7 ಆರೋಪಿಗಳ ವಿರುದ್ಧ ಆರೋಪ ರೂಪಿಸಿದ ನ್ಯಾಯಾಲಯ
ಪಠಾಣ್‌ಕೋಟ್, ಜೂ. 7: ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದ 8 ಆರೋಪಿಗಳಲ್ಲಿ 7 ಆರೋಪಿಗಳ ವಿರುದ್ಧ ಪಠಾಣ್‌ಕೋಟ್ ಜಿಲ್ಲಾ ಹಾಗೂ ಸೆಷನ್ಸ್‌ನ ನ್ಯಾಯಾಲಯ ಗುರುವಾರ ಆರೋಪ ರೂಪಿಸಿದೆ ಈ ಪ್ರಕರಣದ 8ನೇ ಆರೋಪಿ ಅಪ್ರಾಪ್ತ.
ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಜಮ್ಮು ಹಾಗೂ ಕಾಶ್ಮೀರದಿಂದ ಹೊರಗೆ ವರ್ಗಾಯಿಸಿದ ಬಳಿಕ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ಮುಂದೆ ಏಳು ಮಂದಿ ಆರೋಪಿಗಳನ್ನು ಹಾಜರುಪಡಿಸುವ ಮೂಲಕ ಮೇ 31ರಂದು ವಿಚಾರಣೆ ಆರಂಭವಾಗಿತ್ತು. ಸಂತ್ರಸ್ತ ಬಾಲಕಿಯ ಕುಟುಂಬದ ಮನವಿಯ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಜಮ್ಮು ಹಾಗೂ ಕಾಶ್ಮೀರದ ನ್ಯಾಯಾಲಯದಿಂದ ಪಂಜಾಬ್‌ನ ಪಠಾಣ್‌ಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಪ್ರಕರಣವನ್ನು ಕಥುವಾದಿಂದ 30 ಕಿ.ಮೀ. ದೂರದಲ್ಲಿರುವ ಪಠಾಣ್‌ಕೋಟ್‌ಗೆ ವರ್ಗಾಯಿಸುವಾಗ ಈ ಪ್ರಕರಣದ ವಿಚಾರಣೆಯನ್ನು ಕ್ಯಾಮರಾದ ಮುಂದೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಅಲ್ಪಸಂಖ್ಯಾತ ಅಲೆಮಾರಿ ಸಮುದಾಯದ ಬಾಲಕಿಯನ್ನು ಈ ವರ್ಷ ಜನವರಿಯಲ್ಲಿ ಅಪಹರಿಸಲಾಗಿತ್ತು. ಬಾಲಕಿಯನ್ನು ಕಥುವಾ ಜಿಲ್ಲೆಯ ಸಣ್ಣ ಗ್ರಾಮ ದೇವಾಲಯವೊಂದರಲ್ಲಿ ಒತ್ತೆ ಇರಿಸಿ ಅತ್ಯಾಚಾರ ಎಸಗಿ ಹತ್ಯೆಗೈಯಲಾಗಿತ್ತು ಎಂದು ಜಮ್ಮು ಹಾಗೂ ಕಾಶ್ಮೀರ ಕ್ರೈಮ್ ಬ್ರಾಂಚ್ ನ್ಯಾಯಾಲಯಕ್ಕೆ ಸಲ್ಲಿಸಿದ 15 ಪುಟಗಳ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.