‘ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಡೆಯಲು ಆಗುತ್ತಿಲ್ಲ’

Update: 2018-06-02 15:47 GMT

ಬೆಂಗಳೂರು, ಜೂ.2: ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಪೂರೈಕೆಯಾಗುತ್ತಿರುವ ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಜಂಟಿ ಆಯುಕ್ತ ಸರ್ಫ್ರಾಜ್ ಖಾನ್ ಅಭಿಪ್ರಾಯಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆ (ಜೂ.5) ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಾಲಭವನದಲ್ಲಿ ಮಕ್ಕಳಿಗಾಗಿ ‘ಪ್ಲಾಸ್ಟಿಕ್ ಮಾಲಿನ್ಯವನ್ನು ಹಿಮ್ಮೆಟಿಸಿ’ ಶೀರ್ಷಿಕೆಯಡಿ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ನಿಷೇಧ ಮಾಡಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಕರ್ನಾಟಕಕ್ಕೆ ಪೂರೈಕೆ ಮಾಡಲಾಗುತ್ತಿದೆ ಎಂದರು.

ಜೂ.6ರಿಂದ ಪ್ಲಾಸ್ಟಿಕ್ ಬಳಕೆದಾರರ ವಿರುದ್ಧ ದಾಳಿ ನಡೆಸಲಾಗುತ್ತದೆ. ಬೆಂಗಳೂರಿನ ಎಲ್ಲಾ ವಲಯಗಳಲ್ಲಿಯೂ ಪ್ಲಾಸ್ಟಿಕ್ ಮಾಲಿನ್ಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಬೀದಿ ನಾಟಕಗಳು, ಪ್ಲಾಸ್ಟಿಕ್‌ಗೆ ಪರ್ಯಾಯ ಬಳಕೆ ಕುರಿತು ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಹಿರಿಯ ಪರಿಸರವಾದಿ ಗುರುಮೂರ್ತಿ ಮಾತನಾಡಿ, ಪರಿಸರ ಬಳಕೆಯಿಂದ ಆಗುವ ಹಾನಿಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷದಂತೆ ಈ ಬಾರಿಯೂ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಜತೆಗೆ ಮೊದಲ ಮೂವರಿಗೆ ಜೂ.5ರಂದು ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯುವ ವಿಶ್ವ ಪರಿಸರ ದಿನಾಚರಣೆ ಸಮಾರಂಭದಲ್ಲಿ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು ಎಂದರು.

ಗಮನ ಸೆಳೆದ ಚಿತ್ರಗಳು: ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿ ಕಾರ್ತಿಕ್ ಸಿಂಗ್ ರಚಿಸಿದ್ದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳಿಂದ ಸಮುದ್ರ ಕಲುಷಿತಗೊಂಡಿದೆ. ಅದರಲ್ಲಿನ ತ್ಯಾಜ್ಯವನ್ನು ತಿಂದ ಭಾರೀ ಗಾತ್ರದ ಮೀನೊಂದು ಒದ್ದಾಡುತ್ತಿದ್ದು, ಅದರ ತ್ಯಾಜ್ಯವನ್ನು ಹೊರ ತೆಗೆಯುವ ಚಿತ್ರ ಎಲ್ಲರ ಗಮನ ಸೆಳೆಯುವಂತಿತ್ತು.

ಆರ್.ಟಿ. ನಗರದ ನ್ ಆ್ಯಂಡ್ ಲರ್ನ್ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಸಿ.ಅರ್ನಿ ತನ್ನ ಎರಡೂ ಕೈಗಳಿಂದ ಚಕಚಕನೆ ಪರಿಸರ ಕುರಿತಾದ ಚಿತ್ರವನ್ನು ಬಿಡಿಸುತ್ತಿದ್ದ ಚಿತ್ರ ಅತ್ಯಾಕರ್ಷಕವಾಗಿತ್ತು. ಮತ್ತೊಂದು ಮಗು ಭೂಮಿ, ಅದರ ಸುತ್ತಲಿನ ಗ್ರಹಗಳ ಚಲನಶೀಲತೆಯನ್ನು ಚಿತ್ರದ ಮೂಲಕ ಬಿಡಿಸಿದರೆ, ಮತ್ತೊಂದು ಮಗು ಪ್ಲಾಸ್ಟಿಕ್ ಕವರ್‌ನ ತುಂಬಾ ಸಾಮಾನುಗಳನ್ನು ತುಂಬಿದ ಚಿತ್ರ ಬಿಡಿಸಿ ಅದಕ್ಕೆ ಇಂಟು ಮಾರ್ಕು ಬರೆದು, ಬಟ್ಟೆ ಬ್ಯಾಗಿನ ತುಂಬಾ ಸೊಪ್ಪು-ತರಕಾರಿಗಳನ್ನು ತುಂಬಿಸಿಟ್ಟು ರೈಟ್ ಮಾರ್ಕ್ ಅನ್ನು ಹಾಕಲಾಗಿತ್ತು. ಹೀಗೆ ಬಾಲಭವನದಲ್ಲಿ ಶನಿವಾರ ಪ್ಲಾಸ್ಟಿಕ್‌ನಿಂದಾಗಿ ಅಪಾಯದ ಕುರಿತು ನಾನಾ ಚಿತ್ರಗಳು ನೋಡುಗರ ಗಮನ ಸೆಳೆದವು.

ಸ್ಪರ್ಧೆಯಲ್ಲಿ ನಗರದ 50 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಂದ 500 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇವರ ಪೈಕಿ ಹಲವರು ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ತಮ್ಮದೇ ಕಲ್ಪನಾ ಲಹರಿಯಲ್ಲಿ ಬಗೆಬಗೆಯ ಚಿತ್ರಗಳನ್ನು ಬಿಡಿಸಿದರೆ, ಮತ್ತೆ ಕೆಲವರು ಇದೇ ವಿಚಾರದಡಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ರಂಗಚಂದಿರ ತಂಡದಿಂದ ಜಿಪಿಒ ಚಂದ್ರು ಅವರ ನೇತೃತ್ವದಲ್ಲಿ ‘ಪ್ಲಾಸ್ಟಿಕಾಯಣ’ ಬೀದಿ ನಾಟಕ ಪ್ರದರ್ಶಿಸಲಾಯಿತು. 15 ನಿಮಿಷಗಳ ಈ ನಾಟಕ ಪ್ಲಾಸ್ಟಿಕ್‌ನಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಎತ್ತಿ ಹಿಡಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News