ಅಮೆರಿಕದ ಪೀಡಕ ಪ್ರವೃತ್ತಿಯ ವಿರುದ್ಧ ಜಗತ್ತು ಸೆಟೆದು ನಿಲ್ಲಬೇಕು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಝರೀಫ್

Update: 2018-06-04 14:36 GMT

ಕರೆಲಂಡನ್, ಜೂ. 4: ಅಮೆರಿಕದ ಪೀಡಕ ಪ್ರವೃತ್ತಿಯ ವಿರುದ್ಧ ಜಗತ್ತು ಸೆಟೆದು ನಿಲ್ಲಬೇಕು ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಝರೀಫ್ ಇತರ ದೇಶಗಳ ವಿದೇಶ ಸಚಿವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಇರಾನ್ ಹಾಗೂ ಜಾಗತಿಕ ಶಕ್ತಿಗಳ ನಡುವೆ 2015ರಲ್ಲಿ ಏರ್ಪಟ್ಟ ಪರಮಾಣು ಒಪ್ಪಂದದಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಹೊರಬಂದಿರುವುದನ್ನು ಸ್ಮರಿಸಬಹುದಾಗಿದೆ.ಇರಾನ್ ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸದಂತೆ ಖಾತರಿಪಡಿಸಲು ಈ ಒಪ್ಪಂದವು ಈಗಲೂ ಒಂದು ಪ್ರಮುಖ ಸಾಧನವಾಗಿದೆ ಎಂಬುದಾಗಿ ಒಪ್ಪಂದದ ಇತರ ಭಾಗೀದಾರ ದೇಶಗಳು ಭಾವಿಸಿವೆ ಹಾಗೂ ಒಪ್ಪಂದವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿವೆ.ಈ ಒಪ್ಪಂದ ಉಳಿಯಬೇಕು ಎಂದು ಇತರ ಭಾಗೀದಾರ ದೇಶಗಳು ಬಯಸಿದರೆ, ಅಮೆರಿಕದ ವಾಪಸಾತಿಯಿಂದ ಇರಾನ್‌ಗೆ ಉಂಟಾಗುವ ನಷ್ಟವನ್ನು ಅವುಗಳು ಭರಿಸಬೇಕು ಎಂಬುದಾಗಿ ಕಳೆದ ವಾರ ಬರೆದ ಪತ್ರದಲ್ಲಿ ಝರೀಫ್ ಒತ್ತಾಯಿಸಿದ್ದಾರೆ.

‘‘ಪರಮಾಣು ಒಪ್ಪಂದವು ಅದಕ್ಕೆ ಸಹಿಹಾಕಿದವರಿಗೆ ಸೇರಿದ್ದಲ್ಲ. ಹಾಗಾಗಿ, ದೇಶೀ ನೀತಿಗಳು ಅಥವಾ ಹಿಂದಿನ ಸರಕಾರದೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳ ಆಧಾರದಲ್ಲಿ ದೇಶವೊಂದು ಅದರಿಂದ ಹೊರಬರುವಂತಿಲ್ಲ’’ ಎಂದು ಝರೀಫ್ ತನ್ನ ಪತ್ರದಲ್ಲಿ ಹೇಳಿದ್ದಾರೆ.ಪತ್ರದ ಕೆಲವು ಭಾಗಗಳನ್ನು ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ರವಿವಾರ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News