ಬೆಂಗಳೂರು: ಆರು ಸಬರ್ಬನ್ ರೈಲುಗಳ ಸಂಚಾರ ಸ್ಥಗಿತಕ್ಕೆ ಚಿಂತನೆ

Update: 2018-06-03 15:03 GMT

ಬೆಂಗಳೂರು, ಜೂ.3: ಪ್ರಯಾಣಿಕರ ಕೊರತೆಯಿಂದಾಗಿ ಬೆಂಗಳೂರು ವಿಭಾಗದ ಆರು ನಗರಗಳಲ್ಲಿ ಸಂಚರಿಸುವ ಸಬರ್ಬನ್ ರೈಲುಗಳ ಸಂಚಾರ ಸ್ಥಗಿತಗೊಳಿಸಲು ವಿಭಾಗೀಯ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಯಾಣಿಕರಿಲ್ಲದೆ ರೈಲುಗಳು ಖಾಲಿಯಾಗಿ ಸಂಚರಿಸುತ್ತಿರುವುದರಿಂದ ಇಲಾಖೆಯ ಅಧಿಕಾರಿಗಳು ಈ ನಿರ್ಣಯ ಕೈಗೊಂಡಿದ್ದು, ಬೆಂಗಳೂರು ವಿಭಾಗ ದಿಂದ ಹಾಸನ(ನೆಲಮಂಗಲ-ಕುಣಿಗಲ್ ಮಾರ್ಗ), ಕೋಲಾರ (ದೇವನಹಳ್ಳಿ- ಚಿಕ್ಕಬಳ್ಳಾಪುರ ಮಾರ್ಗ), ಸೇಲಂ(ಹೆಬ್ಬಾಳ-ಬಾಣಸವಾಡಿ-ಹೊಸೂರು ಮಾರ್ಗ), ಧರ್ಮಾವರಂ(ಚೆನ್ನಸಂದ್ರ-ಯಲಹಂಕ-ಗೌರಿಬಿದನೂರು ಮಾರ್ಗ), ಮೈಸೂರು, ತುಮಕೂರು ಮಾರ್ಗವಾಗಿ ಸಂಚರಿಸುವ ರೈಲುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಮಾರ್ಗಗಳಲ್ಲಿ ಸಂಚಾರ ಮಾಡುತ್ತಿರುವ ರೈಲುಗಳಿಂದ ಸಾಕಷ್ಟು ನಷ್ಟ ಅನುಭವಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತ ಮಾಡುವ ಬಗ್ಗೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಇನ್ನೂ ಕೆಲವು ರೈಲುಗಳು ಅದೇ ಪರಿಸ್ಥಿತಿಯಲ್ಲಿದ್ದು, ಅವುಗಳನ್ನು ಸ್ಥಗಿತಗೊಳಿಸುವ ಬಗ್ಗೆಯೂ ಚರ್ಚಿಸಲಾಗಿದೆ.

ಚುನಾವಣೆಗೂ ಮುನ್ನ ಆರಂಭಿಸಿದ್ದ ಬಾಣಸವಾಡಿ, ಹೊಸೂರು ನಡುವೆ ಸಂಚರಿಸುತ್ತಿದ್ದ ಡೆಮು ರೈಲು ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಅವುಗಳು ಮುಂಬರುವ ಅಕ್ಟೋಬರ್ 25ರವರೆಗೆ ಮಾತ್ರ ಸಂಚರಿಸಲಿದೆ. ಈ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಾರಣ, ಇಲಾಖೆ ನಷ್ಟ ಅನುಭವಿಸಿತ್ತು. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News