ದಿನೇಶ್ ಅಮೀನ್ ಮಟ್ಟು ವಿರುದ್ಧ ಅಪಪ್ರಚಾರ: ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ

Update: 2018-06-04 17:00 GMT

ಬೆಂಗಳೂರು, ಜೂ. 4: ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ವಿರುದ್ಧ ಸುಳ್ಳು ವದಂತಿಗಳನ್ನು ಹರಡಿಸಿ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಗತಿಪರರು, ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಸೋಮವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತೆರಳಿದ ಸಂಘಟನಾಕಾರರು, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಕಮಲ್ ಪಂತ್ ಅವರಿಗೆ ಮನವಿ ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಭಾಸ್ಕರ್ ಪ್ರಸಾದ್ ಎಂಬಾತ ತಮ್ಮ ಫೇಸ್‌ಬುಕ್‌ನಲ್ಲಿ ಲೇಖಕನೊಬ್ಬನ ಹತ್ಯೆಗೆ ದಿನೇಶ್ ಅಮೀನ್ ಮಟ್ಟು ಸುಪಾರಿ ನೀಡಿದ್ದರು ಎಂದು ಬರೆದುಕೊಂಡಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.

ದಿನೇಶ್ ಅಮೀನ್ ಮಟ್ಟು ಅವರು ಮೊದಲಿನಿಂದಲೂ ಸಹ ಜನಪರ ವ್ಯಕ್ತಿಯಾಗಿದ್ದು, ಸುಪಾರಿ ಹೇಳಿಕೆ ಇರಲಿ, ಈ ನಿಟ್ಟಿನಲ್ಲಿಯೂ ಅವರು ಯೋಚನೆ ಮಾಡುವುದಿಲ್ಲ. ಎಲ್ಲ ಸಮುದಾಯದವರೊಡನೆಯೂ ಪ್ರೀತಿ, ಸೌಹಾರ್ದತೆಯಿಂದ ಇರುವ ಅಮೀನ್ ಮಟ್ಟು ಅವರು ತಮ್ಮನ್ನು ವಿರೋಧಿಸುವ ಬಳಗವನ್ನು ಸಹ ವಿಶ್ವಾಸ, ಗೌರವದಿಂದ ಕಾಣುತ್ತಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸುಪಾರಿ ಆರೋಪ ಮಾಡಿ ಸಮಾಜದ ಸ್ವಾಸ್ಥ ಹಾಳು ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅದೇ ರೀತಿ, ಈ ಸಂಬಂಧ ನಗರದ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ದಿನೇಶ್ ಅಮೀನ್ ಮಟ್ಟು ನೀಡಿರುವ ದೂರಿನ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಲಪಂಥೀಯರ ಬಂಧನವಾಗುತ್ತಿರುವ ಈ ಹೊತ್ತಿನಲ್ಲಿ ಸುಪಾರಿ ಆರೋಪವನ್ನು ಹರಿಬಿಡಲಾಗುತ್ತಿದೆ. ಬಲಪಂಥೀಯರ ಗುರಿಯಾಗಿರುವ ವಿಚಾರವಾದಿಗಳನ್ನೇ ಇಕ್ಕಟ್ಟಿಗೆ ಸಿಲುಕಿಸುವ ಸಂಚು ಇದಾಗಿದ್ದು, ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಲೇಖಕಿ ಡಾ.ವಸುಂಧರಾ ಭೂಪತಿ, ಹೋರಾಟಗಾರರಾದ ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ, ಆರ್.ಮೋಹನ್ ರಾಜ್, ಅನಂತ್‌ನಾಯ್ಕಿ, ಅಖಿಲ ವಿದ್ಯಾಸಂದ್ರ, ಜ್ಯೋತಿ ಅನಂತ ಸುಬ್ಬರಾವ್ ಎಂ.ಲಿಂಗಾರಾಜುಹಟ್ಟಿ, ಬಸವರಾಜ ಪೂಜಾರ, ಗುರುರಾಜ ದೇಸಾಯಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News