ವೈರಲ್ ವಿಡಿಯೋ ಮೂಲಕ ಮನೆಮಾತಾದ 'ಡ್ಯಾನ್ಸಿಂಗ್ ಅಂಕಲ್'ಗೆ ಸಿಕ್ಕ ಹೊಸ ಜವಾಬ್ದಾರಿ ಏನು ಗೊತ್ತಾ?

Update: 2018-06-03 10:14 GMT

ವಿದಿಶಾ (ಮಧ್ಯಪ್ರದೇಶ), ಜೂ 3: ತನ್ನ ನೃತ್ಯದ ವೈರಲ್ ವಿಡಿಯೋ ಮೂಲಕ ರಾತ್ರೋರಾತ್ರಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ ಅವರನ್ನು ವಿದಿಶಾ ಮಹಾನಗರಪಾಲಿಕೆಯ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ನೃತ್ಯ ವಿಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಶ್ರೀವಾಸ್ತವ ದೇಶಾದ್ಯಂತ ಖ್ಯಾತಿ ಗಳಿಸಿದ್ದರು.

ಸಂಜೀವ್ ಶ್ರೀವಾಸ್ತವ (46) ಎಲೆಕ್ಟ್ರಾನಿಕ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ವಿವಾಹ ಸಮಾರಂಭವೊಂದರಲ್ಲಿ ಇವರು ಮಾಡಿದ ನೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇವರು ನಟ ಗೋವಿಂದ್ ಅವರ ಕಟ್ಟಾ ಅಭಿಮಾನಿ. ಗೋವಿಂದ ಅವರ ಚಿತ್ರವೊಂದರ ಹಾಡಿಗೆ ಶ್ರೀವಾಸ್ತವ ಹೆಜ್ಜೆಹಾಕಿದ ವಿಡಿಯೊ ಬಳಿಕ ರಾಜ್ಯಾದ್ಯಂತ ಡ್ಯಾನ್ಸಿಂಗ್ ಅಂಕಲ್ ಎಂದೇ ಪರಿಚಿತರಾಗಿದ್ದರು.

"ಇದು ಅಸಾಧಾರಣ ಅನುಭವ. ನನ್ನ ನೃತ್ಯ ವಿಡಿಯೊ ವೈರಲ್ ಆಗುತ್ತದೆ ಎಂದು ನಾನು ಕನಸಲ್ಲೂ ಎಣಿಸಿರಲಿಲ್ಲ. 1982ರಿಂದಲೂ ನಾನು ಡ್ಯಾನ್ಸ್ ಮಾಡುತ್ತೇನೆ. ಗೋವಿಂದ ನನಗೆ ಮಾದರಿ. ಇನ್ನಷ್ಟು ಅವಕಾಶಗಳು ಸಿಗುತ್ತವೆ ಎಂಬ ನಿರೀಕ್ಷೆ ನನ್ನದು" ಎಂದು ಶ್ರೀವಾಸ್ತವ  ಹೇಳುತ್ತಾರೆ.

"ಬಹಳಷ್ಟು ಮಂದಿ ನನ್ನ ಡ್ಯಾನ್ಸ್ ಇಷ್ಟಪಟ್ಟಿದ್ದಾರೆ.. ಹೃದಯಾಂತರಾಳದಿಂದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರವೀನಾ ಟಂಡನ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡಾ ನನ್ನ ಡ್ಯಾನ್ಸ್ ಇಷ್ಟಪಟ್ಟಿದ್ದಾರೆ. ನನ್ನ ತಾಯಿಯಿಂದ ನಾನು ಡ್ಯಾನ್ಸ್ ಕಲಿತಿದ್ದೆ. ಗೋವಿಂದ ನನಗೆ ಮಾದರಿ" ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News