ಫೇಸ್‌ಬುಕ್‌ಗೆ ಮತ್ತೆ ಕೇಂದ್ರದ ತರಾಟೆ: ದತ್ತಾಂಶ ಉಲ್ಲಂಘನೆಯ ವಾಸ್ತವಿಕ ವರದಿ ಸಲ್ಲಿಕೆಗೆ ಸೂಚನೆ

Update: 2018-06-07 17:09 GMT

ಹೊಸದಿಲ್ಲಿ,ಜೂ.7:ಫೇಸ್‌ಬುಕ್‌ ತನ್ನ ಬಳಕೆದಾರರ ಕುರಿತು ಮಾಹಿತಿಗಳನ್ನು ಅವರ ಅನುಮತಿಯಿಲ್ಲದೆ ಹಂಚಿಕೊಳ್ಳುತ್ತಿದೆ ಎಂದು ಮಾಧ್ಯಮಗಳು ಹೊಸದಾಗಿ ವರದಿ ಮಾಡಿರುವ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಗುರುವಾರ ಅದಕ್ಕೆ ಸೂಚಿಸಿದೆ.

ಫೇಸ್‌ಬುಕ್‌ ತನ್ನ ಬಳಕೆದಾರರ ಸ್ನೇಹಿತರು ಸೇರಿದಂತೆ ಅವರ ವೈಯಕ್ತಿಕ ಮಾಹಿತಿಗಳನ್ನು ಅವರ ಸ್ಪಷ್ಟ ಅನುಮತಿಯಿಲ್ಲದೆ ಫೋನ್ ಮತ್ತು ಇತರ ಸಾಧನಗಳ ತಯಾರಕರೊಂದಿಗೆ ಹಂಚಿಕೊಳ್ಳುತ್ತಿದೆ ಎಂದು ಮಾಧ್ಯಮಗಳು ಇತ್ತೀಚಿಗೆ ವರದಿ ಮಾಡಿವೆ. ಇಂತಹ ಉಲ್ಲಂಘನೆಗಳ ವರದಿಗಳ ಬಗ್ಗೆ ಸರಕಾರವು ತೀವ್ರ ಕಳವಳಗೊಂಡಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಕೇಂಬ್ರಿಜ್ ಅನಾಲಿಟಿಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ದತ್ತಾಂಶಗಳ ಉಲ್ಲಂಘನೆ ಕುರಿತು ಹಿಂದಿನ ನೋಟಿಸ್‌ಗಳಿಗೆ ಉತ್ತರಿಸಿದ್ದ ಫೇಸ್‌ಬುಕ್ ಆ ಬಗ್ಗೆ ಕ್ಷಮೆಯನ್ನು ಯಾಚಿಸಿತ್ತು ಮತ್ತು ತನ್ನ ಬಳಿಯಿರುವ ಬಳಕೆದಾರರ ದತ್ತಾಂಶಗಳ ಖಾಸಗಿತನದ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿತ್ತು. ಆದ್ದರಿಂದ ಈ ವಿಷಯದಲ್ಲಿ ವಿವರವಾದ ವಾಸ್ತವಿಕ ವರದಿಯನ್ನು ಸಲ್ಲಿಸುವಂತೆ ಸಚಿವಾಲಯವು ಫೇಸ್‌ಬುಕ್‌ಗೆ ಸೂಚಿಸಿದೆ ಎಂದು ಹೇಳಿಕೆಯು ತಿಳಿಸಿದೆ.

ಇದಕ್ಕೂ ಮುನ್ನ,ಕಳೆದ ಮೇ ತಿಂಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಸಭೆ ಸೇರಿ ಕೇಂಬ್ರಿಜ್ ಅನಾಲಿಟಿಕಾ ಪ್ರಕರಣ ಮತ್ತು ಫೇಸ್‌ಬುಕ್ ಬಳಕೆದಾರರ ದತ್ತಾಂಶ ಸೋರಿಕೆಗಳ ಹಿನ್ನೆಲೆಯಲ್ಲಿ ನಾಗರಿಕರ ದತ್ತಾಂಶ ಸುರಕ್ಷತೆ ಮತ್ತು ಖಾಸಗಿತನ ಕುರಿತು ಚರ್ಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News