ಜನವಂಚನೆಯ ನಾಲ್ಕು ವರ್ಷಗಳು

Update: 2018-06-06 04:13 GMT

ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳು ಗತಿಸಿದವು. ಮುಂದಿನ ವರ್ಷ ಮತ್ತೆ ಜನಾದೇಶ ಪಡೆಯಲು ಇವರು ಮತದಾರರ ಬಳಿ ಹೋಗಬೇಕಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಸರಕಾರ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ನಿರಾಶಾದಾಯಕ ಚಿತ್ರ ಕಣ್ಣ ಮುಂದೆ ಗೋಚರಿಸುತ್ತದೆ. ಅಂತಲೇ ನಾಲ್ಕನೇ ವಾರ್ಷಿಕೋತ್ಸವ ಆಚರಿಸುವ ಸಂಭ್ರಮ ಬಿಜೆಪಿಯಲ್ಲಿ ಕಾಣುತ್ತಿಲ್ಲ. ಜನತೆಗೆ ನೀಡಿದ ಭರವಸೆ ಈಡೇರಿಸುವುದು ಒತ್ತಟ್ಟಿಗೆ ಇರಲಿ ಕಳೆದ ನಾಲ್ಕು ವರ್ಷಗಳಲ್ಲಿ ಜನಸಾಮಾನ್ಯರ ನೆಮ್ಮದಿಯನ್ನು ಹಾಳುಮಾಡಿ ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿಸಿದ ಸರಕಾರ ಇದು. ಬರೀ ಮಾತನಾಡುತ್ತಲೇ ನಾಲ್ಕು ವರ್ಷಗಳನ್ನು ಕಳೆದ ಪ್ರಧಾನಮಂತ್ರಿ ಸದಾ ವಿದೇಶ ಪ್ರವಾಸ ಮಾಡುತ್ತಾ ಆಗಾಗ ಭಾರತಕ್ಕೆ ಬಂದು ‘ಮನ್ ಕಿ ಬಾತ್’ ಎಂದು ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಯಾವ ಸಾಧನೆಯನ್ನೂ ಮಾಡಲಿಲ್ಲ.

‘ಅಚ್ಛೇ ದಿನಗಳು’ ಬಂದೇ ಬರುತ್ತವೆ ಎಂದು ಕನ್ನಡಿಯೊಳಗಿನ ಗಂಟನ್ನು ಇವರು ತೋರಿಸುತ್ತಲೇ ಇರುತ್ತಾರೆ. 2014ರಲ್ಲಿ ಅಧಿಕಾರಕ್ಕೆ ಬರುವಾಗ ಯುವಜನತೆಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಇವರು ಹೇಳಿದ್ದರು. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿದ್ದರು. ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಗೆ ಕಡಿವಾಣ ಹಾಕುವುದಾಗಿ ಆಶ್ವಾಸನೆ ನೀಡಿದ್ದರು. ಸ್ವಾತಂತ್ರಾನಂತರ ಹಿಂದಿನ ಯಾವ ಸರಕಾರಗಳೂ ಸಾಧಿಸಲಾಗದ ಪ್ರಗತಿಯನ್ನು ಸಾಧಿಸುವುದಾಗಿ ಭ್ರಮೆಯನ್ನು ಹುಟ್ಟಿಸಿದ್ದರು. ಈ ದೇಶದಲ್ಲಿ ನೆಹರೂ ಅವರಿಂದ ಹಿಡಿದು ವಾಜಪೇಯಿ, ಮನಮೋಹನ್ ಸಿಂಗ್‌ವರೆಗೆ ಎಲ್ಲರ ಕಾಲದಲ್ಲೂ ದೇಶ ಹಾಳಾಗಿ ಹೋಗಿತ್ತು ಎಂದು ಅದನ್ನು ಸುಸ್ಥಿತಿಗೆ ತರುವುದಾಗಿ ಯುವಕರಲ್ಲಿ ಹುಸಿ ಭ್ರಮೆಯನ್ನು ಸೃಷ್ಟಿಸಿದ್ದರು. ಯಾರಿಗೂ ಪಕ್ಷಪಾತ ಮಾಡುವುದಿಲ್ಲ, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಘೋಷಣೆ ಮಾಡಿದ್ದರು. ಆದರೆ, ಈ ನಾಲ್ಕು ವರ್ಷಗಳಲ್ಲಿ ಜನತೆಗೆ ನೀಡಿದ ಯಾವ ಭರವಸೆಗಳನ್ನೂ ಈಡೇರಿಸಲಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಸುವುದು ಒತ್ತಟ್ಟಿಗೆ ಇರಲಿ 2 ಲಕ್ಷ ಉದ್ಯೋಗಗಳನ್ನು ಕೂಡಾ ಇವರು ಸೃಷ್ಟಿಸಲಿಲ್ಲ. ರೈತರಿಗೆ ನೀಡಿದ ಭರವಸೆ ಈಡೇರಿಸಲಾಗದೆ ರೈತರು ಎಲ್ಲಾ ಕಡೆಗಳಲ್ಲಿ ಹೋರಾಟಕ್ಕೆ ಇಳಿದಿದ್ದಾರೆ. ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ.

2014ರಲ್ಲಿ 390 ರೂ.ಗೆ ಸಿಗುತ್ತಿದ್ದ ಗ್ಯಾಸ್ ಸಿಲಿಂಡರ್‌ಗೆ ಈಗ 800 ರೂ. ಆಗಿದೆ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕುಸಿದರೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀ.ಗೆ 100 ರೂ.ಗೆ ಸಮೀಪಿಸಿದೆ. ಬಡವರ ಮೇಲೆ ತೆರಿಗೆಯ ಹೊರೆ ಹೆಚ್ಚಾಗಿದೆ. ಕಾರ್ಪೊರೇಟ್ ಬಂಡವಾಳಗಾರರಿಗೆ ರಿಯಾಯಿತಿಯ ಮೇಲೆ ರಿಯಾಯಿತಿ ನೀಡಲಾಗುತ್ತಿದೆ. ಇದು ಈ ಸರಕಾರದ ಸಾಧನೆ. ಅಧಿಕಾರಕ್ಕೆ ಬಂದ ಹೊಸದರಲ್ಲಿ ಪ್ರಧಾನಿ ನರೇಂದ್ರ ಮೋದಿ ತಾನು ಪ್ರಧಾನ ಸೇವಕ ಮತ್ತು ಚೌಕಿದಾರ್(ಕಾವಲುಗಾರ) ಎಂದು ತನ್ನನ್ನು ತಾನು ಕರೆದುಕೊಂಡಿದ್ದರು. ಆದರೆ, ಚೌಕಿದಾರನ ಕಣ್ಣೆದುರೇ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿದ್ದ ನೀರವ್ ಮೋದಿ, ಲಲಿತ್ ಮೋದಿ ಮತ್ತು ವಿಜಯ ಮಲ್ಯ ಮುಂತಾದ ಉದ್ಯಮಪತಿಗಳು ಹಣವನ್ನು ದೋಚಿಕೊಂಡು ವಿದೇಶಕ್ಕೆ ಹಾರಿದರು. ಇವರನ್ನು ಹಿಡಿಯಲು ಈ ಸರಕಾರದಿಂದ ಸಾಧ್ಯವಾಗಲಿಲ್ಲ. ಈ ಪೈಕಿ ನೀರವ್ ಮೋದಿ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಕ್ಕೆ ಹೋಗಿದ್ದಾಗ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇದರೊಂದಿಗೆ ದೇಶದಲ್ಲಿ ಅಂಬಾನಿ, ಅದಾನಿ ಸೇರಿದಂತೆ ಭಾರೀ ಉದ್ಯಮಪತಿಗಳ ಲಕ್ಷಾಂತರ ಕೋಟಿ ರೂ. ಸಾಲವನ್ನು ಮನ್ನಾ ಮಾಡಲಾಗಿದೆ. ಹೀಗಾಗಿ ಬ್ಯಾಂಕುಗಳು ದಿವಾಳಿಯ ಅಂಚಿಗೆ ಬಂದು ನಿಂತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಒಂದೆಡೆ ಜನಸಾಮಾನ್ಯರ ಬದುಕು ಅಸಹನೀಯ ಸಂಕಟಕ್ಕೆ ದೂಡಲ್ಪಟ್ಟಿದ್ದರೆ, ಇನ್ನೊಂದೆಡೆ ಕಳೆದ ಏಳು ದಶಕಗಳ ಕಾಲದಿಂದ ಈ ದೇಶವನ್ನು ಕಾಪಾಡಿದ ಸಂವಿಧಾನಕ್ಕೆ ಗಂಡಾಂತರ ಎದುರಾಗಿದೆ. ಪ್ರಜಾಪ್ರಭುತ್ವದ ಅಡಿಪಾಯ ಕುಸಿಯುತ್ತಿದೆ. ಅಧಿಕಾರಕ್ಕೆ ಬಂದ ಹೊಸದರಲ್ಲಿ ಯೋಜನಾ ಆಯೋಗವನ್ನು ರದ್ದುಪಡಿಸಿ ನೀತಿ ಆಯೋಗವನ್ನು ಮಾಡಿದ ನರೇಂದ್ರ ಮೋದಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನು ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ತನ್ನ ರಾಜಕೀಯ ಎದುರಾಳಿಗಳನ್ನು ಬಾಯಿ ಮುಚ್ಚಿಸಲು ಸಿಬಿಐನಂತಹ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗವನ್ನು ಕೂಡಾ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ನಿಯಂತ್ರಿಸುತ್ತಿದೆ ಎಂಬ ಶಂಕೆ ಉಂಟಾಗುತ್ತಿದೆ. ಗುಜರಾತ್‌ನ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ರಕ್ಷಿಸಲು ಯತ್ನಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಲೋಯಾ ಅವರ ಸಾವು ದಟ್ಟ ಸಂದೇಹಕ್ಕೆ ಕಾರಣವಾಗಿದೆ. ಈ ಸಾವಿನ ಮರುವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇವೆಲ್ಲ ತೀರಾ ಆತಂಕ ಮೂಡಿಸುವ ಸಂಗತಿಗಳಾಗಿವೆ. ಇನ್ನೊಂದೆಡೆ ವಿದೇಶಾಂಗ ನೀತಿಯಲ್ಲಿ ಕೂಡಾ ಈ ಸರಕಾರ ಎಡವುತ್ತಲೇ ಇದೆ. ನೆಹರೂ ಕಾಲದಿಂದ ಅನುಸರಿಸಿಕೊಂಡು ಬಂದ ಸ್ವತಂತ್ರ ವಿದೇಶಾಂಗ ನೀತಿಯನ್ನು ಗಾಳಿಗೆ ತೂರಲಾಗಿದೆ. ಅಮೆರಿಕನ್ ಸಾಮ್ರಾಜ್ಯಶಾಹಿಯ ಆಣತಿಗೆ ತಕ್ಕಂತೆ ಈ ಸರಕಾರ ಕುಣಿಯುತ್ತಿದೆ. ಜನತೆಗೆ ಒಳ್ಳೆಯ ದಿನಗಳನ್ನು ತರುವುದು ಒತ್ತಟ್ಟಿಗೆ ಇರಲಿ ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ತೆಗೆದುಕೊಂಡ ನೋಟು ರದ್ದತಿ ಕ್ರಮ ಮತ್ತು ಜಿಎಸ್‌ಟಿಗಳಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಯಿತು. ಅಷ್ಟೇ ಅಲ್ಲದೇ ದೇಶದ ಆರ್ಥಿಕತೆಗೆ ಚೇತರಿಸಲಾಗದ ಪೆಟ್ಟುಬಿದ್ದಿದೆ. ರಿಸರ್ವ್ ಬ್ಯಾಂಕ್ ಗವರ್ನರ್‌ಗೆ ಗೊತ್ತಿಲ್ಲದೆ ನೋಟು ರದ್ದತಿ ಮಾಡಲಾಯಿತು ಎಂಬ ಆರೋಪಗಳೂ ಕೇಳಿ ಬಂದವು.

ಕಪ್ಪು ಹಣವನ್ನು ಹೊರಗೆಳೆಯಲು ನೋಟು ರದ್ದತಿ ಮಾಡಲಾಯಿತು ಎಂದು ಹೇಳಲಾಯಿತು. ಆದರೆ, ಎಷ್ಟು ಕಪ್ಪು ಹಣ ಹೊರಗೆ ಬಂತು ಎಂಬ ಲೆಕ್ಕವನ್ನು ಸರಕಾರ ಕೊಡಲಿಲ್ಲ. ಪ್ರತಿಯೊಂದು ರಂಗದಲ್ಲೂ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ದೇಶದ ಸಣ್ಣಪುಟ್ಟ ಉದ್ಯಮಗಳು ಮತ್ತು ಮಧ್ಯಮದರ್ಜೆಯ ಉದ್ಯಮಗಳು ದಿವಾಳಿಯಾಗಿವೆ. ಇನ್ನೊಂದೆಡೆ ಕಾರ್ಮಿಕ ಕಾನೂನಿಗೆ ತಿದ್ದುಪಡಿ ತಂದು ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ. ಎಚ್‌ಎಎಲ್ ಮತ್ತು ಬಿಇಎಲ್‌ನಂತಹ ಸಾರ್ವಜನಿಕ ರಂಗದ ಉದ್ಯಮಗಳನ್ನು ವ್ಯವಸ್ಥಿತವಾಗಿ ನಾಶ ಮಾಡಲು ಹಾಗೂ ಖಾಸಗಿ ರಂಗದ ಉದ್ಯಮಗಳನ್ನು ಪ್ರೋತ್ಸಾಹಿಸಲು ಸರಕಾರ ಯತ್ನಿಸುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಾಶ ಮಾಡಲು ಹೊರಟಿರುವ ಮೋದಿ ಸರಕಾರ ಇಡೀ ಶೈಕ್ಷಣಿಕ ರಂಗವನ್ನು ಕೋಮುವಾದೀಕರಿಸಲು ಹುನ್ನಾರ ನಡೆಸಿದೆ. ವಿಶ್ವವಿದ್ಯಾನಿಲಯಗಳ ಆಡಳಿತದಲ್ಲೂ ಹಸ್ತಕ್ಷೇಪ ಮಾಡಲಾಗುತ್ತಿದೆ. ಹೀಗಾಗಿ ದಿಲ್ಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕೋಲಾಹಲದ ವಾತಾವರಣ ಉಂಟಾಗಿದೆ.

ನಮ್ಮ ಬಹುತೇಕ ವಿಶ್ವವಿದ್ಯಾನಿಲಯಗಳು ರಣರಂಗಗಳಾಗಿ ಮಾರ್ಪಟ್ಟಿವೆ. ಮೋದಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರನ್ನು ಕೋಮು ಆಧಾರದಲ್ಲಿ ವಿಭಜಿಸಲು ಹೊರಟಿದೆ. ಗೋ ರಕ್ಷಣೆಯ ಹೆಸರಿನಲ್ಲಿ ಅಮಾಯಕರನ್ನು ಹಾಡಹಗಲೇ ಕೊಲ್ಲಲಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಪರಾಭವಗೊಂಡಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆದ್ದುಬರುವ ಭರವಸೆಯನ್ನು ಬಿಜೆಪಿ ಕಳೆದುಕೊಂಡಿದೆ. ಅದಕ್ಕಾಗಿ ಕೋಮು ಉನ್ಮಾದವನ್ನು ಕೆರಳಿಸುವ ಯತ್ನ ನಡೆಸುತ್ತಿದೆ. ಜನವಂಚನೆಯ ನಾಲ್ಕು ವರ್ಷಗಳ ವೈಫಲ್ಯವನ್ನು ಮುಚ್ಚಿಕೊಳ್ಳಲು ಅದು ಕಸರತ್ತುಗಳನ್ನು ನಡೆಸಿದೆ. ಆದರೆ, ಜನರು ಈ ಸರಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News