ತೂತುಕುಡಿಯ ಸ್ಟರ್ಲೈಟ್ ತಾಮ್ರ ಕಾರ್ಖಾನೆ ಮುಚ್ಚುಗಡೆ 'ಒಂದು ಸಣ್ಣ ಗೆಲುವು ಮಾತ್ರ'!

Update: 2018-06-02 13:52 GMT

ತಮಿಳುನಾಡು ಸರಕಾರ ಕಾರ್ಖಾನೆ ಮುಚ್ಚಬೇಕೆಂಬ ತನ್ನ ಆದೇಶವನ್ನು ವೈಜ್ಞಾನಿಕ ಮತ್ತು ಪುರಾವೆಗಳ ಆಧಾರದಲ್ಲಿ ತಾರ್ಕಿಕ ಸಮರ್ಥನೆಗಳೊಂದಿಗೆ ಅನುಸರಿಸದಿದ್ದರೆ ಇದು ತೂತುಕುಡಿಯ ಜರಿಗೆ ದ್ರೋಹ ಮಾಡಿದಂತಾಗುತ್ತದೆ.

ವೇದಾಂತ ಸಂಸ್ಥೆಯ ಸಹಸಂಸ್ಥೆ ತೂತುಕುಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ಟರ್ಲೈಟ್ ಕಾಪರ್ ಸಂಸ್ಥೆಯನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರವನ್ನು ಮೇ 28ರಂದು ಸಂಜೆ 5:30ರ ವೇಳೆಗೆ ತಮಿಳುನಾಡು ಸರಕಾರ ಘೋಷಿಸಿತು. ದಿನವೊಂದಕ್ಕೆ 4,00,000 ಟನ್‌ಗಳಷ್ಟು ತಾಮ್ರ ಕರಗಿಸುವ ಈ ಸಂಸ್ಥೆಯನ್ನು ಮುಚ್ಚಿಬಿಡುವ ಸರಕಾರ ದ ನಿರ್ಧಾರ ಲಕ್ಷಾಂತರ ಸ್ಥಳೀಯರಿಗೆ ನೆಮ್ಮದಿ ಹಾಗೂ ಸಾಧಿಸಿದ ತೃಪ್ತಿ ತಂದಿದೆ. ಆದರೆ ಇಷ್ಟಕ್ಕೇ ಸರಕಾರ ಸುಮ್ಮನಿರುವಂತಿಲ್ಲ. ಕಳೆದ ಕೆಲವು ವರ್ಷಗಳಿಂದ ಈ ಸ್ಥಾವರ ಅನೇಕ ಬಾರಿ ನಿಯಮವನ್ನು ಉಲ್ಲಂಘಿಸಿದೆ ಎಂಬುದನ್ನು ದಾಖಲೆ ಸಹಿತ ನಿರೂಪಿಸದಿದ್ದರೆ ಸ್ಟರ್ಲೈಟ್ ಸಂಸ್ಥೆಯ ಎದುರಿನ ನ್ಯಾಯಾಂಗ ಹೋರಾಟದಲ್ಲಿ ಸರಕಾರದ ಆದೇಶ ಅಸ್ತಿತ್ವ ಕಳೆದುಕೊಳ್ಳಬಹುದು. ತನ್ನ ನಿರ್ಧಾರವನ್ನು ಸಮರ್ಥಿಸಬೇಕಿದ್ದರೆ ಸರಕಾರ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಸಲಹೆಯನ್ನು ಕಡೆಗಣಿಸಬೇಕಿದೆ. ಕಳೆದ 22 ವರ್ಷಗಳಿಂದ ಮಂಡಳಿ ಹಾಗೂ ಕೇಂದ್ರ ಪರಿಸರ ಸಚಿವಾಲಯವು ಸ್ಟರ್ಲೈಟ್ ಸಂಸ್ಥೆಯೊಂದಿಗೆ ಒಳಸಂಚು ನಡೆಸಿ ಸ್ಟರ್ಲೈಟ್ ಸಂಸ್ಥೆಗೆ ನಿಯೋಜನೆಯಡಿ ಇರುವ ಕಾರ್ಖಾನೆ ಎಂಬ ನೆಲೆಯಲ್ಲಿ ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಟ್ಟಿದೆ. ಸ್ಟರ್ಲೈಟ್ ಸಂಸ್ಥೆ ಕಾರ್ಯನಿರ್ವಹಣೆಯ ಅನುಮತಿಯ ನವೀಕರಣಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ 2018ರ ಎಪ್ರಿಲ್ 9ರಂದು ನೀಡಿದ ಆದೇಶದಲ್ಲಿ ಕೂಡಾ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ನಿರ್ಧಾರವನ್ನು ಸಮರ್ಥಿಸಲು ದುರ್ಬಲ, ಅಸ್ಥಿರವಾದ ಕಾರಣಗಳನ್ನು ನೀಡಿದೆ. ಸ್ಟರ್ಲೈಟ್ ಸಂಸ್ಥೆ ಎಸಗಿರುವ ಗಂಭೀರ ಕಾನೂನು ಉಲ್ಲಂಘಿಸಿದ ಪ್ರಕರಣವನ್ನು ಉಲ್ಲೇಖಿಸದೆ ಸುಲಭವಾಗಿ ಸರಿಪಡಿಸಬಹುದಾದ ತಪ್ಪುಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ಉಲ್ಲೇಖಿಸಿದೆ. ಮಂಡಳಿ ಹಾಗೂ ಪರಿಸರ ಸಚಿವಾಲಯ ಎರಡೂ ಕೂಡಾ ಸಂಸ್ಥೆ ಎಸಗಿರುವ ಗಂಭೀರ ಉಲ್ಲಂಘನೆಯ ಪ್ರಕರಣದಲ್ಲಿ ಪಾತ್ರವಹಿಸಿರುವುದು ಇದಕ್ಕೆ ಕಾರಣವಾಗಿದೆ. ಉದಾಹರಣೆಗೆ, 2007ರಲ್ಲಿ ಸ್ಟರ್ಲೈಟ್ ಸಂಸ್ಥೆ ಅದಿರು ಕರಗಿಸುವ ವಿಭಾಗವನ್ನು ವಿಸ್ತರಿಸಿತು ಮತ್ತು ಹೆಚ್ಚುವರಿ ಮಾಲಿನ್ಯವನ್ನು ನಿಭಾಯಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಲು ತನ್ನ ಬಳಿ 172 ಹೆಕ್ಟೇರ್ ಜಮೀನು ಇದೆ ಎಂದು ತಿಳಿಸಿತ್ತು. ಆದರೆ ಇದುವರೆಗೂ ಕೇವಲ 102.5 ಹೆಕ್ಟೇರ್ ಜಮೀನಿನ ಬಗ್ಗೆ ಮಾತ್ರ ವಿವರ ನೀಡಿದೆ.ಆದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಪರಿಸರ ಸಚಿವಾಲಯದ ಸತತ ತಪಾಸಣೆಯಲ್ಲಿ ಈ ಅಸಮಂಜತೆಯನ್ನು ಎಲ್ಲಿಯೂ ಕೂಡಾ ಎತ್ತಿತೋರಿಸಲಾಗಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಇಷ್ಟೇ ಅಲ್ಲ, ಮಾಲಿನ್ಯ ತಗ್ಗಿಸುವ ಮೂಲ ಸೌಕರ್ಯ ಗಳಲ್ಲೂ ಸಂಸ್ಥೆಗೆ ಕೆಲವೊಂದು ರಿಯಾಯಿತಿ ಯನ್ನು ಒದಗಿಸಿ ರುವುದನ್ನು ಗಮನಿಸಬಹುದು. ಕಾರ್ಖಾನೆಯ ಹೊಗೆಕೊಳವೆ ನಿಯಮದ ಪ್ರಕಾರ 123 ಮೀಟರ್ ಎತ್ತರವಿರಬೇಕು. ಆದರೆ ಸ್ಟರ್ಲೈಟ್ ಸಂಸ್ಥೆಯ ಹೊಗೆಕೊಳವೆಯ ಎತ್ತರ 60 ಮೀಟರ್ ಮಾತ್ರವಿದೆ. ಅಸಮರ್ಪಕ ಹೊಗೆಕೊಳವೆ ವಾಯುಮಾಲಿನ್ಯವನ್ನು ಸರಿಯಾಗಿ ವಿಸರ್ಜನೆ ಮಾಡಲು ಸಾಧ್ಯವಾಗದು. ಸಂಸ್ಥೆಯು ವಿಪರೀತ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ ಎಂಬ ದೂರು ಬರಲು ಇದು ಮೂಲ ಕಾರಣವಾಗಿದೆ. ಕಠಿಣ ಸವಾಲು ಎದುರಿಗಿದೆ:

ಭೋಪಾಲದಲ್ಲಿ ಯೂನಿಯನ್ ಕಾರ್ಬೈಡ್ ಸಂಸ್ಥೆಯ ಪ್ರಕರಣ, ಕೊಡೈಕನಾಲ್‌ನಲ್ಲಿ ಯುನಿಲಿವರ್ ಸಂಸ್ಥೆಯ ಪ್ರಕರಣವನ್ನು ಗಮನಿಸಿದಾಗ ಕಾರ್ಖಾನೆಯನ್ನು ಮುಚ್ಚಿಬಿಡುವುದು ಸುಲಭ ಕಾರ್ಯವಾಗಿದೆ. ಆ ಬಳಿಕ ಆ ಕಾರ್ಖಾನೆಯನ್ನು ಹೊಣೆಗಾರರನ್ನಾಗಿಸುವ ಕುರಿತು ಸರಕಾರ ಯಾವುದೇ ರಾಜಕೀಯ ಇಚ್ಛಾಶಕ್ತಿ ತೋರುವುದಿಲ್ಲ. ಸ್ಟರ್ಲೈಟ್ ಸಂಸ್ಥೆಯ ವಿಷಯದಲ್ಲೂ- ಕಾರ್ಖಾನೆಯ ಆವರಣ ಸೇರಿದಂತೆ ಈ ಪ್ರದೇಶದಲ್ಲಿ ಅಶುದ್ಧಗೊಂಡಿರುವ ಪರಿಸರವನ್ನು ಸ್ವಚ್ಛಗೊಳಿಸುವುದು, ಸಂತ್ರಸ್ತ ಜನತೆಗೆ ಪರಿಹಾರ ನೀಡುವುದು ಅಥವಾ ಸಂಸ್ಥೆಯ ತಪ್ಪಿನಿಂದ ಉದ್ಯೋಗ ಕಳೆದುಕೊಂಡಿರುವ ಕಾರ್ಮಿಕರನ್ನು ಮರುನಿಯುಕ್ತಿಗೊಳಿಸುವುದು ಮುಂತಾದ ಹೊಣೆಯನ್ನು ಸ್ಟರ್ಲೈಟ್ ಸಂಸ್ಥೆ ನಿರ್ವಹಿಸುವಂತೆ ನೋಡಿಕೊಳ್ಳಬೇಕಿದೆ. ಇಷ್ಟೆಲ್ಲಾ ಆದರೂ, ಸ್ಟರ್ಲೈಟ್ ಸಂಸ್ಥೆಯಿಂದ ಪರಿಸರಕ್ಕೆ ಹಾನಿಯಾಗಿರುವುದನ್ನು, ಸಂಸ್ಥೆಯ ಕಾರ್ಯನಿರ್ವಹಣೆಯಿಂದ ಜನತೆಯ ಆರೋಗ್ಯದ ಮೇಲಾಗಿರುವ ಪರಿಣಾಮ, ಅಥವಾ ಕಾರ್ಖಾನೆಯಲ್ಲಿ ಅಂತರ್ಗತವಾಗಿರುವ ಅಕ್ರಮವನ್ನು ಒಪ್ಪಿಕೊಳ್ಳಲು ಸರಕಾರ ತಯಾರಿಲ್ಲ. ಅಪಾಯಕರ ಉದ್ದಿಮೆಗಳ ‘ಕೆಂಪು ವರ್ಗ’ದಲ್ಲಿ ಸ್ಟರ್ಲೈಟ್ ಸ್ಥಾವರ ಸೇರುತ್ತಿದ್ದು ಇದನ್ನು ‘ವಿಶೇಷ ಕೈಗಾರಿಕೆಗಳಿಗೆ ಹಾಗೂ ಅಪಾಯಕರ ಬಳಕೆ ವಲಯ’ ಎಂದು ಗುರುತಿಸಿದ ಸ್ಥಳದಲ್ಲಿ ಮಾತ್ರ ಸ್ಥಾಪಿಸಬಹುದಾಗಿದೆ. ಆದರೂ ಸ್ಟರ್ಲೈಟ್ ಕಾರ್ಖಾನೆಯನ್ನು ಸಾಮಾನ್ಯ ಅಥವಾ ಲಘು ಉದ್ಯಮಗಳಿಗಾಗಿ , ಭಾಗಶಃ ಕೃಷಿ ಬಳಕೆಗಾಗಿ ಕಾಯ್ದಿರಿಸಿದ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ತಮಿಳುನಾಡು ಸರಕಾರ ಕಾರ್ಖಾನೆ ಮುಚ್ಚಬೇಕೆಂಬ ತನ್ನ ಆದೇಶವನ್ನು ವೈಜ್ಞಾನಿಕ ಮತ್ತು ಪುರಾವೆಗಳ ಆಧಾರದಲ್ಲಿ ತಾರ್ಕಿಕ ಸಮರ್ಥನೆಗಳೊಂದಿಗೆ ಅನುಸರಿಸದಿದ್ದರೆ ಇದು ತೂತುಕುಡಿಯ ಜನರಿಗೆ ದ್ರೋಹ ಮಾಡಿದಂತಾಗುತ್ತದೆ. ಆದ್ದರಿಂದ ಸರಕಾರದ ನಿಲುವನ್ನು ಸಮರ್ಥಿಸಿ, ಸ್ಟರ್ಲೈಟ್ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ರಾಜ್ಯದ ಹಿತಚಿಂತನೆಯ ದೃಷ್ಟಿಯಿಂದ ಕೈಗೊಳ್ಳಲಾಗಿದೆ ಎಂಬ ನಿರ್ಣಯವನ್ನು ವಿಧಾನಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸು ವಂತೆ ವಿರೋಧ ಪಕ್ಷಗಳು ಒತ್ತಡ ಹೇರಬೇಕಾಗಿದೆ.

ಕೃಪೆ: scroll.in

Writer - ನಿತ್ಯಾನಂದ ಜಯರಾಮನ್

contributor

Editor - ನಿತ್ಯಾನಂದ ಜಯರಾಮನ್

contributor

Similar News