ಒಮನ್: ವಿದೇಶಿಯರಿಗೆ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಲು ಅವಕಾಶ

Update: 2018-06-06 16:58 GMT

ಮಸ್ಕತ್ (ಒಮನ್), ಜೂ. 6: ಒಮನ್ ದೇಶದ ಪ್ರಜೆಗಳಲ್ಲದ ನಿಪುಣ ಕೆಲಸಗಾರರು ಇನ್ನು ಮುಂದೆ ತಾತ್ಕಾಲಿಕ ಉದ್ಯೋಗ ಪರವಾನಿಗೆಯಡಿ ಆ ದೇಶದಲ್ಲಿ ನಿರ್ದಿಷ್ಟ ಅವಧಿಗೆ ಕೆಲಸ ಮಾಡಬಹುದಾಗಿದೆ.

ವಿಶೇಷ ನೈಪುಣ್ಯ ಅಗತ್ಯವಿರುವ ಕ್ಷೇತ್ರಗಳಲ್ಲಿ ವಿದೇಶೀಯರಿಗೆ ಇರುವ ಬೇಡಿಕೆಯನ್ನು ಪೂರೈಸುವುದಕ್ಕಾಗಿ ತರಬೇಕಾಗಿರುವ ನೂತನ ತಿದ್ದುಪಡಿಯನ್ನು ಒಮನ್ ಸರಕಾರ ರೂಪಿಸುತ್ತಿದೆ.

ವೈದ್ಯಕೀಯ, ಶೈಕ್ಷಣಿಕ, ತಾಂತ್ರಿಕ, ಸಲಹೆಯ ಪರಿಣತಿ ಮತ್ತು ತರಬೇತಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನಿಪುಣ ಕೆಲಸಗಾರರಿಗೆ ತಾತ್ಕಾಲಿಕ ಉದ್ಯೋಗ ಪರ್ಮಿಟ್‌ಗಳನ್ನು ನೀಡಲಾಗುವುದು ಎಂದು ‘ಇಂಪ್ಲಿಮೆಂಟೇಶನ್ ಸಪೋರ್ಟ್ ಆ್ಯಂಡ್ ಫಾಲೋ-ಅಪ್ ಘಟಕದ ವಾರ್ಷಿಕ ವರದಿ ತಿಳಿಸಿದೆ.

 ಕಾರ್ಮಿಕ ಮಾರುಕಟ್ಟೆಯ ಬೇಡಿಕೆಗೆ ಅನುಸಾರವಾಗಿ, ಈ ಪರಿಣತ ಹುದ್ದೆಗಳನ್ನು ಮಾನವ ಸಂಪನ್ಮೂಲ ಸಚಿವಾಲಯವು ಪರಿಷ್ಕರಿಸುವುದು ಎಂದು ‘ಟೈಮ್ಸ್ ಆಫ್ ಒಮನ್’ ವರದಿ ಮಾಡಿದೆ.

‘‘ಹೆಚ್ಚುವರಿ ಸಿಬ್ಬಂದಿ ಅಗತ್ಯವಿರುವ ಖಾಸಗಿ ಉದ್ಯಮಗಳಿಗೆ ನೆರವು ನೀಡುವುದಕ್ಕಾಗಿ, ವಿದೇಶೀಯರ ಚಲನವಲನವನ್ನು ಸುಗಮಗೊಳಿಸಲು ದೂರದೃಷ್ಟಿಯ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕಾನೂನು ತಿದ್ದುಪಡಿಯ ಬಳಿಕ, ಒಂದು ಕಂಪೆನಿಯು ತನ್ನ ವಿದೇಶಿ ಉದ್ಯೋಗಿಯನ್ನು ಇನ್ನೊಂದು ಕಂಪೆನಿಗೆ ಮೂರು ತಿಂಗಳ ಅವಧಿಗೆ ವರ್ಗಾಯಿಸಬಹುದಾಗಿದೆ ಹಾಗೂ ಈ ಬಗ್ಗೆ ಮಾಹಿತಿಯನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ನೀಡಬೇಕಾಗುತ್ತದೆ’’ ಎಂದು ವರದಿ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News