ಬೆಂಗಳೂರು ವಿವಿ ಜಾಗತಿಕ ಭಾಷೆಗಳ ಕೇಂದ್ರದಿಂದ ವಿವಿಧ ವಿದೇಶಿ ಭಾಷೆಗಳ ಕೋರ್ಸ್ ಪ್ರಾರಂಭ: ಕುಲಪತಿ ಎಸ್.ಜಾಫೆಟ್
ಬೆಂಗಳೂರು, ಜೂ.8: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿರುವ ಜಾಗತಿಕ ಭಾಷೆಗಳ ಕೇಂದ್ರ 2018-19ನೆ ಸಾಲಿನಿಂದ ಎರಡು ತಿಂಗಳ (40 ಗಂಟೆಗಳ ಬೋಧನಾವಧಿ) ಹೀಬ್ರೂ, ಪೊಲಿಶ್, ಡಚ್ ಮತ್ತು ಥಾಯ್ ಭಾಷೆಗಳ ಕೋರ್ಸ್‌ಗಳನ್ನು ಹೊಸದಾಗಿ ಆರಂಭಿಸಲಾಗುತ್ತಿದೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಎಸ್.ಜಾಫೆಟ್ ತಿಳಿಸಿದರು.
ಶುಕ್ರವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಕೋರ್ಸ್‌ಗಳನ್ನು ತೆಗೆದುಕೊಂಡು ವಿದೇಶಕ್ಕೆ ಹೋಗಿ ವೃತ್ತಿ ಪ್ರಾರಂಭಿಸುವ ಆಲೋಚನೆ ಹೊಂದಿರುವ ವಿದ್ಯಾರ್ಥಿಗಳು ವಿದೇಶಿ ಭಾಷೆ ಕಲಿಕೆ ಕಡೆಗೆ ಗಮನ ನೀಡುತ್ತಿದ್ದಾರೆ. ಹೀಗಾಗಿ ಅವರಿಗೆ ಸಂವಹನಕ್ಕೆ ಅನುಕೂಲವಾಗುವಂತೆ ನಾವು ಪಠ್ಯಕ್ರಮ ರೂಪಿಸಿ ತರಗತಿಗಳನ್ನು ನಡೆಸುತ್ತೇವೆ. ಸದ್ಯ ನಾಲ್ಕು ಭಾಷೆಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ವಿವಿಯ ಜಾಗತಿಕ ಭಾಷೆಗಳ ಕೇಂದ್ರದ ಮುಖ್ಯಸ್ಥೆ ಜ್ಯೋತಿ ವೆಂಕಟೇಶ್ ಮಾತನಾಡಿ, ನಾವು ಐದು ವರ್ಷದ ಎಂ.ಎ.ಫ್ರೆಂಚ್ ಸಮಗ್ರ ಕೋರ್ಸ್‌ನ್ನು ಪರಿಚಯಿಸುತ್ತಿದ್ದೇವೆ. ಮೂರು ವರ್ಷ ಪೂರೈಸಿದ ನಂತರ ಎಕ್ಸಿಟ್ ಆಯ್ಕೆ ಇದೆ. ಇದನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಫ್ರೆಂಚ್ ಪದವಿ ನೀಡುತ್ತೇವೆ. 5 ವರ್ಷ ವ್ಯಾಸಂಗ ಮಾಡಿದವರಿಗೆ ಸ್ನಾತಕೋತ್ತ ಪದವಿ ನೀಡಲಾಗುತ್ತದೆ ಎಂದರು.
ಪ್ರಾಥಮಿಕ ಕಲಿಕಾ ಅವಧಿಯ ಕೋರ್ಸ್‌ಗಳಾದ ಪ್ರಮಾಣ ಪತ್ರ 1 ಮತ್ತು 2, ಡಿಪ್ಲೊಮೋ 1 ಮತ್ತು 2ರ ಕಲಿಕಾ ಭಾಷೆ ಕೋರ್ಸ್‌ಗಳಾದ ಜರ್ಮನ್, ಸ್ಪಾನಿಷ್, ಕೊರಿಯನ್, ರಷ್ಯನ್, ಚೈನೀಸ್, ಇಟಾಲಿಯನ್ ಮತ್ತು ಅರೇಬಿಕ್ ತರಗತಿಗಳ ಕಲಿಕಾ ಅವಧಿ ಎಂಟು ತಿಂಗಳಿನಿಂದ ನಾಲ್ಕು ತಿಂಗಳಿಗೆ ಕಡಿತ ಮಾಡಲಾಗಿದೆ. ಉನ್ನತ ಕಲಿಕಾ ಕೋರ್ಸ್‌ಗಳಾದ ಹೈಯರ್ ಡಿಪ್ಲೊಮೋ ಮತ್ತು ಅಡ್ವಾನ್ಸ್ ಡಿಪ್ಲೊಮೋ ತರಗತಿಗಳು ಎಂದಿನಂತೆ ಎಂಟು ತಿಂಗಳಿನಲ್ಲಿಯೇ ಮುಂದುವರಿಯಲಿವೆ ಎಂದು ತಿಳಿಸಿದರು.
2019-20ನೇ ಸಾಲಿಗೆ ಸ್ಪ್ಯಾನಿಷ್ ಮತ್ತು ಜರ್ಮನ್ ಭಾಷೆಗಳ ಎಂ.ಎ. 5 ವರ್ಷ ಸಮಗ್ರ ಕೋರ್ಸ್ ಪ್ರಾರಂಭಿಸುವ ಆಲೋಚನೆ ಇದೆ ಎಂದರು. ಈ ವೇಳೆ ಬೆಂಗಳೂರು ಕೇಂದ್ರ ವಿವಿ ಕುಲಸಚಿವ ರಾಮಚಂದ್ರ ಗೌಡ ಹಾಜರಿದ್ದರು.