ಅಮೆರಿಕ ವಿವಿಗಳಲ್ಲಿ ಹಿಂಸಾಚಾರಕ್ಕೆ ತಿರುಗಿದ ಇಸ್ರೇಲ್ ವಿರೋಧಿ ಪ್ರತಿಭಟನೆ

Update: 2024-04-28 16:20 GMT

PC : NDTV

ಹೊಸದಿಲ್ಲಿ : ಗಾಝಾದ ಮೇಲೆ ಇಸ್ರೇಲ್ ದಾಳಿಯನ್ನು ವಿರೋಧಿಸಿ ಅಮೆರಿಕಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ನಡೆಸುತ್ತಿರುವ ಪ್ರತಿಭಟನೆ ಶನಿವಾರ ತೀವ್ರಗೊಂಡಿದೆ. ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಪೊಲೀಸರು ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿದೆ.

ಅಮೆರಿಕಾದ್ಯಂತ ಪ್ರತಿಭಟನೆಗಳು ಬಹುತೇಕ ಶಾಂತಿಯುತವಾಗಿದ್ದರೂ, ಅಟ್ಲಾಂಟಾದ ಎಮೊರಿ ವಿಶ್ವವಿದ್ಯಾನಿಲಯದ ಆವರಣಗಳಲ್ಲಿ ಪೊಲೀಸರು, ವಿದ್ಯಾರ್ಥಿ ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದಿದೆ. ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾಗೂ ರಬ್ಬರ್ ಗುಂಡುಗಳನ್ನು ಸಿಡಿಸಿದ್ದಾರೆ.

ಮಿಡ್‌ವೆಸ್ಟ್‌ನ ಬ್ಲೂಮಿಂಗ್ಟನ್‌ನ ಇಂಡಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಆವರಣದಲ್ಲಿ ಟೆಂಟ್ ಸ್ಥಾಪಿಸಿ ಧರಣಿ ನಡೆಸುತ್ತಿದ್ದ 23 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅರಿರೆನಾ ರಾಜ್ಯ ವಿವಿಯ ಆವರಣದಲ್ಲಿಯೂ ಸ್ಥಾಪಿಸಲಾಗಿದ್ದ ಅನಧಿಕೃತ ಶಿಬಿರವೊಂದನ್ನು ಪೊಲೀಸರು ತೆರವುಗೊಳಿಸಿದ್ದು, ಅತಿಕ್ರಮ ಪ್ರವೇಶದ ಆರೋಪದಲ್ಲಿ 69 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರು ವಿವಿಯ ವಿದ್ಯಾರ್ಥಿಗಳಾಗಲಿ, ಬೋಧಕವರ್ಗ ಅಥವಾ ಸಿಬ್ಬಂದಿಯಾಗಲಿ ಅಲ್ಲವೆಂದು ಅರಿರೆನಾ ವಿವಿ ಅಧಿಕಾರಿಗಳು ತಿಳಿಸಿದ್ದಾರೆ. ಅರಿರೆನಾ ವಿವಿಯಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಯನ್ನು ನಡೆಸಲು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಸೈಂಟ್ ಲೂಯಿಸ್‌ನಲ್ಲಿರುವ ವಾಶಿಂಗ್ಟನ್ ವಿವಿಯಲ್ಲಿ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜಿಲ್ ಸ್ಟೆಯಿನ್ ಹಾಗೂ ಆಕೆಯ ಪ್ರಚಾರ ಮ್ಯಾನೇಜರ್ ಸೇರಿದಂತೆ ಕನಿಷ್ಠ 80 ಮಂದಿ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಬೋಧಕವರ್ಗವನ್ನು ವಜಾಗೊಳಿಸಕೂಡದು ಅಥವಾ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಬಾರದು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ಕಳೆದ ವಾರ ನ್ಯೂಯಾರ್ಕ್‌ನ ಕೊಲಂಬಿಯಾ ವಿವಿಯಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ 100ಕ್ಕೂ ಅಧಿಕ ವಿದ್ಯಾರ್ಥಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಹತ್ತು ದಿನಗಳಲ್ಲಿ ಯೇಲ್ ವಿವಿ, ದಕ್ಷಿಣ ಕ್ಯಾಲಿಫೋರ್ನಿಯಾ ವಿವಿ , ವ್ಯಾಂಡರ್‌ಬಿಟ್ ವಿವಿ ಹಾಗೂ ಮಿನ್ನೆಸೊಟಾ ವಿವಿ ಸೇರಿದಂತೆ ಗಾಝಾ ಯುದ್ಧ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಅಥವಾ ಅವರನ್ನು ನಿಗಾವಣೆಯಲ್ಲಿರಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳನ್ನು ಕಾಲೇಜುಗಳಿಂದ ಉಚ್ಚಾಟಿಸಲಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಫೆಲೆಸ್ತೀನ್ ಪರ ಪ್ರತಿಭಟನೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಕೆಲವು ವಿಶ್ವವಿದ್ಯಾನಿಲಯಗಳು ಪದವಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ಈ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಕ್ಕಾಗಿ ವಿದ್ಚಾರ್ಥಿಗಳು ಭಾರೀ ಬೆಲೆಯನ್ನು ತೆರಬೇಕಾಗಿ ಬರಬಹುದು ಎಂದು ನ್ಯೂಜೆರ್ಸಿಯ ಪ್ರಿನ್ಸ್‌ಟನ್ ವಿವಿಯಿಂದ ವರದಿ ಮಾಡುತ್ತಿರುವ ಅಲ್‌ಜಝೀರಾ ಪತ್ರಕರ್ತ ಜಾನ್ ಹೆಂಡ್ರೆನ್ ಕಳವಳ ವ್ಯಕ್ತಪಡಿಸಿದ್ದಾರೆ. ವಾರ್ಷಿಕವಾಗಿ 50 ಸಾವಿರ ಡಾಲರ್ ಬೋಧನಾ ಶುಲ್ಕವನ್ನು ವಿಧಿಸಲಾಗುವ ಪ್ರಿನ್ಸ್‌ಟನ್ ವಿವಿಯಲ್ಲಿ ನಿಯಮಗಳನ್ನು ಉಲ್ಲಂಘಿಸುವ ವಿದ್ಯಾರ್ಥಿಗಳನ್ನು ಉಚ್ಚಾಟನೆಗೊಳಿಸಬಹುದಾಗಿದೆ.

ವಿವಿ ಕ್ಯಾಂಪಸ್‌ನಲ್ಲಿ ತಾತ್ಕಾಲಿಕ ಶಿಬಿರವನ್ನು ಸ್ಥಾಪಿಸಿದ್ದ ನ್ಯೂಯಾರ್ಕ್‌ನ ಕೊರ್ನೆಲ್ ವಿವಿಯ ನಾಲ್ವರು ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು.

ಈ ಮಧ್ಯೆ ಗಾಝಾದಲ್ಲಿ ಇಸ್ರೇಲ್ ಸೇನೆಯಿಂದ ಫೆಲೆಸ್ತೀನ್ ಪ್ರಜೆಗಳ ಮಾರಣಹೋಮವನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಕೆನಡ, ಯುರೋಪ್ ಹಾಗೂ ಆಸ್ಟ್ರೇಲಿಯಗಳಲ್ಲಿ ಶಾಲೆಗಳಿಗೂ ವಿಸ್ತರಿಸಿದೆ.

ಕೆನಡಾದ ಮಾಂಟ್ರಿಯಲ್‌ನಲ್ಲಿರುವ ಮ್ಯಾಕ್‌ ಗಿಲ್ ವಿವಿಯಲ್ಲಿ ಫೆಲೆಸ್ತೀನ್ ಪರ ವಿದ್ಯಾರ್ಥಿಗಳು ಪ್ರತಿಭಟನಾ ಶಿಬಿರವೊಂದನ್ನು ಸ್ಥಾಪಿಸಿದ್ದಾರೆ. ಇಸ್ರೇಲ್‌ನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಜೊತೆ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News