ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಕನಿಷ್ಠ ದರದಲ್ಲಿ ನ್ಯಾಪ್‌ಕಿನ್: ಕೇಂದ್ರ ಸಚಿವ ಅನಂತ ಕುಮಾರ್

Update: 2018-06-05 13:21 GMT

ಬೆಂಗಳೂರು, ಜೂ.5: ದೇಶದಲ್ಲಿ ಶೇ.48ರಷ್ಟು ಮಹಿಳೆಯರು ದುಬಾರಿ ಎನ್ನುವ ಕಾರಣಕ್ಕಾಗಿ ನ್ಯಾಪ್‌ಕಿನ್ ಬಳಕೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಎಲ್ಲರಿಗೂ ಕೈಗೆಟಕುವ, ಗುಣಮಟ್ಟದ ಜನೌಷಧಿ ಸುವಿಧಾ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದರು.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯಡಿ ‘ಜನೌಷಧಿ ಸುವಿಧಾ ಸ್ಯಾನಿಟರಿ ನ್ಯಾಪ್‌ಕಿನ್’ ಅನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ದೇಶದ ಶೇ.58ರಷ್ಟು ಮಹಿಳೆಯರು ಮಾತ್ರ ಉತ್ತಮ ಸ್ಯಾನಿಟರಿ ನ್ಯಾಪ್‌ಕಿನ್ ಬಳಸುತ್ತಿದ್ದಾರೆ, ಮುಂಬೈ, ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ಶೇ.72 ಉತ್ತಮ ಗುಣಮಟ್ಟದ ನ್ಯಾಪ್‌ಕಿನ್ ಬಳಕೆ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಸರ್ವೆ ವರದಿ ನೀಡಿದೆ. ಇನ್ನುಳಿದ ಶೇ.48 ಮಹಿಳೆಯರು ಆರ್ಥಿಕ ದುರ್ಬಲತೆ, ಬಡತನದಿಂದಾಗಿ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹೀಗಾಗಿ ಸರಕಾರದ ವತಿಯಿಂದಲೆ ಉತ್ತಮ ಗುಣಮಟ್ಟದ ನ್ಯಾಪ್‌ಕಿನ್ ಜನೌಷಧಿ ಕೇಂದ್ರಗಳಲ್ಲಿ ಕನಿಷ್ಠ ಬೆಲೆಯಲ್ಲಿ ದೊರೆಯಲಿದೆ ಎಂದು ಅವರು ಹೇಳಿದರು.

ಸದ್ಯ ದೇಶದ ಮಾರುಕಟ್ಟೆಯಲ್ಲಿರುವ ಗುಣಮಟ್ಟದ ಸ್ಯಾನಿಟರಿ ನ್ಯಾಪ್‌ಕಿನ್ ಬೆಲೆ 38 ರೂ. ಇದೆ, ಪ್ರತಿ ನ್ಯಾಪ್‌ಕಿನ್‌ಗೆ 10 ರೂ.ಆಗಲಿದೆ. ಅಲ್ಲದೇ ಬಯೋ ಡಿಗ್ರೇಡಬಲ್ ನ್ಯಾಪ್‌ಕಿನ್ ಯಾವುದೂ ಇಲ್ಲ. ಹಾಗಾಗಿ ನಾವು ದೇಶದಲ್ಲೇ ಮೊದಲ ಬಯೋ ಡಿಗ್ರೆಡಬಲ್ ಸ್ಯಾನಿಟರಿ ನ್ಯಾಪ್‌ಕಿನ್ ಅನ್ನು ಬಿಡುಗಡೆ ಮಾಡಿದ್ದೇವೆ. ಕೇವಲ 10 ರೂ.ಗೆ ನಾಲ್ಕು ನ್ಯಾಪ್‌ಕಿನ್ ಸಿಗಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಟನ್ ನ್ಯಾಪ್‌ಕಿನ್ ಬಳಕೆ ಮಾಡಲಾಗುತ್ತಿದೆ. ಇದು 500 ವರ್ಷ ಆದರೂ ಡಿ ಕಂಪೋಸ್ ಆಗುವಂತಹದ್ದಲ್ಲ. ಆದರೆ, ಕೇಂದ್ರ ಸರಕಾರದ ಮೂಲಕ ಕೊಡಮಾಡುತ್ತಿರುವ ಆಕ್ಸೋ ಬಯೋ ಡಿಗ್ರೆಡಬಲ್ ತಂತ್ರಜ್ಞಾನದಿಂದ ನ್ಯಾಪ್‌ಕಿನ್ ತಯಾರಿ ಮಾಡಿದ್ದೇವೆ, ಇದು ಕೇವಲ 3-6 ತಿಂಗಳಿನಲ್ಲಿ ಬಯೋ ಡಿಗ್ರೆಡಬಲ್ ಆಗಲಿದೆ ಎಂದು ಅವರು ತಿಳಿಸಿದರು.

ಜುಲೈ 19 ರೊಳಗಿನ ದೇಶಾದ್ಯಂತ ಎಲ್ಲಾ ಮೂಲೆ ಮೂಲೆಗಳಲ್ಲಿಯೂ ಈ ಸುವಿಧಾ ನ್ಯಾಪ್‌ಕಿನ್ ಲಭ್ಯವಾಗಲಿದೆ. ಸೂಕ್ತ ಸಮಯದಲ್ಲಿ ನ್ಯಾಪ್‌ಕಿನ್ ಸಿಗುವಂತೆ ಮಾಡಲು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಅಧಿಕಾರಿಗಳಾದ ನೀರಜಾ ಶರತ್, ಸಚಿನ್ ಸಿಂಗ್, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News