ಪರಿಸರ ಪ್ರಜ್ಞೆ ಮತ್ತು ಗಾಂಧಿ

Update: 2018-06-03 06:58 GMT

ಮಹಾತ್ಮಾ ಗಾಂಧೀಜಿಯವರು ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳನ್ನು ಸಮೀಕರಿಸುತ್ತಾ, ಪರಿಸರ ವ್ಯವಸ್ಥೆಯಲ್ಲಿ ಮಾನವನ ಪರಿಸರ ಪ್ರಜ್ಞೆ ಸುಸ್ಥಿರ ಪರಿಸರಕ್ಕಾಗಿ ಪೂರಕವಾಗಿರಬೇಕೆಂದು, ಮನುಷ್ಯನನ್ನು ಸೇರಿಸಿ ಎಲ್ಲಾ ಜೀವಿಗಳು, ಪರಸ್ಪರ ಸಮನ್ವಯಗೊಂಡು ಸಹಬಾಳ್ವೆ ನಡೆಸಬೇಕೆಂಬ ‘ವಸುದೈವ ಕುಟುಂಬಕಂ’ ತತ್ವವನ್ನು ಸಾರುತ್ತಾರೆ.

ಗಾಂಧೀಜಿಯವರು ಪ್ರತಿ ಜೀವಿಯಲ್ಲೂ ದೈವತ್ವವನ್ನು ಕಾಣುತ್ತಿದ್ದರು ಹಾಗೂ ಜೀವ ವೈವಿಧ್ಯದಲ್ಲಿ ಏಕತೆ ಯನ್ನು ಕಾಣುತ್ತಿದ್ದರು. ಅಹಿಂಸೆ ಮತ್ತು ಸಸ್ಯಾಹಾರದಲ್ಲಿದ್ದ ಅವರ ನಂಬಿಕೆ ಸಕಲ ಜೀವ ಜಗತ್ತಿನ, ಸಮಾಜದ, ಸಂಸ್ಕೃತಿಯ, ಧರ್ಮದ ಮತ್ತು ಸಂಪ್ರದಾಯಗಳ ಸಂರಕ್ಷಣೆಯ ಹರಿಕಾರನೆಂಬುದನ್ನು ಸಾರುತ್ತದೆ. ಅವರ ಇನ್ನೊಂದು ನಂಬಿಕೆಯೇನೆಂದರೆ, ಸುಸ್ಥಿರ ಪರಿಸರ ಚಳವಳಿಯಲ್ಲಿ ಪ್ರಕೃತಿಯ ಮೇಲೆ ನಡೆಯುವ ಹಿಂಸೆಯನ್ನು ತಡೆಯುವುದಷ್ಟೇ ಸಾಲದು, ಅಹಿಂಸೆಯೆಂಬುದು ಮಾನವ ಕುಲದ ಸಂಸ್ಕೃತಿಯ ಕೇಂದ್ರವಾಗಿರಬೇಕೆಂಬುದಾಗಿತ್ತು.

ಪ್ರತಿವರ್ಷ ಜೂನ್ 5 ‘‘ವಿಶ್ವ ಪರಿಸರ ದಿನ’’. ಈ ದಿನ ಬಂತೆಂದರೆ ಎಲ್ಲೆಲ್ಲೂ ಪರಿಸರ ಸಂರಕ್ಷಣೆಯ ಘೋಷ ವಾಕ್ಯಗಳು ರಾರಾಜಿಸುತ್ತವೆ. ಸರಕಾರಿ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು ಕೆಲವು ಕಡೆ ವನ ಮಹೋತ್ಸವವನ್ನು, ಪರಿಸರ ಸಂರಕ್ಷಣೆಯ ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡು, ಕೆಲವು ಬುದ್ಧಿಜೀವಿಗಳನ್ನು ಸೇರಿಸಿ ಪರಿಸರ ಸಂರಕ್ಷಣೆಯ ಚರ್ಚೆಗಳನ್ನು ನಡೆಸಿ, ಪರಿಸರ ಜಾಗೃತಿಯ ಘೋಷಣೆಗಳನ್ನು ಕೂಗಿಸುತ್ತಾ ವಿಜೃಂಭಿಸುತ್ತವೆ.

ಹೌದು, ಹಿಂದೆಂದಿಗಿಂತಲೂ ಇಂದು ಪರಿಸರಕ್ಕೆ ಸಂಬಂಧಿಸಿದಂತೆ ಸವಾಲುಗಳು ಬೆಟ್ಟದಷ್ಟಿವೆ. ಕಾರಣ, ಈ ಎಲ್ಲಾ ಕಾರ್ಯಕ್ರಮಗಳನ್ನು ಪೋಷಿಸುವ ಘನ ಸರಕಾರಗಳು ಅದರಲ್ಲೂ ಮಂತ್ರಿ ಮಹೋದಯರು ಸಾಮಾಜಿಕ ಜವಾಬ್ದಾರಿಯ ನೆಪದಲ್ಲಿ ಕೃಷಿ ಭೂಮಿಗಾಗಿ ಅರಣ್ಯವನ್ನು ಕಡಿಯಲು, ನಗರೀಕರಣ ಮತ್ತು ಬಡಾವಣೆಗಳ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ಒತ್ತುವರಿಸಲು, ನಗರಾಭಿವೃದ್ಧಿಯ ಭಾಗವಾಗಿ ರಸ್ತೆಯ ಅಗಲೀಕರಣಕ್ಕೆ, ಮೇಲ್ಸೇತುವೆ, ಉಕ್ಕಿನ ಸೇತುವೆಗಳ ನಿರ್ಮಾಣಕ್ಕೆ ಮರಗಳನ್ನು ಕಡಿಯಲು ಅಡಿಗಲ್ಲಾಕುತ್ತಿರುತ್ತಾರೆ. ಸಾರಿಗೆಗಾಗಿ ಕಾಡಿನ ನಡುವೆ ಹೆದ್ದಾರಿ ಮತ್ತು ರೈಲ್ವೆ ಹಳಿಗಳ ನಿರ್ಮಾಣ ಇನ್ನೊಂದು ವಿಪರ್ಯಾಸ. ಕೈಗಾರಿಕಾ ಯೋಜನೆಗಳಿಗೆ ಹಾಗೂ ದೇಶ ವಿದೇಶಗಳ ಸಂಪರ್ಕಕ್ಕೆ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು, ಕೃಷಿಯೇತರ (ಬಂಜರು) ಭೂಮಿ ಬಿಟ್ಟು ಫಲವತ್ತಾದ ಭೂಮಿಗಳ ಒತ್ತುವರಿ, ಎತ್ತಿನ ಹೊಳೆಯಂತಹ ಯೋಜನೆಗೆ ಕಾಡಿನ ನಡುವೆ ಕೊಳವೆ ಸಾಲುಗಳ ನಿರ್ಮಾಣ, ದಟ್ಟ ಕಾನನದಲ್ಲಿ ಗಣಿ ಕೈಗಾರಿಕೆ ಮುಂತಾದ ಕಾರ್ಯಕ್ರಮಗಳಿಗೆ ಸಹಿ ಹಾಕುತ್ತಲೇ ಸರಕಾರಗಳು ಪರಿಸರದ ಸುಸ್ಥಿರತೆಗಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ‘‘ಪ್ಯಾರಿಸ್ ಒಪ್ಪಂದ’’ಕ್ಕೆ ಸಹಮತವನ್ನು ಸೂಚಿಸುತ್ತವೆ.

UNFCCC(United Nations Framework Convention to Climate Change) UNFCCC ಹೀಗೆ ಅಭಿವೃದ್ಧಿಯ ನೆಪದಲ್ಲಿ ಆಗುತ್ತಿರುವ ಜಾಗತಿಕ ತಾಪಮಾನದ ಏರಿಕೆ, ಹಸಿರು ಅನಿಲಗಳ ಸಾಂದ್ರತೆಯ ಹೆಚ್ಚಳದಿಂದಾಗುತ್ತಿರುವ ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯದಿಂದಾಗಿ ಎಚ್ಚೆತ್ತು ಕೊಂಡ ವಿಶ್ವಸಂಸ್ಥೆ 1992ರಲ್ಲಿಯೇ ಒಂದು ಚೌಕಟ್ಟಿನಡಿಯಲ್ಲಿ ಹವಾಮಾನ ಬದಲಾವಣೆಗೆ ಅಂತರ್‌ರಾಷ್ಟ್ರೀಯ ರಾಜಕೀಯ ಪ್ರತಿಕ್ರಿಯೆಯನ್ನು ಪಡೆಯುವ ಸಲುವಾಗಿ ಸ್ಥಾಪಿಸಿತು. ಇದರ ಮುಖ್ಯ ಉದ್ದೇಶವೇ ‘‘ವಾತಾವರಣದಲ್ಲಿ ಹೆಚ್ಚುತ್ತಿರುವ ಹಸಿರು ಮನೆ ಅನಿಲಗಳ ಸಾಂದ್ರತೆಯನ್ನು ನಿಯಂತ್ರಿಸುವುದು ಹಾಗೂ ಪರಿಸರ ಮಾಲಿನ್ಯಕ್ಕೆ ಮಾನವನ ಕೊಡುಗೆಯನ್ನು ತಡೆಗಟ್ಟುವುದೇ’’ ಆಗಿದೆ. 194 ಸದಸ್ಯ ರಾಷ್ಟ್ರಗಳ ಪಾಲ್ಗೊಳ್ಳುವಿಕೆಯಿಂದ ಈ 1994 ರಲ್ಲಿ ಕಾರ್ಯಾಚರಣೆಗೆ ಬಂತು. 1997ರಲ್ಲಿ ಜಪಾನಿನ ಕ್ಯೊಟೊದಲ್ಲಿ, 2005 ರ ಕೆನಡಾದ ಮಾಂಟ್ರಿಯಲ್ ನಲ್ಲಿ, 2007 ರ ಇಂಡೋನೇಶಿಯಾದ ಬಾಲಿಯಲ್ಲಿ ನಡೆದ ಸಮ್ಮೇಳನಗಳಲ್ಲಿ ಎಲ್ಲಾ ಕೈಗಾರಿಕೋದ್ಯಮ ರಾಷ್ಟ್ರಗಳು ಮಾಲಿನ್ಯಕಾರಕ ಅನಿಲಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಹೊರ ಚೆಲ್ಲಬೇಕು, ಪ್ರಮುಖ ಆರು ಹಸಿರು ಅನಿಲಗಳನ್ನು 1990 ರಲ್ಲಿದ್ದ ಪ್ರಮಾಣಕ್ಕಿಂತ ಶೇ. 5.2 ರಷ್ಟು ಕಡಿಮೆ ಮಟ್ಟದಲ್ಲಿ ನಿಯಂತ್ರಿಸಬೇಕು ಎಂಬ ಒಪ್ಪಂದದೊಂದಿಗೆ ದೀರ್ಘಾವಧಿಯ ಸಹಯೋಗವನ್ನೇ ಎತ್ತಿ ಹಿಡಿಯುತ್ತಾ, ಜಾಗತಿಕ ಮಟ್ಟದಲ್ಲಿ ಪರಿಸರ ಮಾಲಿನ್ಯದ ನಿಯಂತ್ರಣಕ್ಕೆ ಸದಸ್ಯ ರಾಷ್ಟ್ರಗಳ ಕಾಣ್ಕೆಗಳನ್ನು ಒತ್ತಾಯಿಸಲಾಯಿತು. ಇದರಲ್ಲಿ ಮುಖ್ಯವಾಗಿ ಪರಿಸರ ಮಾಲಿನ್ಯದ ಉಪಶಮನ, ಅದಕ್ಕೆ ಬೇಕಿರುವ ಆರ್ಥಿಕ ಸಹಾಯ, ತಂತ್ರಜ್ಞಾನ ಮತ್ತು ಆತ್ಮವಿಶ್ವಾಸ ನಿರ್ಮಿಸುವತ್ತ ಗಮನ ಹರಿಸಲಾಯಿತು. 2009ರಲ್ಲಿ ಡೆನ್ಮಾರ್ಕ್‌ನ ಕೋಪೆನ್-ಹೇಗನ್‌ನಲ್ಲಿ ನಡೆದ ಸಮ್ಮೇಳನದಲ್ಲಿ "Seal the Deal'' ಎಂಬ ಘೋಷ ವಾಕ್ಯದೊಡನೆ ಅಭಿವೃದ್ಧಿ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕರೆಲ್ಲರೂ ಪರಿಸರ ಮಾಲಿನ್ಯ ಶಮನಕ್ಕೆ ಪ್ರಮುಖ ಒಪ್ಪಂದ, ಒಡಂಬಡಿಕೆಗಳನ್ನು ಮಾಡಿಕೊಂಡರೂ, ಕೊನೆಗೆ ಅಲ್ಲಿಂದ ಹೊರಬಂದ ಪ್ರತಿನಿಧಿಗಳಿಗೆ ಅದೊಂದು ‘‘ದುರ್ಬಲ ಒಪ್ಪಂದ’’ ವೆನಿಸಿತು. ಇದರ ಪರಿಣಾಮವೇ 2015 ರ 196 ರಾಷ್ಟ್ರಗಳ ‘‘ಪ್ಯಾರಿಸ್ ಒಪ್ಪಂದ’’. ಕಳೆದ 6 ವರ್ಷಗಳಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಡೆದ ಒಪ್ಪಂದಗಳ ಸಾರವಾಗಿ ಈ ಸಮ್ಮೇಳನದಲ್ಲಿ ಜಾಗತಿಕ ತಾಪಮಾನ ಹೆಚ್ಚಳವನ್ನು 2o ಸೆ. ರ ಒಳಮಟ್ಟದಲ್ಲಿ ಅಂದರೆ 1.5o ಸೆ. ಗೆ ನಿಯಂತ್ರಿಸುವುದು ಹಾಗೂ ಹಸಿರು ಮನೆ ಅನಿಲಗಳನ್ನು ಸಂಪೂರ್ಣ ನಿಯಂತ್ರಿಸಿ, ಇವುಗಳನ್ನು ಮುಂದಿನ ಅರ್ಧ ಶತಮಾನದಲ್ಲಿ ಶೂನ್ಯಕ್ಕೆ ಇಳಿಸುವುದನ್ನು ತೀರ್ಮಾನಿಸಲಾಯಿತು. ಮುಂದುವರಿದು ಪ್ರತಿ ಸದಸ್ಯ ರಾಷ್ಟ್ರವೂ ತಮ್ಮ ಬದ್ಧತೆಯ ಕೊಡುಗೆಯನ್ನು ನೀಡುವುದು ಮತ್ತು ಅವುಗಳನ್ನು ಪ್ರತಿ 5 ವರ್ಷಗಳಿಗೊಮ್ಮೆ ಪರಿಶೀಲಿಸಿ ಉತ್ತಮಗೊಳಿಸುವುದು. 2016 ಮತ್ತು 2017 ರ ಸಮ್ಮೇಳನಗಳೂ ಇದರ ಮುಂದುವರಿದ ಭಾಗವಾಗಿ ಎಲ್ಲಾ ಸದಸ್ಯ ರಾಷ್ಟ್ರಗಳು ಅಭಿವೃದ್ಧಿ ನೆಪದಲ್ಲಿ ಬಳಸುವ ತಮ್ಮ ಪ್ರಾಕೃತಿಕ ಸಂಪನ್ಮೂಲಗಳಾದ ಇಂಧನ ಮತ್ತು ಖನಿಜ ಸಂಪತ್ತುಗಳನ್ನು ಕಡಿಮೆ ಬಳಸಲು ಕರೆ ಕೊಟ್ಟಿದ್ದಾಯಿತು. ಇದರ ನಡುವೆ ಅಭಿವೃದ್ಧಿ ರಾಷ್ಟ್ರಗಳು ಮತ್ತು ಅಭಿವೃದ್ಧ್ದಿ ಶೀಲ ದೇಶಗಳು ಒಬ್ಬರ ಮೇಲೆ ಒಬ್ಬರು ತಪ್ಪನ್ನು ಹೊರಿಸುತ್ತಾ ತಮ್ಮ ರಾಜಕೀಯ ಮತ್ತು ಅಭಿವೃದ್ಧಿಯ ಕಾರಣಗಳಿಂದಾಗಿ ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳತೊಡಗಿದರು. ಇದರ ಪರಿಣಾಮ ಈಗಾಗಲೇ ಅಮೆರಿಕದ ಟ್ರಂಪ್ ಸರಕಾರ ಈ ‘‘ಪ್ಯಾರಿಸ್ ಒಪ್ಪಂದ’’ ದಿಂದ ಹೊರನಡೆಯುವ ತೀರ್ಮಾನ ತೆಗೆದುಕೊಂಡದ್ದಾಗಿದೆ.

ಇಷ್ಟೆಲ್ಲಾ ಜಂಜಾಟಗಳ ನಡುವೆಯೂ, ಸುಸ್ಥಿರ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಗಳಿಗೆ ಆಶಾಕಿರಣವಾಗಿ ಕಾಣುವುದು ‘‘ನನ್ನ ಬದುಕೇ ನನ್ನ ಸಂದೇಶ’’ ವೆಂದ ಮಹಾತ್ಮಾ ಗಾಂಧೀಜಿಯವರ ತತ್ವ ಸಿದ್ಧ್ದಾಂತಗಳು. ''The earth provides enough for everyman's needs but not for everyman's greed''

ಎನ್ನುವ ಗಾಂಧೀಜಿಯವರ ಈ ಹೇಳಿಕೆಯನ್ನು ಕಳೆದ ಶತಮಾನದಿಂದ ಕೇಳುತ್ತಾ, ಅಲ್ಲಲ್ಲಿ ನೋಡುತ್ತಾ ಬಂದಿದ್ದೇವೆ. ಈ ರೀತಿಯ ಗಾಂಧೀಜಿಯವರ ನಾನಾ ಹೇಳಿಕೆಗಳನ್ನು ನೋಡುತ್ತಾ, ಕೇಳುತ್ತಿರುತ್ತೇವೆಯೇ ವಿನಃ, ಅವುಗಳ ಪ್ರಸ್ತುತತೆಯತ್ತ ತಲೆಕೆಡಿಸಿಕೊಳ್ಳುವುದಿಲ್ಲ ಹಾಗೂ ಗಾಂಧೀಜಿಯವರನ್ನು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ನಾಯಕನಾಗಿ, ‘‘ರಾಷ್ಟ್ರಪಿತ’’ನಾಗಿ, ಅವರ ಸಾಮಾಜಿಕ, ರಾಜಕೀಯ ತತ್ವ ಸಂದೇಶಗಳನ್ನು ಓದುತ್ತಾ, ಸಾರುತ್ತೇವೆಯೇ ಹೊರತು ಅವರೊಬ್ಬ ಸೂಕ್ಷ್ಮ ಪರಿಸರ ತಜ್ಞರೆಂದು, ಅವರ ನಡೆ, ನುಡಿ, ಆಚಾರ, ವಿಚಾರಗಳೆಲ್ಲವೂ ಸುಸ್ಥಿರ ಪರಿಸರಕ್ಕೆ ಪೂರಕವೆಂಬುದನ್ನು ಅರಿಯುವುದರಲ್ಲಿ ಸೋತಿದ್ದೇವೆ ಎನ್ನಿಸುತ್ತದೆ. ಸುಸ್ಥಿರ ಪರಿಸರಕ್ಕೆ ಗಾಂಧೀಜಿಯವರ ಕೊಡುಗೆ ಮತ್ತು ಅವರ ಪ್ರಸ್ತುತತೆಯನ್ನು ಅರಸುತ್ತಾ ಹೋದರೆ, ಮೊದಲಿಗೆ ಕಾಣಸಿಗುವುದು ವಿಶ್ವಸಂಸ್ಥೆ ಎಚ್ಚೆತ್ತುಕೊಳ್ಳುವ 83 ವರ್ಷಗಳ ಮೊದಲೇ ಅಂದರೆ 1909 ರಲ್ಲಿ ಗಾಂಧೀಜಿ ಬರೆದ ‘‘ಹಿಂದ್ ಸ್ವರಾಜ್’’ ಪುಸ್ತಕ. ಇದರಲ್ಲಿ ಅವರು ಈ ಆಧುನಿಕ ಕೈಗಾರಿಕಾ ಸಮಾಜದಲ್ಲಿ ಹೇಗೆ ಮನುಜನಿಂದ ಮನುಜ ಹಾಗೂ ಮಾನವನಿಂದ ಪ್ರಕೃತಿ ಶೋಷಣೆಗಳಿಗೆ ಒಳಪಡಲಾಗುತ್ತದೆ ಎನ್ನುವುದನ್ನು ವಿವರಿಸಿದ್ದರು. ಇದರ ನಂತರ ಅದಕ್ಕೆ ಕನ್ನಡಿ ಹಿಡಿಯುವ ಹಾಗೆ ಗೋಚರಿಸುತ್ತಿ ರುವುದು ಭಾರತ ಸರಕಾರದ ಪರಿಸರ ಇಲಾಖೆಯಲ್ಲಿ 1985 ರ ತನಕ ಕಾರ್ಯದರ್ಶಿಯಾಗಿ ದುಡಿದ ದಿವಂಗತ ಟಿ.ಎನ್. ಖೋಶು ಮತ್ತು ಪ್ರಸ್ತುತ ಕೇರಳ ಸೆಂಟ್ರಲ್ ಯೂನಿವರ್ಸಿಟಿಯ''International Relations School of Global studies'' ಮುಖ್ಯಸ್ಥರಾದ ಮತ್ತು ಗಾಂಧಿ ಚಿಂತಕರಾದ ಜಾನ್ ಎಸ್. ಮೂಲಕ್ಕಟ್ಟು ರವರು ಬರೆದು, The Energy and Research Institute(TERI) ರವರು ಪ್ರಕಟಿಸಿರುವ "Mahathma Gandhi and the Environment(AnalysingGandhian Environmental Thought)'' "Mahathma Gandhi, an Apostle of Applied Human Ecology'' ಮತ್ತು ಟಿ.ಎನ್. ಖೋಶು ರವರ ಎನ್ನುವ ಪುಸ್ತಕಗಳು. ಈ ಪುಸ್ತಕಗಳು ಗಾಂಧೀಜಿಯವರ ಸುಸ್ಥಿರ ಪರಿಸರ ಪ್ರಜ್ಞೆ ಮತ್ತು ಚಿಂತನೆಗಳನ್ನು ಪ್ರಚಾರಪಡಿಸುವುದರಲ್ಲಿ ವಿಶೇಷ ಗಮನ ಸೆಳೆಯುತ್ತವೆ.

ಹಿಂದ್ ಸ್ವರಾಜ್ ಮತ್ತು ಮೇಲ್ಕಾಣಿಸಿದ ಎರಡು ಪುಸ್ತಕಗಳನ್ನು ನೆಪವಾಗಿರಿಸಿಕೊಂಡೇ ಹೇಳುವುದಾದರೆ, ಗಾಂಧೀಜಿಯವರ ತತ್ವ, ಸಂದೇಶ ಹಾಗೂ ಅವರ ಆಚಾರ ವಿಚಾರ, ಜೀವನ ಶೈಲಿಗಳನ್ನು ಅವಲೋಕಿಸಿಯೇ ಅವರೊಬ್ಬ ಸೂಕ್ಷ್ಮ ಪರಿಸರ ತಜ್ಞರೆಂಬುದನ್ನು ಮನಗಾಣಬಹುದಾಗಿದೆ. ಅವರಿದ್ದ ಕಾಲದಲ್ಲಿ ಪರಿಸರಕ್ಕೆ ಅಷ್ಟು ಧಕ್ಕೆಯಾಗದಿದ್ದರೂ ಅವರು ನೀಡಿದ ತತ್ವ ಸಂದೇಶಗಳು ಅವರಿಗಿದ್ದ ಪರಿಸರದ ಮೇಲಿನ ಭವಿಷ್ಯತ್ತಿನ ಕಾಳಜಿ ಮತ್ತು ಕಾಣ್ಕೆಯನ್ನು ತೋರಿಸುತ್ತದೆ.

ಇವನ್ನೆಲ್ಲಾ ಅವಲೋಕಿಸುತ್ತಾ ಹೋದರೆ ಪ್ರಪ್ರಥಮವಾಗಿ ಗಾಂಧೀಜಿಯವರು ಕಟ್ಟಿದ ಆಶ್ರಮಗಳು ಗಮನ ಸೆಳೆಯುತ್ತವೆ. ಜಾನ್ ರಸ್ಕಿನ್ ರ "Unto the Last''  ಕೃತಿಯಿಂದ ಪ್ರೇರಿತರಾದ ಗಾಂಧೀಜಿ, 1904 ರಲ್ಲಿ ದಕ್ಷಿಣ ಆಫ್ರಿಕಾದ ದರ್ಬನ್ ಸಮೀಪ ಇನಂದಾ ಪಟ್ಟಣದ ಹತ್ತಿರ 100 ಎಕರೆ ಪ್ರದೇಶದಲ್ಲಿ ‘‘ಫೀನಿಕ್ಸ್ ಫಾರ್ಮ್’’ ಆರಂಭಿಸಿದರು. ಇದು ಕಬ್ಬಿನ ಬೆಳೆಯಿಂದ ಸುತ್ತುವರಿದಿತ್ತು. ಗಾಂಧೀಜಿ ಇದನ್ನು ಶಾಂತಿ, ಸಹಬಾಳ್ವೆ, ನ್ಯಾಯ, ಸಮಾನತೆಗಳ ಸಮುದಾಯದ ಪ್ರಯೋಗ ಶಾಲೆಯಾಗಿ ಬೆಳೆಸಿ ಸತ್ಯಾಗ್ರಹದ ಮೂಲೋದ್ದೇಶಗಳಿಗೆ ಬಳಸಿದರು. ಇಲ್ಲಿ ಹಸಿರು ಕಾಡನ್ನು ಉಳಿಸಿಕೊಳ್ಳುತ್ತಲೇ, ಹಣ್ಣು ತರಕಾರಿಗಳನ್ನು ಬೆಳೆಸುತ್ತಾ, ಹೈನುಗಾರಿಕೆಯಲ್ಲಿ ತೊಡಗುತ್ತಾ ಅಲ್ಲಿನ ನಿವಾಸಿಗಳಿಗೆ ದಿನನಿತ್ಯ ಬೇಕಾದ ಹಣ್ಣು ತರಕಾರಿ, ಹಾಲು, ಬೆಣ್ಣೆ, ತುಪ್ಪಗಳನ್ನು ಪೂರೈಸುತ್ತಿದ್ದರು. ಇಲ್ಲಿ ಸಮುದಾಯ ಚಟುವಟಿಕೆಗಳಾದ ಪ್ರಾರ್ಥನೆ, ಗೀತೋಪದೇಶ, ಪ್ರಕೃತಿ ಪ್ರೇಮ, ಆಯುರ್ವೇದ, ಹಣ್ಣು ತರಕಾರಿಗಳ ಪ್ರಾಮುಖ್ಯ ಮತ್ತು ಕಾಡಿನ ಉತ್ಪನ್ನಗಳ ಉಪಯೋಗಗಳನ್ನು ಉಪದೇಶಿಸುತ್ತಾ, ಸ್ವಾವಲಂಬನೆ, ಕಾರ್ಮಿಕ ಘನತೆ, ಸರಳತೆ, ಪ್ರೀತಿ ವಿಶ್ವಾಸಗಳನ್ನು, ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಹೋರಾಡುವ ಛಾತಿಯನ್ನು ಬೆಳೆಸುತ್ತಾ, ಒಟ್ಟಾರೆ ಪ್ರೀತಿ, ಕಾಯಕ, ಮಾನವೀಯತೆಯ ಘನತೆಯೊಂದಿಗೆ ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಪ್ರಯೋಗಾಲಯವಾಗಿ ಈ ತೋಟವನ್ನು ಬಳಸಿದರು. 1990ರಲ್ಲಿ ಗೆಳೆಯ ಹರ್ಮನ್ ಕಲ್ಲೆಂಬಕ್ ರ ಸಹಾಯ ದೊಂದಿಗೆ ಜೋಹನ್ಸ್ ಬರ್ಗ್ ಸಮೀಪ 2 ಮೈಲಿ ಉದ್ದ 1 ಮೈಲಿ ಅಗಲದ ಸುಮಾರು 1,100 ಎಕರೆ ವಿಸ್ತೀರ್ಣದ ‘‘ಕೌಂಟ್ ಲಿಯೋ ಟಾಲ್ ಸ್ಟಾಯ್’’ ಫಾರ್ಮ್ ಆರಂಭಿಸಿದರು. ಈ ತೋಟವಂತೂ ಪ್ರಕೃತಿದತ್ತವಾದ ಕಾಡಿನಿಂದ ಕೂಡಿದ್ದು, ಅಂಜೂರ, ಬಾದಾಮಿ, ಆಪ್ರಿಕಾಟ್, ಮರಸೇಬು, ವಾಲ್ನಟ್ ಮತ್ತು ನೀಲಗಿರಿ ಮರಗಳಿಂದ ಕೂಡಿದ್ದಾಗಿತ್ತು. ಇದು ಸತ್ಯಾಗ್ರಹಿಗಳಿಗೆ ತರಬೇತಿ ಕೇಂದ್ರವಾಗಿ, ಸೆರೆವಾಸದಲ್ಲಿರುವ ಸತ್ಯಾಗ್ರಹಿಗಳ ಕುಟುಂಬ ವರ್ಗಕ್ಕೆ ಆಶ್ರಯ ತಾಣವಾಗಿತ್ತು. ಇದೊಂದು ಪ್ರಾರ್ಥನೆ, ಪರಿಶುದ್ಧತೆ ಮತ್ತು ಪ್ರಾಯಶ್ಚಿತಗಳೊಂದಿಗೆ ಸಮುದಾಯ ಬದುಕಿನ ಪ್ರಯೋಗ ಶಾಲೆಯಾಗಿತ್ತು. ಇಲ್ಲಿ ಗಾಂಧಿ ಸಣ್ಣ ಗ್ರಂಥಾಲಯದೊಂದಿಗೆ, ಮಕ್ಕಳಿಗೆ ಮತ್ತು ಸೆರೆವಾಸದಲ್ಲಿರುವ ಕುಟುಂಬ ವರ್ಗದವರಿಗೆ ಪ್ರಕೃತಿ ಪ್ರೇಮ, ಸ್ವಂತ ಅಡುಗೆ, ಸಸ್ಯಾಹಾರ, ಶಾಲೆ ಮತ್ತು ಶಿಕ್ಷಣದ ಮಹತ್ವ, ಪ್ರಕೃತಿಯೊಂದಿಗಿನ ಸಹಬಾಳ್ವೆ, ಮರಗೆಲಸ, ಕೆತ್ತನೆ ಕೆಲಸ ಮತ್ತು ಚಪ್ಪಲಿ ಹೊಲೆಯುವ ಕಾಯಕಗಳಲ್ಲಿ ಕೌಶಲ್ಯಾಭಿವೃದ್ಧಿ ಯೊಂದಿಗೆ ಸ್ವಾವಲಂಬನೆಯ ಪಾಠಗಳನ್ನು ಮಾಡುತ್ತಿದ್ದರು.

1915ರಲ್ಲಿ ಗಾಂಧೀಜಿ ಗುಜರಾತಿನ ಅಹಮದಾಬಾದ್ ಪಕ್ಕದಲ್ಲಿ ಸಬರಮತಿ ನದಿ ದಡದಲ್ಲಿ 36 ಎಕರೆ ಪ್ರದೇಶದಲ್ಲಿ ಸಬರಮತಿ ಆಶ್ರಮ ಸ್ಥಾಪಿಸಿದರು. ಇಲ್ಲಿ ವ್ಯವಸಾಯ, ಹೈನುಗಾರಿಕೆ, ಗೋಶಾಲೆ, ಖಾದಿ ನೇಯ್ಗೆ ಮುಂತಾದ ಗುಡಿ ಕೈಗಾರಿಕೆಗಳನ್ನು ಪ್ರಾರಂಭಿಸಿದರು. ಇಲ್ಲಿ ಮಾನವ ಕಾಯಕಕ್ಕೆ ಹೆಚ್ಚಾಗಿ ಒತ್ತುಕೊಟ್ಟು ವ್ಯವಸಾಯ ಮತ್ತು ತೋಟಗಾರಿಕೆಯಲ್ಲಿ ತೊಡಗಿಸುವ ಶಾಲೆ ಯನ್ನು ಪ್ರಾರಂಭಿಸಿದರು. ಇದೊಂದು ಮಾನವ ಮೂಲ ಪ್ರವೃತ್ತಿ ಮತ್ತು ಆಧ್ಯಾತ್ಮಿಕ ಪರಿವರ್ತನೆಯ ಪರೀಕ್ಷೆಯ ಪ್ರಯೋಗ ಶಾಲೆಯಾಯಿತು. ಇಲ್ಲಿ ಶಿಕ್ಷಣ, ಪ್ರೀತಿ, ಸತ್ಯ, ಬ್ರಹ್ಮಚರ್ಯ, ಮಿತವ್ಯಯ, ಅಸಂಗ್ರಹ, ಗುಡಿ ಕೈಗಾರಿಕಾ ವಸ್ತು ಬಳಕೆ, ಅಸ್ಪೃಶ್ಯತೆ ನಿವಾರಣೆ ಮತ್ತು ಮಾನವೀಯ ಘನತೆಯನ್ನು ಎತ್ತಿ ಹಿಡಿಯುವ ಆಶಯ ಬೆಳೆದಿತ್ತು.

ಮಹಾತ್ಮಾ ಗಾಂಧೀಜಿಯವರು ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳನ್ನು ಸಮೀಕರಿಸುತ್ತಾ, ಪರಿಸರ ವ್ಯವಸ್ಥೆಯಲ್ಲಿ ಮಾನವನ ಪರಿಸರ ಪ್ರಜ್ಞೆ ಸುಸ್ಥಿರ ಪರಿಸರಕ್ಕಾಗಿ ಪೂರಕವಾಗಿರಬೇಕೆಂದು, ಮನುಷ್ಯನನ್ನು ಸೇರಿಸಿ ಎಲ್ಲಾ ಜೀವಿಗಳು, ಪರಸ್ಪರ ಸಮನ್ವಯಗೊಂಡು ಸಹಬಾಳ್ವೆ ನಡೆಸಬೇಕೆಂಬ ‘ವಸುದೈವ ಕುಟುಂಬಕಂ’ ತತ್ವವನ್ನು ಸಾರುತ್ತಾರೆ. ಮುಂದುವರಿಯುತ್ತಾ ಗಾಂಧೀಜಿಯವರು ಜೀವಿಗಳು ಪರಿಸರವನ್ನು ಬದಲಾಯಿಸುತ್ತಾರೆ, ಬದಲಾದ ಪರಿಸರ ಜೀವಿಗಳನ್ನು ಬದಲಾಯಿಸುತ್ತದೆ. ಪರಿಸರ ವ್ಯವಸ್ಥೆಯಲ್ಲಿ ಮನುಷ್ಯರಿಗೊಂದು ಜೀವಗೋಳ, ಪ್ರಾಣಿ ಪಕ್ಷಿಗಳಿ ಗೊಂದು ಜೀವಗೋಳ, ಸಸ್ಯ ವರ್ಗಕ್ಕೆ, ಕ್ರಿಮಿ ಕೀಟಗಳಿಗೆ, ಸೂಕ್ಷ್ಮಾಣು ಜೀವಿಗಳಿಗೆ ಬೇರೆ ಬೇರೆ ಜೀವಗೋಳಗಳಿಲ್ಲವೆಂದು ಪ್ರತಿಪಾದಿಸುತ್ತಾ, ಎಲ್ಲಾ ಜೀವಿಗಳು ಒಬ್ಬರಿಗೊಬ್ಬರು ಪೂರಕವಾಗಿ ಆರೋಗ್ಯವಂತ ಪರಿಸರ ನಿರ್ಮಾಣದೊಂದಿಗೆ ಬದುಕಬೇಕೆಂದು ಸಾರುತ್ತಾರೆ. ಅವರು ಹೇಳಿಕೊಳ್ಳದೆ ಇದ್ದರೂ, ಗಾಂಧೀಜಿಯವರು ‘‘ಪರಿಸರ ಪ್ರಜ್ಞೆಯ ಯೋಗಿ’’ಯಾಗಿದ್ದರು. ಸರಳ ಭಾಷೆಯಲ್ಲಿ ಹೇಳುವುದಾದರೆ ಅವರ ಭೌತಿಕ ಚಟುವಟಿಕೆಗಳು ಹಠಯೋಗ ವನ್ನು ಮತ್ತು ಅವರ ನೈತಿಕ ಪ್ರಜ್ಞೆ ರಾಜಯೋಗವನ್ನು ಪ್ರತಿಪಾದಿಸುತ್ತದೆ. ಗಾಂಧೀಜಿ ಪಾಲಿಸಿದ ರಾಜಯೋಗದ ಯಮ - ನಿಯಮಗಳು ಪರಿಸರ ಪೂರಕ ಮತ್ತು ಸಂಪನ್ಮೂಲ ಉಪಯೋಗಗಳನ್ನೊಳಗೊಂಡಿದ್ದವು. ಯಮದ ಅಂಗಗಳಾದ ಸತ್ಯ, ಅಹಿಂಸೆ, ಅಸ್ಥೇಯ, ಬ್ರಹ್ಮಚರ್ಯ, ಅಪರಿಗ್ರಹಗಳ ಮೂಲಕ ಪರಿಸರದ ಸುಸ್ಥಿರವನ್ನು ಕಾಪಾಡಲು ಹೇಳುತ್ತಿದ್ದರು. ಸತ್ಯ ಎಲ್ಲಕ್ಕಿಂತ ಮೇಲ್ವರ್ಗದಲ್ಲಿ ನಮ್ಮ ನೈತಿಕ ಪ್ರಜ್ಞೆಯನ್ನು ಎತ್ತಿಹಿಡಿಯುತ್ತದೆ ಎನ್ನುವರು ಗಾಂಧೀಜಿ. ಮುಖ್ಯವಾಗಿ ಅಹಿಂಸೆ ತತ್ವವನ್ನು ಮನುಷ್ಯ ಸಂಕುಲದ ಮೇಲೆ ಮಾತ್ರವಲ್ಲದೇ, ಎಲ್ಲಾ ಜೀವಿಗಳ ಮತ್ತು ನಿರ್ಜೀವಿಗಳ ಮೇಲೂ ಪ್ರಯೋಗಿಸಬೇಕೆಂಬುದು ಅವರ ಆಕಾಂಕ್ಷೆಯಾಗಿತ್ತು. ಅನೈತಿಕವಾಗಿ ಸಿಗುವ ವಸ್ತುಗಳನ್ನು ಉಪಯೋಗಿಸಬಾರದ ಆಸ್ತೇಯ ತತ್ವವು ಮುಂದಾಗುವ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕುವ ಮುನ್ನೋಟವಾಗಿತ್ತು. ಮಾನವ ಸಂಕುಲದಲ್ಲಿರುವ ಲೈಂಗಿಕ ಕ್ರಿಯೆಯ ಪ್ರಚೋದನೆ ಇತರ ಪ್ರಾಣಿ, ಪಕ್ಷಿ ಜೀವಿಕೋಶಗಳಿಗಿಂತ ಅಧಿಕವಾಗಿರುವುದರಿಂದ ಅದಕ್ಕೊಂದು ಕಡಿವಾಣವಾಗಿ ಬ್ರಹ್ಮಚರ್ಯವನ್ನು ಪಾಲಿಸಬೇಕಾದ ನಡೆಯನ್ನು (ತಮ್ಮ 37ನೇ ವಯಸ್ಸಿಗೆ ಬ್ರಹ್ಮಚರ್ಯವನ್ನು ಅಪ್ಪಿಕೊಳ್ಳುವುದರ ಮೂಲಕ) ಗಾಂಧೀಜಿ ತೋರಿಸಿದ್ದಾರೆ. ಇಲ್ಲದಿದ್ದರೆ, ಜನಸಂಖ್ಯಾ ಸ್ಫೋಟದಿಂದ ಸಂಪನ್ಮೂಲಗಳ ಬಳಕೆ ಅಧಿಕವಾಗಿ ಪರಿಸರ ಸಮತೋಲನ ತಪ್ಪುವ ಸಾಧ್ಯತೆಯನ್ನು ಪರೋಕ್ಷವಾಗಿ ತಿಳಿಸಿದ್ದರು. ಅಗತ್ಯಕ್ಕಿಂತ ಮಿಗಿಲಾದ ವಸ್ತುಗಳ ಸಂಗ್ರಹದಿಂದ ಅಂದರೆ ಐಷಾರಾಮಿ ಜೀವನ ಶೈಲಿಯಿಂದ ಪರಿಸರದ ಮೇಲೆ ಆಗಬಹುದಾದ ಅನಾಚಾರಗಳನ್ನು ವಿರೋಧಿಸುವುದಕ್ಕಾಗಿಯೇ ಅಪರಿಗ್ರಹ ತತ್ವದ ಸರಳ ಜೀವನ ಶೈಲಿಯನ್ನು ಗಾಂಧೀಜಿ ರೂಢಿಸಿಕೊಂಡಿದ್ದರು.

ಇನ್ನೂ ರಾಜಯೋಗದ ನಿಯಮಗಳಲ್ಲಿ ಮೊದಲಿಗೆ ಶೌಚ ಅಂದರೆ ಶುಚಿಗೊಳಿಸುವಿಕೆ. ಇದು ಅಂತರಂಗ ಮತ್ತು ಬಹಿರಂಗ ಶುದ್ಧೀಕರಣ. ಮನಸ್ಸು, ದೇಹ ಮತ್ತು ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು. ‘‘ದೇಹ ಶುಚಿಯಿಲ್ಲದಿದ್ದರೆ ಮನಸ್ಸು ಕೂಡ ಶುಚಿಯಾಗಿರುವುದಿಲ್ಲ’’ವೆಂಬುದು ಗಾಂಧೀಜಿಯ ತತ್ವ. ಮೂಲತಃ ಮಾನವ ಇತರ ಪ್ರಾಣಿಗಳಿಗಿಂತ ಹೆಚ್ಚಿನ ಅಶೌಚವುಳ್ಳ ಜೀವಿ. ಬೇರೆ ಜೀವಿಗಳಿಗಿಂತ ಹೆಚ್ಚಾಗಿಯೇ ಪರಿಸರದಲ್ಲಿ ಜೀರ್ಣವಾಗದ ಕಸವನ್ನು ಉತ್ಪಾದಿಸಿ ಪರಿಸರ ಮಾಲಿನ್ಯಕ್ಕೆ ಶೇ.100ರಷ್ಟು ಕೊಡುಗೆಯನ್ನು ಮಾನವ ನೀಡುತ್ತಿದ್ದಾನೆ. ಹಾಗಾಗಿ ಈ ಶೌಚ ಕ್ರಿಯೆ ಪ್ರಸ್ತುತ ಅತ್ಯಂತ ಅನಿವಾರ್ಯ. ಗಾಂಧೀಜಿ ಪ್ರತಿಪಾದಿಸಿದ ಈ ಸ್ವಚ್ಛತೆಯ ಕಾರ್ಯವು ನಮ್ಮ ಅಂಗಳಗಳ ಸ್ವಚ್ಛತೆಯ ಜೊತೆಗೆ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರ ಮುಂತಾದವುಗಳ ಸಂಪೂರ್ಣ ನಿಯಂತ್ರಣವನ್ನು ಒಳಗೊಂಡಿದ್ದಾಗಿದೆ. ಇದರ ಜೊತೆಗೆ ಸಂತೋಷ, ತಪಸ್ಸು, ಸ್ವಾಧ್ಯಾಯ, ಪ್ರಾರ್ಥನೆ ಮತ್ತು ಧ್ಯಾನಗಳು ಮನುಷ್ಯನಿಗೆ ಸ್ವನಿಯಂತ್ರಣಕ್ಕೆ ಒಳಪಡಿಸಿ ಪ್ರಕೃತಿ ಹಾಗೂ ಜೀವಗೋಳಗಳಲ್ಲಿ ಮನುಜನು ಸಹ ಒಂದು ಪ್ರಧಾನ ಅಂಗವೆಂಬ ಭಾವವನ್ನು ಸ್ಪುರಿಸುತ್ತದೆ. ಹೀಗೆ ಗಾಂಧೀಜಿಯ ಆಚಾರಗಳು ಸುಸ್ಥಿರ ಪರಿಸರ ಕಾಪಾಡುವುದನ್ನು ಒಳಗೊಂಡಿವೆ.

ಗಾಂಧೀಜಿಯವರು ಪ್ರತಿ ಜೀವಿಯಲ್ಲೂ ದೈವತ್ವವನ್ನು ಕಾಣುತ್ತಿದ್ದರು ಹಾಗೂ ಜೀವ ವೈವಿಧ್ಯದಲ್ಲಿ ಏಕತೆಯನ್ನು ಕಾಣುತ್ತಿದ್ದರು. ಅಹಿಂಸೆ ಮತ್ತು ಸಸ್ಯಾಹಾರದಲ್ಲಿದ್ದ ಅವರ ನಂಬಿಕೆ ಸಕಲ ಜೀವ ಜಗತ್ತಿನ, ಸಮಾಜದ, ಸಂಸ್ಕೃತಿಯ, ಧರ್ಮದ ಮತ್ತು ಸಂಪ್ರದಾಯಗಳ ಸಂರಕ್ಷಣೆಯ ಹರಿಕಾರನೆಂಬುದನ್ನು ಸಾರುತ್ತದೆ. ಅವರ ಹೇಳಿಕೆಯಂತೆ ಜೀವ ವೈವಿಧ್ಯದ ಸಂರಕ್ಷಣೆ ತುಂಬಾ ಸರಳ ಹೇಗೆಂದರೆ ‘‘ಜೀವ ಕೊಡುವ ಯಾವುದೇ ಶಕ್ತಿಯಿಲ್ಲದ ಮಾನವನಿಗೆ ಜೀವ ತೆಗೆಯುವ ಹಕ್ಕು ಸಹ ಇರುವುದಿಲ್ಲ’’ ಎಂಬುದು. ಅವರ ಇನ್ನೊಂದು ನಂಬಿಕೆಯೇನೆಂದರೆ, ಸುಸ್ಥಿರ ಪರಿಸರ ಚಳವಳಿಯಲ್ಲಿ ಪ್ರಕೃತಿಯ ಮೇಲೆ ನಡೆಯುವ ಹಿಂಸೆಯನ್ನು ತಡೆಯುವುದಷ್ಟೇ ಸಾಲದು, ಅಹಿಂಸೆಯೆಂಬುದು ಮಾನವ ಕುಲದ ಸಂಸ್ಕೃತಿಯ ಕೇಂದ್ರವಾಗಿರಬೇಕೆಂಬುದಾಗಿತ್ತು.

ಗಾಂಧೀಜಿಯವರಿಗೆ ಪ್ರಮುಖವಾಗಿ ಮಹಿಳೆಯರ ಬಗ್ಗೆಯೂ ಹೆಚ್ಚಿನ ಕಾಳಜಿಯಿತ್ತು. ಏಕೆಂದರೆ ಮಹಿಳೆಯರು ಗಂಡಸರಿಗಿಂತ ಹೆಚ್ಚಿನ ಮಟ್ಟದಲ್ಲಿ ಸಾಂಪ್ರದಾಯಿಕ ಪರಿಸರ ಸಂರಕ್ಷಕರೆಂಬ ನಂಬಿಕೆ. ಇತಿಹಾಸವನ್ನು ತಿರುವಿದರೆ, ಮಹಿಳೆಯರು ಮೂಲವಾಗಿ ಸಂಗ್ರಹಕಾರರು, ಗಂಡಸರಂತೆ ಕೊಲ್ಲುವವರಲ್ಲ, ಬೇಟೆಗಾರರಲ್ಲ.

 ಮೂಲದಲ್ಲಿ ಮಹಿಳೆಯರು ಸೃಜನಶೀಲರು. ಅವರ ಪಾಲನಾ, ಪೋಷಣ ಹಾಗೂ ಹಂಚುವ ಗುಣದಿಂದ ಗಾಂಧೀಜಿಯವರು ಅವರಿಗೆ ಗಂಡಸರಿಗೆ ಸಮಾನವಾದ ಅಸ್ಮಿತೆಯನ್ನು ನೀಡಿದ್ದರು. ಸೇವೆ ಮತ್ತು ತ್ಯಾಗ ಮನೋಭಾವದ ಮಹಿಳೆಯರ ಗುಣಗಳನ್ನು ಆವರು ಆರಾಧಿಸುತ್ತಿದ್ದರು ಹಾಗೂ ಮಹಿಳೆಯರನ್ನು ಸ್ವಾತಂತ್ರ್ಯ ಹೋರಾಟದಲ್

Writer - ರೂಪದರ್ಶಿ ಜಿ.ವೆಂಕಟೇಶ್

contributor

Editor - ರೂಪದರ್ಶಿ ಜಿ.ವೆಂಕಟೇಶ್

contributor

Similar News