ನನ್ನ ಸೋಲು ಮತದಾರರ ಸೋಲು: ಹುಚ್ಚ ವೆಂಕಟ್

Update: 2018-06-02 16:16 GMT

ಬೆಂಗಳೂರು, ಜೂ.2: ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿನ ನನ್ನ ಸೋಲು ಮತದಾರರ ಸೋಲು ಎಂದು ಚಿತ್ರ ನಟ ಹುಚ್ಚವೆಂಕಟ್ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನಿಂದಾಗಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿನ ಬೋಗಸ್ ಮತದಾರರ ಪಟ್ಟಿ ಹೊರ ಬರಲು ಸಾಧ್ಯವಾಯಿತು. ಕೆಲವರು ಕುಕ್ಕರ್, ಸೇರಿದಂತೆ ಇನ್ನಿತರ ಆಮಿಷಗಳಿಗೆ ಒಳಗಾದ ಹಿನ್ನೆಲೆಯಲ್ಲಿ ನನಗೆ ಸೋಲಾಯಿತು. ಆದರೂ ಏಳುನೂರಕ್ಕಿಂತಲೂ ಹೆಚ್ಚು ಮತ ಪಡೆದಿರುವುದು ತೃಪ್ತಿ ನೀಡಿದೆ ಎಂದರು.

ಕ್ಷೇತ್ರದಲ್ಲಿ ಜನರ ಜೀವಕ್ಕೆ ಬೆಲೆ ಇಲ್ಲದಾಗಿದೆ. ಹಣ ಕೊಡ್ತಾರೆ ಎಂದು ಜನರು ಮತ ಹಾಕಿದ್ದಾರೆ. ಆದರೆ, ಅವರು ಕೊಟ್ಟದ್ದಕ್ಕಿಂತ ಎರಡರಷ್ಟು ಪಾಲು ಸಂಪಾದನೆ ಮಾಡುತ್ತಾರೆ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಾದರೂ ರಾಜಕೀಯ ಆಮಿಷಗಳಿಗೆ ಯಾರೂ ತಮ್ಮ ಮತವನ್ನು ಮಾರಿಕೊಳ್ಳಬಾರದು ಎಂದು ವೆಂಕಟ್ ಸಲಹೆ ನೀಡಿದರು.

ನನಗೆ ಈಗ ಜನರ ಮೇಲೆ ಇಟ್ಟಿದ್ದ ಪ್ರೀತಿ ಹೋಗಿಬಿಟ್ಟಿದೆ. ಹೀಗಾಗಿ, ಇನ್ನು ಮೂರು ತಿಂಗಳು ಯಾವುದೇ ರೀತಿಯ ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಮೂರು ತಿಂಗಳ ನಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವೆ. ಮಂಡ್ಯ ಲೋಕಸಭಾಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News