ಸದ್ಯ ಎರಡು ಸುಳಿವು ಲಭ್ಯವಾಗಿವೆ: ಸಿಐಡಿ ಪೊಲೀಸರಿಂದ ಹೈಕೋರ್ಟ್‌ಗೆ ಹೇಳಿಕೆ

Update: 2018-06-04 17:16 GMT

 ಬೆಂಗಳೂರು, ಜೂ.4: ಅತ್ಯಾಧುನಿಕ ತಂತ್ರಜ್ಞಾನ ವಿಧಾನಗಳ ಮೂಲಕ ಆರು ತಿಂಗಳ ಹಿಂದೆ ನಗರದಿಂದ ನಾಪತ್ತೆಯಾಗಿರುವ ಟೆಕ್ಕಿ ಅಜಿತಾಬ್ ಅವರನ್ನು ಪತ್ತೆ ಕಾರ್ಯ ನಡೆಸಲಾಗಿದ್ದು, ಸದ್ಯ ಎರಡು ಸುಳಿವು ಲಭ್ಯವಾಗಿವೆ ಎಂದು ಸಿಐಡಿ ಪೊಲೀಸರು ಹೈಕೋರ್ಟ್‌ಗೆ ತಿಳಿಸಿದೆ.

ಖಾಸಗಿ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದ ತನ್ನ ಮಗ ಕುಮಾರ್ ಅಜಿತಾಬ್ 2017ರ ಡಿಸೆಂಬರ್ 18ರ ಸಂಜೆ 6.30ಕ್ಕೆ ನಾಪತ್ತೆಯಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠಕ್ಕೆ, ಸಿಐಡಿ ತನಿಖಾಧಿಕಾರಿಗಳ ಪರ ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ , ಅಜಿತಾಬ್ ಬಗ್ಗೆ ಸದ್ಯ ಎರಡು ಸುಳಿವು ಲಭ್ಯವಾಗಿವೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ನಾಪತ್ತೆಯಾಗಿ ಹಲವು ತಿಂಗಳಾದರೂ ಅಜಿತಾಬ್‌ನನ್ನು ಪತ್ತೆ ಮಾಡಿಲ್ಲ. ಆದರೆ, ಡಿಐಜಿ ಮಕ್ಕಳು ನಾಪತ್ತೆಯಾದರೆ 48 ಗಂಟೆಯಲ್ಲಿ ಪತ್ತೆ ಹಚ್ಚುತ್ತೀರಿ. ಬೇರೆಯವರು ನಾಪತ್ತೆಯಾದರೆ ಏಕೆ ಅಷ್ಟು ಬೇಗ ಪತ್ತೆ ಹಚ್ಚುವುದಿಲ್ಲ. ಇನ್ನು ತನಿಖೆಯ ಪ್ರಗತಿ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸುವ ವರದಿಯಲ್ಲಿ ಸಾಮಾನ್ಯ ಸಂಗತಿ ಹೊರತುಪಡಿಸಿ ಯಾವುದೇ ವಿಶೇಷ ಸಂಗತಿಗಳು ಇರುವುದಿಲ್ಲ. ನಿಮಗೆ ಸಿಕ್ಕಿರುವ ಸುಳಿವು ಗೌಪ್ಯವಾಗಿಡುವಂತಹವು ಎನ್ನುವುದಾದರೆ, ಮುಚ್ಚಿದ ಲಕೋಟೆಯಲ್ಲಿ ಅದನ್ನು ಕೋರ್ಟ್‌ಗೆ ಸಲ್ಲಿಸಿ. ನ್ಯಾಯಾಲಯ ಪರಿಶೀಲಿಸಿ ನಿಮಗೆ ವಾಪಸ್ ನೀಡಲಿದೆ ಎಂದರು.

ಪೊನ್ನಣ್ಣ ಉತ್ತರಿಸಿ, ಅಜಿತಾಬ್ ಪತ್ತೆ ತನಿಖಾಧಿಕಾರಿಗಳು ಸಾಕಷ್ಟು ಶ್ರಮ ವಹಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ನಮಗೆ ದೊರೆತಿರುವ ಎಲ್ಲ ಸುಳಿವುಗಳ ಬಗ್ಗೆ ತನಿಖೆ ಮುಂದುವರಿಸಲಾಗುವುದು ಎಂದು ತಿಳಿಸಿದರು. ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News