ಫ್ರೆಂಚ್ ಓಪನ್: ಸೆರೆನಾ-ಶರಪೋವಾ ಸೆಣಸಾಟಕ್ಕೆ ವೇದಿಕೆ ಸಜ್ಜು

Update: 2018-06-03 07:13 GMT

ಪ್ಯಾರಿಸ್, ಜೂ.3: ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹಾಗೂ ರಶ್ಯದ ಆಟಗಾರ್ತಿ ಮರಿಯಾ ಶರಪೋವಾ ನಡುವಿನ ಹೈ-ವೋಲ್ಟೇಜ್ ಸೆಣಸಾಟಕ್ಕೆ ಫ್ರೆಂಚ್ ಓಪನ್ ಟೂರ್ನಿಯ ವೇದಿಕೆ ಸಜ್ಜಾಗಿದೆ.

ಈ ಇಬ್ಬರು ಹಿರಿಯ ಆಟಗಾರ್ತಿಯರು ಸೋಮವಾರ ನಡೆಯಲಿರುವ ಮಹಿಳೆಯರ ಸಿಂಗಲ್ಸ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.

ಸೆರೆನಾ 3ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಜುಲಿಯಾ ಜಾರ್ಜರ್ಸ್‌ರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿ ಶರಪೋವಾ ವಿರುದ್ಧ ಪಂದ್ಯಕ್ಕೆ ತೇರ್ಗಡೆಯಾಗಿದ್ದಾರೆ.

ಸೆರೆನಾ-ಶರಪೋವಾ ಸುಮಾರು ಎರಡೂವರೆ ವರ್ಷಗಳ ಬಳಿಕ ಟೆನಿಸ್ ಅಂಗಣದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಶರಪೋವಾ 2016ರಲ್ಲಿ ಆಸ್ಟ್ರೇಲಿಯನ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೆರೆನಾ ವಿರುದ್ಧ ಸೋತಿದ್ದರು.

ಡೋಪಿಂಗ್ ಪ್ರಕರಣದಲ್ಲಿ 15 ತಿಂಗಳ ಕಾಲ ನಿಷೇಧಕ್ಕೆ ಒಳಗಾದ ಕಾರಣ ಶರಪೋವಾ  2016ರ ಬಳಿಕ ಯಾವುದೇ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಆಡಿಲ್ಲ. ಸೆರೆನಾ ಕಳೆದ ಸೆಪ್ಟಂಬರ್‌ನಲ್ಲಿ ಪುತ್ರಿ ಅಲೆಕ್ಸ್ ಒಲಿಂಪಿಯಾಗೆ ಜನ್ಮ ನೀಡಿದ ಕಾರಣ ವಿಶ್ರಾಂತಿಯ ನೆಪದಲ್ಲಿ ಟೆನಿಸ್ ಅಂಗಣದಿಂದ ದೂರವೇ ಉಳಿದಿದ್ದರು.

23 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ಸೆರೆನಾ ಅವರು 2005ರಿಂದ ಶರಪೋವಾ ವಿರುದ್ಧ ಈ ತನಕ ಆಡಿರುವ 21 ಪಂದ್ಯಗಳ ಪೈಕಿ 18ರಲ್ಲಿ ಜಯ ಸಾಧಿಸಿ ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News