ತುರ್ತು ವೈದ್ಯಕೀಯ ಸಂದರ್ಭಕ್ಕಾಗಿ ನಿಮ್ಮ ಸಿದ್ಧತೆಗಳು ಹೀಗಿರಲಿ....

Update: 2018-06-07 11:16 GMT

ಕುಟುಂಬದಲ್ಲಿ ಯಾರಾದರೂ ಮಧುಮೇಹ,ಅಧಿಕ ರಕ್ತದೊತ್ತಡ, ಹೃದ್ರೋಗ ಅಥವಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ ರೋಗಿಗೆ ಮಾತ್ರ ಕಷ್ಟವಲ್ಲ, ರೋಗಿಯನ್ನು ನೋಡಿಕೊಳ್ಳುವವರೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಬಂಧುಗಳು ಮತ್ತು ಸ್ನೇಹಿತರು ಸ್ವಲ್ಪ ಮಟ್ಟಿಗೆ ನೆರವಾಗಬಹುದಾದರೂ ರೋಗಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕುಟುಂಬದ ಸದಸ್ಯರೇ ತೆಗೆದುಕೊಳ್ಳಬೇಕಾಗುತ್ತದೆ.

ಇಂತಹ ಪ್ರಕರಣಗಳಲ್ಲಿ ಕೆಲವರನ್ನು ಚಿಂತೆ ಎಡೆಬಿಡದೇ ಕಾಡುತ್ತಿರುತ್ತದೆ. ಏನಾದರೂ ಆದರೆ ಎಂಬ ಕಳವಳ ಅವರ ಮನಸ್ಸನ್ನು ತುಂಬಿರುತ್ತದೆ. ಹೆಚ್ಚಿನವರು ಇಂತಹ ಹೆದರಿಕೆಗಳಿಂದ ದೂರವಿರುತ್ತಾರೆ. ಸಮಯ ಬಂದಾಗ ನೋಡಿಕೊಳ್ಳೋಣ ಎಂಬ ಭಾವನೆ ಅವರಲ್ಲಿರುತ್ತದೆ.

ರೋಗಿಯ ಸ್ಥಿತಿ ಏಕಾಏಕಿ ಗಂಭೀರವಾಗಿ ತುರ್ತು ವೈದ್ಯಕೀಯ ಸಂದರ್ಭ ಎದುರಾದಾಗ ಮನೆಯವರು ಕೈಕಾಲು ಬಿಡುವ ಸಂದರ್ಭಗಳೇ ಹೆಚ್ಚಾಗಿರುತ್ತವೆ. ಹೀಗಾಗಿ ಮನೆಯಲ್ಲಿ ಗಂಭೀರ ರೋಗದಿಂದ ಬಳಲುತ್ತಿರುವ ರೋಗಿಯಿದ್ದರೆ ಆತಂಕ ಪಟ್ಟುಕೊಳ್ಳುವ ಅಥವಾ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರುವ ಬದಲು ಯಾವುದೇ ಸಂಭಾವ್ಯ ತುರ್ತು ವೈದ್ಯಕೀಯ ಸಂದರ್ಭಕ್ಕಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳುವುದು ಎಲ್ಲ ರೀತಿಗಳಿಂದಲೂ ಒಳ್ಳೆಯದು. ಇಂತಹ ಪೂರ್ವ ಸಿದ್ಧತೆಗಳಿದ್ದರೆ ತುರ್ತು ವೈದ್ಯಕೀಯ ಸಂದರ್ಭ ಎದುರಾದರೆ ಶಾಂತವಾಗಿ ಅದನ್ನು ನಿಭಾಯಿಸಬಹುದು.

1) ತುರ್ತು ದೂರವಾಣಿ ಸಂಖ್ಯೆಗಳು

 ಮನೆಯಲ್ಲಿ ಗಂಭೀರ ರೋಗದಿಂದ ಬಳಲುತ್ತಿರುವ ರೋಗಿಯಿದ್ದರೆ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಎಲ್ಲ ತುರ್ತು ದೂರವಾಣಿ ಸಂಖ್ಯೆಗಳನ್ನು ಒಂದಡೆ ಬರೆದಿಡುವುದು. ಕುಟುಂಬದ ವೈದ್ಯರು,ರೋಗಿಗೆ ಚಿಕಿತ್ಸೆ ನೀಡುತ್ತಿರುವ ತಜ್ಞವೈದ್ಯರು,ಅವರು ಭೇಟಿ ನೀಡುವ ಆಸ್ಪತ್ರೆ,ಸ್ಥಳೀಯ ಆ್ಯಂಬುಲನ್ಸ್ ಸೇವೆ ಮತ್ತು ತಕ್ಷಣದ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳ ದೂರವಾಣಿ ಸಂಖ್ಯೆಗಳು ಮಹತ್ವದ್ದಾಗಿರುತ್ತವೆ. ಈ ದೂರವಾಣಿ ಸಂಖ್ಯೆಗಳನ್ನು ಒಂದು ಡೈರಿಯಲ್ಲೋ ಪುಸ್ತಕದಲ್ಲೋ ಬರೆದಿಡಿ ಮತ್ತು ಅದು ನಿಮ್ಮ ಕುಟುಂಬದ ಇತರ ಸದಸ್ಯರಿಗೆ,ಕೆಲಸದಾಳುಗಳು ಮತ್ತು ನೆರೆಕರೆಯವರು ಸೇರಿದಂತೆ ನಿಮ್ಮ ಮನೆಗೆ ನಿಯಮಿತವಾಗಿ ಭೇಟಿ ನೀಡುವವರಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಿ.

2) ವಿಶೇಷ ಪ್ರಥಮ ಚಿಕಿತ್ಸಾ ಕ್ರಮಗಳು

ಹೃದಯಾಘಾತ ಮತ್ತು ಪಾರ್ಶ್ವವಾಯು ದಿಢೀರ್ ಉಂಟಾಗುತ್ತವೆ. ಇಂತಹ ಸಂದರ್ಭಕ್ಕಾಗಿ ಆರೋಗ್ಯ ವಿಮೆ ಮತ್ತು ಉಳಿತಾಯದೊಂದಿಗೆ ನೀವು ಸಜ್ಜಾಗಿರುವಂತೆ ರೋಗಿಗೆ ದೈಹಿಕವಾಗಿ ನೀಡಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆಯೂ ನಿಮಗೆ ಗೊತ್ತಿರಬೇಕು. ಇಂತಹ ಜ್ಞಾನವು ರೋಗಿಯ ನೋವನ್ನು ದೂರ ಮಾಡುವಲ್ಲಿ ಮತ್ತು ರೋಗಿಯ ಸ್ಥಿತಿಯ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಇವುಗಳಲ್ಲಿ ಮುಖ್ಯವಾದವು ಹೀಗಿವೆ.

ಔಷಧಿಗಳು: ನಿಮ್ಮ ಮನೆಯಲ್ಲಿರಬಹುದಾದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯು ವೈದ್ಯರು ಸೂಚಿಸಿರುವ ರಕ್ತಸ್ರಾವವನ್ನು ನಿಲ್ಲಿಸುವ,ನೋವಿನಿಂದ ಉಪಶಮನ ನೀಡುವ,ಉಸಿರಾಟವನ್ನು ಸುಲಭವಾಗಿಸುವ ಅಥವಾ ಎದುರಾಗಬಹುದಾದ ಯಾವುದೇ ಸಮಸ್ಯೆಯನ್ನು ನಿಭಾಯಿಸಲು ಅಗತ್ಯ ಔಷಧಿಗಳನ್ನು ಒಳಗೊಂಡಿರಬೇಕು.

ಲಕ್ಷಣಗಳ ಗುರುತಿಸುವಿಕೆ: ರೋಗಿಗೆ ನೀವು ಸೂಕ್ತ ಔಷಧಿಯನ್ನು ನೀಡಲು ಸಾಧ್ಯವಾಗುವಂತೆ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಮಾತ್ರ ಮುಖ್ಯವಲ್ಲ,ಆಸ್ಪತ್ರೆಗೆ ರೋಗಿಯನ್ನು ಯಾವಾಗ ಸಾಗಿಸಬೇಕು ಎನ್ನುವುದನ್ನು ತಿಳಿದುಕೊಂಡಿರುವುದೂ ಮುಖ್ಯವಾಗಿರುತ್ತದೆ. ಉದಾಹರಣೆಗೆ ನೀವು ಅಧಿಕ ರಕ್ತದೊತ್ತಡದಿಂದ ಅಥವಾ ಹೃದಯ ಕಾಯಿಲೆಯಿಂದ ಬಳಲುತ್ತಿರುವ ರೋಗಿಯನ್ನು ನೋಡಿಕೊಳ್ಳುತ್ತಿದ್ದರೆ ಪಾರ್ಶ್ವವಾಯುವನ್ನು ಗುರುತಿಸುವುದು ಹೇಗೆ ಎನ್ನುವುದು ನಿಮಗೆ ಅಗತ್ಯವಾಗಿ ಗೊತ್ತಿರಲೇಬೇಕು. ಪಾರ್ಶ್ವವಾಯು ಸೇರಿದಂತೆ ಕೆಲವು ಪ್ರಕರಣಗಳಲ್ಲಿ ರೋಗಿಗೆ ನಿಗದಿತ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ದೊರಕಿದರೆ ಚೇತರಿಸಿಕೊಳ್ಳುವ ಹೆಚ್ಚಿನ ಸಾಧ್ಯತೆಗಳಿರುತ್ತವೆ ಎನ್ನುವುದು ನೆನಪಿರಲಿ.

ಸಿಪಿಆರ್: ಕಾರ್ಡಿಯೊ ಪಲ್ಮನರಿ ರಿಸರೆಕ್ಷನ್ ಅಥವಾ ಸಿಪಿಆರ್ ಜೀವವನ್ನು ಉಳಿಸುವ ಪ್ರಥಮ ಚಿಕಿತ್ಸೆಯಾಗಿದ್ದು,ರೋಗಿಯ ನಾಡಿಮಿಡಿತ ಸ್ತಬ್ಧಗೊಂಡರೆ ಅಥವಾ ಉಸಿರಾಟವು ನಿಂತರೆ ಈ ವಿಧಾನವನ್ನು ಬಳಸಲಾಗುತ್ತದೆ. ಇದು ಮುಖ್ಯವಾಗಿ ರೋಗಿಯ ಎದೆಯ ಮೇಲೆ ಒತ್ತಡ ಹೇರುವುದು ಮತ್ತು ಬಾಯಿಗೆ ಬಾಯಿ ಕೊಟ್ಟು ಉಸಿರಾಡಿಸುವುದನ್ನು ಒಳಗೊಂಡಿರುತ್ತದೆ. ಆದರೆ ಸಿಪಿಆರ್‌ನಂತಹ ವಿಧಾನಗಳನ್ನು ತಿಳಿದುಕೊಳ್ಳಲು ಆನ್‌ಲೈನ್ ವೀಡಿಯೊಗಳನ್ನು ನೆಚ್ಚಿಕೊಳ್ಳಬೇಡಿ. ನಿಮ್ಮ ವೈದ್ಯರನ್ನು ಭೇಟಿಯಾಗಿ ಇಂತಹ ಪ್ರಥಮ ಚಿಕಿತ್ಸೆ ವಿಧಾನಗಳ ಬಗ್ಗೆ ಮಾಹಿತಿ ಮತ್ತು ತರಬೇತಿಯನ್ನು ಪಡೆದುಕೊಳ್ಳಿ.

3) ವೈದ್ಯಕೀಯ ತಪಾಸಣೆಯ ದಾಖಲೆಗಳು,ಲ್ಯಾಬ್ ರಿಪೋರ್ಟ್ಸ್ ಮತ್ತು ಔಷಧಿಯ ಚೀಟಿಗಳು

ತುರ್ತು ವೈದ್ಯಕೀಯ ಸಂದರ್ಭವು ಯಾವುದೇ ಮುನ್ಸೂಚನೆ ನೀಡದೆ ಎದುರಾಗುತ್ತದೆ ಮತ್ತು ರೋಗಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಬೇಕಾಗಬಹುದು. ಇಂತಹ ಸಂದರ್ಭಗಳಲ್ಲಿ ಈ ದಾಖಲೆಗಳು ಬಹುಮುಖ್ಯವಾಗಿರುತ್ತವೆ. ಆದರೆ ಹೆಚ್ಚಿನವರು ಇವುಗಳನ್ನು ಸರಿಯಾಗಿ ಇಟ್ಟುಕೊಂಡಿರುವುದಿಲ್ಲ ಮತ್ತು ತುರ್ತು ಸಂದರ್ಭ ಎದುರಾದಾಗ ಹುಡುಕಲು ಆರಂಭಿಸುತ್ತಾರೆ. ಇದರಿಂದಾಗಿ ರೋಗಿಯ ಪಾಲಿಗೆ ಅತ್ಯಮೂಲ್ಯವಾದ ಸಮಯವು ವ್ಯರ್ಥಗೊಳ್ಳುವ ಅಪಾಯವಿರುತ್ತದೆ. ಹೀಗಾಗಿ ರೋಗಿಯು ಹಾಲಿ ತೆಗೆದುಕೊಳ್ಳುತ್ತಿರುವ ಎಲ್ಲ ಔಷಧಿಗಳ ಶಿಫಾರಸು ಚೀಟಿಗಳು, ಇತ್ತೀಚಿನ ತಪಾಸಣೆ ಸಂದರ್ಭದಲ್ಲಿಯ ವೈದ್ಯರ ಟಿಪ್ಪಣಿಗಳು, ಇತ್ತೀಚಿನ ಪೆಥಾಲಜಿ ಮತ್ತು ರೇಡಿಯಾಲಜಿ ಲ್ಯಾಬೋರೇಟರಿ ವರದಿಗಳು,ಈ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರೆ ಅಲ್ಲಿಯ ಡಿಸ್ಚಾರ್ಜ್ ರಿಪೋರ್ಟ್ ಇವು ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಕೈಗೆ ಸಿಗುವಂತೆ ಇಟ್ಟುಕೊಳ್ಳಿ. ರೋಗಿಯ ವಿವರವಾದ ವೈದ್ಯಕೀಯ ಇತಿಹಾಸವು ಪರಿಸ್ಥಿತಿಯನ್ನು ಸರಿಯಾಗಿ ತಿಳಿದುಕೊಳ್ಳಲು ಮತ್ತು ನೀಡಬಹುದಾದ ಅತ್ಯುತ್ತಮ ಚಿಕಿತ್ಸೆಯ ಬಗ್ಗೆ ನಿರ್ಧರಿಸಲು ವೈದ್ಯರಿಗೆ ನೆರವಾಗುತ್ತದೆ. ಕೆಲವೊಮ್ಮೆ ಶಿಫಾರಸು ಚೀಟಿಗಳಲ್ಲಿಯ ಬ್ರಾಂಡ್ ಹೆಸರುಗಳಿಂದ ಔಷಧಿಯನ್ನು ಗುರುತಿಸಲು ವೈದ್ಯರಿಗೆ ಸಾಧ್ಯವಾಗದಿರಬಹುದು, ಆದ್ದರಿಂದ ರೋಗಿಯನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಸಾಗಿಸುವಾಗ ಸಾಧ್ಯವಿದ್ದರೆ ಔಷಧಿಗಳನ್ನೂ ಜೊತೆಗೆ ಕೊಂಡೊಯ್ಯಿರಿ.

4) ಹಣಕಾಸಿನ ಸಿದ್ಧತೆ

 ಅಧಿಕ ರಕ್ತದೊತ್ತಡ ಅಥವಾ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿದ್ದಲ್ಲಿ ಆಸ್ಪತ್ರೆ ವೆಚ್ಚಕ್ಕಾಗಿ ಸಿದ್ಧ ಹಣಕಾಸು ನಿಮ್ಮ ಬಳಿ ಇರಬೇಕಾಗುತ್ತದೆ. ಒಳ್ಳೆಯ ಆರೋಗ್ಯ ವಿಮೆಯನ್ನು ಪಡೆದುಕೊಂಡಿರುವುದು ಉತ್ತಮ ವಿಚಾರವಾಗಿದ್ದರೂ ಕೆಲವೊಮ್ಮೆ ವಿಮೆ ರಕ್ಷಣೆ ಸಾಕಾಗದಿರಬಹುದು. ಕೆಲವೊಮ್ಮೆ ನೀವು ರೋಗಿಯನ್ನು ದಾಖಲಿಸುವ ಆಸ್ಪತ್ರೆಯಲ್ಲಿ ನಗದುರಹಿತ ಚಿಕಿತ್ಸಾ ಸೌಲಭ್ಯ ಇಲ್ಲದಿರಬಹುದು ಅಥವಾ ವಿಮೆ ಪಾಲಿಸಿಯಲ್ಲಿ ಈ ಸೌಲಭ್ಯವಿಲ್ಲ ದಿರಬಹುದು. ಈ ಎಲ್ಲ ಸಂದರ್ಭಗಳಿಗಾಗಿ ನೀವು ಹಣವನ್ನು ಮುಂಚಿತವಾಗಿಯೇ ಮೀಸಲಿರಿಸಬೇಕಾಗುತ್ತದೆ. ಒಂದು ವೇಳೆ ನಿಮಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣವನ್ನು ಒಟ್ಟುಗೂಡಿಸುವುದು ಸಾಧ್ಯವಾಗದಿದ್ದರೆ ತುರ್ತು ವೈದ್ಯಕೀಯ ಸಂದರ್ಭದಲ್ಲಿಯ ವೆಚ್ಚಗಳಿಗಾಗಿ ಬ್ಯಾಂಕಿನ ಪ್ರಿ-ಅಪ್ರೂವ್ಡ್ ಪರ್ಸನಲ್ ಲೋನ್ ಕಡೆಗೆ ಗಮನ ಹರಿಸುವುದು ಒಳ್ಳೆಯದು. ಇಂತಹ ಸಾಲಗಳು ಮೊದಲೇ ಮಂಜೂರಾಗಿರುತ್ತವೆ ಮತ್ತು ತುರ್ತು ಸಂದರ್ಭಗಳಲ್ಲಿ ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿ ನೀವು ಬಳಸುವ ಹಣದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News