿಯಾಗಿ ಬಾರದೆ ಹಾಗೂ ಈ ಬಾರಿ ಬೆಳೆದ ಶುಂಠಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಲ ಹಾಗೆ ಉಳಿದಿದ್ದು, ಇದನ್ನೇ ಕಂಠಿಗೌಡ ಮನಸ್ಸಿಗೆ ಹಚ್ಚಿಕೊಂಡು ಸಾಲ ಜಾಸ್ತಿಯಾಗಿದೆ ಎಂದು ಕೊರಗುತ್ತಿದ್ದರು ಎಂದು ಮೃತರ ಪತ್ನಿ ಶಾಮಲಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮೃತ ರೈತ ಮೇ18 ರಂದು ರಾತ್ರಿ 9 ಗಂಟೆ ಸುಮಾರಿಗೆ ಯಾವುದೋ ಕ್ರಿಮಿ ನಾಶಕ ಔಷಧಿ ಸೇವಿಸಿ, ಅಡಿಕೆ ಕಣದಲ್ಲಿ ಬಿದ್ದು ಇದ್ದಾಡುತ್ತಿದ್ದುದ್ದನು ಕಂಡ ಪತ್ನಿ ಮತ್ತು ಮಗ ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರೈತ ಕಂಠಿಗೌಡ ಮೃತ ಪಟ್ಟಿದ್ದಾರೆ. 

ಮೃತ ರೈತ ಕಂಠಿಗೌಡ ತಮ್ಮ ಪತ್ನಿ ಹಾಗು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News