ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸಿಇಒ ಜೇಮ್ಸ್ ಸದರ್ಲಾಂಡ್ ರಾಜೀನಾಮೆಗೆ ನಿರ್ಧಾರ

Update: 2018-06-06 14:58 GMT

ಸಿಡ್ನಿ, ಜೂ.6: ಬಾಲ್ ಟ್ಯಾಂಪರಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ (ಆಸ್ಟ್ರೇಲಿಯಾ ಕ್ರಿಕೆಟ್ ನಿಯಂತ್ರಣ ಮಂಡಳಿ) ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಸದರ್ಲಾಂಡ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದು, ಸೂಕ್ತ ಬದಲಿ ಅಭ್ಯರ್ಥಿ ಆಯ್ಕೆಯಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಈ ಕುರಿತು ಅವರು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ 12 ತಿಂಗಳ ನೋಟಿಸ್ ನೀಡಿದ್ದಾರೆ. ಕ್ರಿಕೆಟ್ ಆಟವು ಸುಗಮವಾಗಿ ಸಾಗಬೇಕೆಂಬುದು ತನ್ನ ಇರಾದೆಯಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ 20 ವರ್ಷದ ಸೇವಾವಧಿಯಲ್ಲಿ 17 ವರ್ಷಗಳ ಕಾಲ ಸಿಇಒ ಹುದ್ದೆ ನಿರ್ವಹಿಸಿದ ಬಳಿಕ ಇದೀಗ ಹುದ್ದೆ ತ್ಯಜಿಸಲು ಸಕಾಲ ಎಂದು ಭಾವಿಸಿರುವುದಾಗಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ಮಾರ್ಚ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಕ್ರಿಕೆಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಆಟಗಾರ ಕ್ಯಾಮರಾನ್ ಬ್ಯಾಂಕ್ರಾಫ್ಟ್‌ರನ್ನು ಒಂದು ವರ್ಷದ ಅವಧಿಗೆ ಕ್ರಿಕೆಟ್ ಆಡುವುದರಿಂದ ನಿಷೇಧಿಸಲಾಗಿತ್ತು. ಬಳಿಕ ತಂಡದ ಮುಖ್ಯ ಕೋಚ್ ಆಗಿದ್ದ ಡ್ಯಾರೆನ್ ಲೆಹ್ಮನ್ ಕೂಡಾ ರಾಜೀನಾಮೆ ನೀಡಿದ್ದರು. ಈ ಸಂದರ್ಭ ಸದರ್ಲಾಂಡ್ ವಿರುದ್ಧವೂ ಟೀಕೆ ಕೇಳಿಬಂದಿತ್ತು. ಇದೊಂದು ಪ್ರಮುಖ ಪ್ರಕರಣವಾಗಿದೆ. ಆದರೆ ಪ್ರಮುಖ ಕ್ರೀಡೆಯೊಂದರ ಸಿಇಒ ಆಗಿರುವಾಗ ಇಂತಹ ಪ್ರಕರಣಗಳನ್ನು ಆಗಾಗ ಎದುರಿಸಬೇಕಾಗುತ್ತದೆ ಎಂದ ಸದರ್ಲಾಂಡ್, ತನ್ನ ನಿರ್ಧಾರಕ್ಕೆ ಬಾಲ್ ಟ್ಯಾಂಪರಿಂಗ್ ಪ್ರಕರಣ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News