ಕೆಟ್ಟ ಕ್ರೆಡಿಟ್ ಸ್ಕೋರ್ ಬೀರುವ ನಕಾರಾತ್ಮಕ ಪರಿಣಾಮಗಳು ನಿಮಗೆ ಗೊತ್ತೇ....?

Update: 2018-06-04 12:28 GMT

ಕ್ರೆಡಿಟ್ ಬ್ಯೂರೊಗಳು ಮತ್ತು ಕ್ರೆಡಿಟ್ ಸ್ಕೋರ್‌ಗಳ ಬಗ್ಗೆ ಅರಿವು ಹೆಚ್ಚುತ್ತಿರುವುದರಿಂದ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದು ಒಳ್ಳೆಯದು ಎನ್ನುವುದು ಮಾತ್ರವಲ್ಲ, ಬ್ಯಾಂಕ್ ಸಾಲ ಮತ್ತು ಇನ್ನಿತರ ಸೌಲಭ್ಯಗಳನ್ನು ಪಡೆಯುವಲ್ಲಿ ಅದು ಮಹತ್ವದ್ದಾಗಿದೆ ಎನ್ನುವುದೂ ಈಗ ಜನರಿಗೆ ತಿಳಿದಿದೆ. 

ಕೆಟ್ಟ ಕ್ರೆಡಿಟ್ ಸ್ಕೋರ್ ಬೀರಬಹುದಾದ ಕೆಲವು ನಕಾರಾತ್ಮಕ ಪರಿಣಾಮಗಳ ಬಗ್ಗೆ ಮಾಹಿತಿಯಿಲ್ಲಿದೆ......

►ಸಾಲ ಮಂಜೂರಿಗೆ ಅಹಿತಕರ ನಿಬಂಧನೆಗಳು

ಯಾವುದೇ ವ್ಯಕ್ತಿ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಮೊದಲು ಆತನ ಸಿಬಿಲ್ ಸ್ಕೋರ್‌ನ್ನು ಪರಿಶೀಲಿಸುತ್ತವೆ. ಅದು ಅಗತ್ಯಕ್ಕಿಂತ ಕಡಿಮೆಯಿದ್ದರೆ ಅರ್ಜಿಯು ತಿರಸ್ಕರಿಸಲ್ಪಡಬಹುದು ಇಲ್ಲವೇ ಸಾಲ ನೀಡಿಕೆಗೆ ಹೊರೆ ಎನ್ನಿಸಬಹುದಾದ ನಿಬಂಧನೆಗಳನ್ನು ಒಡ್ಡಬಹುದು. ಅಧಿಕ ಬಡ್ಡಿದರ,ಭದ್ರತೆಯ ವೌಲ್ಯಕ್ಕೆ ಹೋಲಿಸಿದರೆ ಕಡಿಮೆ ಸಾಲ, ಸಾಲ ಮರುಪಾವತಿಗೆ ಕಡಿಮೆ ಅವಧಿ ಇತ್ಯಾದಿಗಳು ಇಂತಹ ನಿಬಂಧನೆಗಳಲ್ಲಿ ಸೇರಿವೆ. ಸಾಲದ ಅಗತ್ಯವಿರುವವರು ಅಧಿಕ ಬಡ್ಡಿದರಕ್ಕೆ ಒಪ್ಪಿಕೊಳ್ಳಬಹುದು,ಆದರೆ ಇದರಿಂದ ಅವರು ಸಾಲ ತೀರುವುದರೊಳಗೆ ಭಾರೀ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಗೃಹಸಾಲದ ಮೇಲೆ ಶೇ.1ರಷ್ಟು ಹೆಚ್ಚಿನ ಬಡ್ಡಿದರವಾದರೂ ಅದರಿಂದಾಗಿ ಸಾಲಗಾರ ಲಕ್ಷಗಟ್ಟಲೆ ರೂ.ಗಳಷ್ಟು ಹೆಚ್ಚುವರಿ ಬಡ್ಡಿಯನ್ನು ತುಂಬಬೇಕಾಗುತ್ತದೆ.

ಇದೇ ರೀತಿ ಸಾಲ ಪಡೆಯಲು ಬಯಸುವ ವ್ಯಕ್ತಿ ಮಾರುಕಟ್ಟೆಯಲ್ಲಿ ಒಂದು ಕೋಟಿ ರೂ.ವೌಲ್ಯವಿರುವ ಆಸ್ತಿಯನ್ನು ಭದ್ರತೆಯನ್ನಾಗಿ ನೀಡಿದರೆ ಬ್ಯಾಂಕು ಆತನಿಗೆ ಕೇವಲ 35 ಲ.ರೂ.ಸಾಲವನ್ನು ಮಂಜೂರು ಮಾಡಬಹುದು. ಅದೇ ಆತನ ಕ್ರೆಡಿಟ್ ಸ್ಕೋರ್ ಒಳ್ಳೆಯದಿದ್ದರೆ 50 ರಿಂದ 60 ಲ.ರೂ.ಸಾಲವನ್ನು ಪಡೆಯಬಹುದಿತ್ತು.

► ಅವಕಾಶಗಳು ತಪ್ಪುವಿಕೆ

ಇದು ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಕಡಿಮೆ ಕ್ರೆಡಿಟ್ ಸ್ಕೋರ್ ಸಾಲದ ಅರ್ಜಿಯ ತಿರಸ್ಕಾರಕ್ಕೆ ಕಾರಣವಾಗಬಹುದು. ಆದರೆ ಇಂತಹ ತಿರಸ್ಕಾರಗಳು ಇನ್ನಷ್ಟು ನಷ್ಟಕ್ಕೆ ಕಾರಣವಾಗುತ್ತವೆ ಎನ್ನುವುದು ವ್ಯಕ್ತಿಗೆ ಗೊತ್ತಾಗದಿರಬಹುದು. ನಿಜಜೀವನದ ಉದಾಹರಣೆಯನ್ನೇ ನೋಡೋಣ. ವ್ಯಕ್ತಿಯೋರ್ವ ಮನೆಯನ್ನು ಖರೀದಿಸಲು ಆಯ್ಕೆ ಮಾಡಿದ್ದ,ಆದರೆ ಕಡಿಮೆ ಕ್ರೆಡಿಟ್ ಸ್ಕೋರ್‌ನಿಂದಾಗಿ ಸಾಲದ ಅರ್ಜಿ ತಿರಸತಗೊಂಡು ಸ್ವಂತ ಮನೆಯನ್ನು ಹೊಂದುವ ಇಚ್ಛೆ ಈಡೇರಿರಲಿಲ್ಲ. ಆದರೆ ಸ್ವಂತ ಮನೆ ಹೊಂದಲೇಬೇಕೆಂಬ ಅತೀವ ಆಸೆಯಿದ್ದ ಆತ ಹರಸಾಹಸಪಟ್ಟು ತನ್ನ ಕ್ರೆಡಿಟ್ ಸ್ಕೋರ್‌ನ್ನು ಉತ್ತಮಗೊಳಿಸಿಕೊಂಡಿದ್ದ. ಆದರೆ ಇದಕ್ಕೆ ತಿಂಗಳುಗಳೇ ಬೇಕಾಗಿದ್ದವು ಮತ್ತು ಅದಾಗಲೇ ಆತ ನೋಡಿದ್ದ ಮನೆ ಬೇರೆಯವರಿಗೆ ಮಾರಾಟಗೊಂಡಿತ್ತು. ಗಾಯಕ್ಕೆ ಉಪ್ಪು ಎರಚಿದಂತೆ ಈ ವೇಳೆಗೆ ಆಸ್ತಿಗಳ ಬೆಲೆಗಳೂ ಹೆಚ್ಚಾಗಿದ್ದವು. ಹೀಗಾಗಿ ಮನೆಯನ್ನು ಖರೀದಿಸಲು ಆತ ಹೆಚ್ಚಿನ ಸಾಲವನ್ನು ಪಡೆಯಬೇಕಾಯಿತು.

► ದೂರವಾಣಿ ಸಂಪರ್ಕಗಳು

ಪೋಸ್ಟ್‌ಪೇಡ್ ಸಂಪರ್ಕಗಳನ್ನು ನೀಡಲು ಟೆಲಿಕಾಂ ಕಂಪನಿಗಳೂ ಕ್ರೆಡಿಟ್ ಸ್ಕೋರ್‌ನ್ನು ಪರಿಗಣಿಸುತ್ತಿವೆ. ಸಿಐಸಿ ಕಾಯ್ದೆಯಡಿ ಟೆಲಿಕಾಂ ಕಂಪನಿಗಳೂ ಕ್ರೆಡಿಟ್ ಬ್ಯೂರೊಗಳಿಂದ ಮಾಹಿತಿಗಳನ್ನು ಪಡೆಯಲು ಮತ್ತು ಅವುಗಳಿಗೆ ಗ್ರಾಹಕರ ಬಿಲ್ ಪಾವತಿ ಸಾಮರ್ಥ್ಯದ ಮಾಹಿತಿಗಳನ್ನು ಒದಗಿಸಲು ಅನುಮತಿಸಲ್ಪಟ್ಟಿವೆ. ಉದ್ಯಮದ ಮಾಹಿತಿಯಂತೆ ಟಿಲಿಕಾಂ ಕಂಪನಿಗಳೂ ಬ್ಯೂರೋ ಸ್ಕೋರ್‌ನ್ನು ಪರಿಶೀಲಿಸುತ್ತಿವೆ ಮತ್ತು ಅರ್ಜಿದಾರನ ಕ್ರೆಡಿಟ್ ಸ್ಕೋರ ಕಡಿಮೆಯಿದ್ದರೆ ಆತನಿಗೆ ಪೋಸ್ಟ್ ಪೇಡ್ ಸಂಪರ್ಕವನ್ನು ನೀಡಲು ನಿರಾಕರಿಸುತ್ತಿವೆ.

► ಸಾಲ ವಸೂಲಿಗಾರರಿಂದ ಕರೆಗಳು

ಕಡಿಮೆ ಕ್ರೆಡಿಟ್ ಸ್ಕೋರ್‌ನ ಇತರ ಸಂಗತಿಗಳು ಆರ್ಥಿಕ ನಷ್ಟಕ್ಕೆ ಸಂಬಂಧಿಸಿದ್ದರೆ ಸಾಲ ವಸೂಲಿಗಾರರಿಂದ ಬರುವ ಕರೆಗಳು ಮಾನಸಿಕ ಒತ್ತಡಗಳಿಗೆ ಕಾರಣವಾಗುತ್ತವೆ. ಇಂತಹ ಸಾಲ ವಸೂಲಿಗಾರರನ್ನು ನಿಭಾಯಿಸುವದು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತು. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವ ಸಾಲಗಾರ ಒಂದೇ ಒಂದು ಕಂತನ್ನು ಕಟ್ಟಲು ತಪ್ಪಿದರೂ ಅವರು ನಿರಂತರವಾಗಿ ಆತನ ಬೆನ್ನು ಬೀಳುವುದರಿಂದ ಸಮಸ್ಯೆಗಳು ಇನ್ನಷ್ಟು ಹೆಚ್ಚುತ್ತವೆ. ಇಂತಹ ಸಂದರ್ಭದಲ್ಲಿ ವ್ಯಕ್ತಿ ಅಸಹಾಯಕನಾಗಿಬಿಡುತ್ತಾನೆ.
ಕೆಟ್ಟ ಕ್ರೆಡಿಟ್ ಸ್ಕೋರ್ ಜೀವನದಲ್ಲಿ ಹೆಚ್ಚಿನ ತೊಡಕುಗಳಿಗೆ ಕಾರಣವಾಗಬಹದು. ಹೀಗಾಗಿ ಯಾವುದೇ ವ್ಯಕ್ತಿ ಸಾಲ ಪಡೆದರೆ ಅದನ್ನು ಸಕಾಲದಲ್ಲಿ ಕಟ್ಟಿ ತನ್ನ ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸುವುದು ಮುಖ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News