ಬೆಂಗಳೂರು: ವಿದ್ಯುತ್ ತಂತಿ ತುಳಿದು ಇಬ್ಬರು ಯುವಕರು ಮೃತ್ಯು
ಬೆಂಗಳೂರು, ಜೂ.3: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಹೆಸರಘಟ್ಟದ ದಾಸೇನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಮುನಿರಾಜು (20) ಮತ್ತು ರವಿ (18) ಎಂದು ಗುರುತಿಸಲಾಗಿದೆ. ಬಿರುಗಾಳಿ ಮತ್ತು ಮಳೆಯಿಂದಾಗಿ ವಿದ್ಯುತ್ ಕಂಬಗಳು ಮುರಿದು ಅಲ್ಲಲ್ಲಿ ವಿದ್ಯುತ್ ತಂತಿಗಳು ಬಿದ್ದಿದ್ದವು. ಈ ಬಗ್ಗೆ ದಾಸೇನಹಳ್ಳಿಯ ಗ್ರಾಮಸ್ಥರು ಬೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಕಡಿತಗೊಳಿಸುವಂತೆ ಮನವಿ ಮಾಡಿದ್ದರು. ಇಷ್ಟಾದರೂ ಅಧಿಕಾರಿಗಳು ನಿರ್ಲಕ್ಷ ವಹಿಸಿ ವಿದ್ಯುತ್ ಕಡಿತ ಮಾಡಿರಲಿಲ್ಲ. ರವಿವಾರ ರಜಾ ದಿನ ಎಂಬ ಕಾರಣ ನೀಡಿ ಸ್ಥಳಕ್ಕೆ ಬಂದಿರಲಿಲ್ಲ. ಆದರೆ, ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದಿರುವ ವಿಚಾರ ಗೊತ್ತಿಲ್ಲದ ಮುನಿರಾಜು ಮತ್ತು ರವಿ ಹುಲ್ಲು ತರಲೆಂದು ತೋಟಕ್ಕೆ ಹೋಗಿದ್ದಾಗ ಕೆಳಗೆ ಬಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾರೆ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಘಟನೆ ಕಾರಣ ಎಂದು ಜನ ಆರೋಪಿಸಿದ್ದಾರೆ. ಘಟನೆ ಖಂಡಿಸಿ ಹೆಸರುಘಟ್ಟದ ಬೆಸ್ಕಾಂ ಕಚೇರಿ ಮುಂದೆ ಸಾರ್ವಜನಿಕರು ಜಮಾಯಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸರು, ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.