ಚುನಾವಣೆ: ಮತಯಂತ್ರ ಮತ್ತು ಪಾರದರ್ಶಕತೆ

Update: 2018-06-08 18:41 GMT

ದೇಶದ ಗಮನ ಸೆಳೆದಿದ್ದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದು, ಸಮ್ಮಿಶ್ರ ಸರಕಾರದ ರಚನೆಯೂ ಆಗಿ ಹೋಗಿದೆ. ಯಾವೊಂದು ಪಕ್ಷಕ್ಕೂ ಬಹುಮತ ದೊರಕದಿರುವುದರಿಂದಲೋ ಏನೋ ಮತಯಂತ್ರದ ಕಾರ್ಯನಿರ್ವಹಣೆ ಕುರಿತು ಅಷ್ಟೇನು ಅಸಮಾಧಾನ ವ್ಯಕ್ತವಾಗುತ್ತಿಲ್ಲ. ಇವಿಎಂ ಕಾರ್ಯನಿರ್ವಹಣೆ ಪಾರದರ್ಶಕವಾಗಿಲ್ಲ, ಒಂದು ಪಕ್ಷಕ್ಕೆ ವರದಾನವಾಗುವಂತೆ ಅದನ್ನು ಮಾರ್ಪಡಿಸಬಹುದು ಎನ್ನುವ ಅನುಮಾನವನ್ನು ಕೆಲವರಾದರೂ ಹೊರಹಾಕುತ್ತಲೇ ಬಂದಿದ್ದಾರೆ. ಇವಿಎಂ ಕುರಿತು ಹೀಗೆ ಅಸಮಾಧಾನ ತೋರ್ಪಡಿಸುವವರನ್ನೆಲ್ಲ ಕಿಡಿಗೇಡಿ ಗಳೆಂದೋ, ತಂತ್ರಜ್ಞಾನದ ಸದ್ಬಳಕೆ ಕುರಿತು ತಿಳುವಳಿಕೆ ಇಲ್ಲದವರೆಂದೋ ಹೀಗಳೆಯಲಾಗುತ್ತಿದೆ. ಇವಿಎಂನ ವಿಶ್ವಾಸಾರ್ಹತೆ ಕಾಯ್ದುಕೊಳ್ಳುವ ಸಲುವಾಗಿ ಈ ಬಾರಿ ಪ್ರತಿ ಮತಗಟ್ಟೆಯಲ್ಲೂ ವಿವಿಪ್ಯಾಟ್ ಬಳಸಿ ಚುನಾವಣೆ ನಡೆಸಲಾಯಿತು. ಈ ಸಲದ ಚುನಾವಣಾ ಪ್ರಕ್ರಿಯೆಯನ್ನು ಹತ್ತಿರದಿಂದ ಗಮನಿಸಿದವರಿಗೆ ಕೆಲ ವಿಚಾರಗಳಾದರೂ ಮನದಟ್ಟಾಗಿರಬಹುದು. ಇವಿಎಂನ ವಿಶ್ವಾಸಾರ್ಹತೆ ಸಾಬೀತು ಪಡಿಸಲು ವಹಿಸುವ ಮುತುವರ್ಜಿಯ ಜೊತೆಜೊತೆಗೆ ಅದರ ದುರ್ಬಳಕೆಗೆ ಇರುವ ಅವಕಾಶಗಳತ್ತ ಕೂಡ ಚುನಾವಣಾ ಆಯೋಗ ಮತ್ತು ಎಲ್ಲ ರಾಜಕೀಯ ಪಕ್ಷಗಳೂ ಗಮನಹರಿಸಿ, ಸಾಕಷ್ಟು ಪೂರ್ವತಯಾರಿ ನಡೆಸಬೇಕಿರುವ ಜರೂರಂತೂ ಇದ್ದೇ ಇದೆ.

ಮತಯಂತ್ರದಲ್ಲಿನ ದೋಷ ಮತ್ತು ಅದನ್ನು ನಿರ್ವಹಿಸಲು ಬೇಕಿರುವ ತಿಳುವಳಿಕೆ ಮತಗಟ್ಟೆ ಅಧಿಕಾರಿಗಳಲ್ಲಿ ಇರದೆ ಹೋದ ಕಾರಣದಿಂದಾಗಿ ರಾಜ್ಯದ ವಿವಿಧೆಡೆ ಮತದಾನ ಪ್ರಕ್ರಿಯೆಗೆ ತೊಡಕಾಗಿದ್ದಂತೂ ಹೌದು. ಕೆಲವೆಡೆ ಮರುಮತದಾನಕ್ಕೆ ಅನುವು ಮಾಡಿಕೊಡಬೇಕಾದಂತಹ ಸ್ಥಿತಿಯೂ ನಿರ್ಮಾಣವಾಗಿತ್ತು. ಇವಿಎಂ ಬಳಕೆಯ ಕಾರಣಕ್ಕಾಗಿಯೇ ಈ ಅಪಸವ್ಯಗಳು ಜರುಗಿದವು ಎಂಬ ಅಂಶವನ್ನು ಅಲಕ್ಷಿಸದೆ, ಪ್ರತಿ ಚುನಾವಣೆಯಲ್ಲೂ ಪುನರಾವರ್ತನೆಯಾಗುತ್ತಲೆ ಇರುವ ದೋಷಗಳ ನಿವಾರಣೆಗೆ ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಮತಯಂತ್ರದ ಭಾಗವಾದ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಮತ್ತು ವಿಎಸ್‌ಡಿಯು (್ಖ್ಖಅ ಖಠಿಠ್ಠಿ ಈಜಿಟ್ಝ ಖ್ಞಿಜಿಠಿ) ಕಾರ್ಯನಿರ್ವಹಣೆ ಕುರಿತು ಚುನಾವಣಾ ಸಿಬ್ಬಂದಿಗೆ ನೀಡಲಾಗುತ್ತಿರುವ ತರಬೇತಿ ವಿಧಾನದಲ್ಲಿ ಸಾಕಷ್ಟು ಸುಧಾರಣೆ ತರದೇ ಹೋದಲ್ಲಿ ದೂರಗಾಮಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರವೂ ಆಯೋಗಕ್ಕಿರಬೇಕು. ಮತಯಂತ್ರದ ಕಾರ್ಯನಿರ್ವಹಣೆ ಕುರಿತು ಸೂಕ್ತ ತಿಳುವಳಿಕೆ ಹೊಂದಿರದ ಸಿಬ್ಬಂದಿಯನ್ನಿಟ್ಟುಕೊಂಡು ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ಮತ್ತು ಪೂರ್ಣ ಪಾರದರ್ಶಕವಾಗಿ ನಡೆಸಲಂತೂ ಸಾಧ್ಯವೇ ಇಲ್ಲವೆಂಬುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಯಾವಾಗ ಬೇಕಾದರೂ ಕೈಕೊಡಬಹುದಾದ ಸಾಧ್ಯತೆಯನ್ನು ಎಲ್ಲ ಯಂತ್ರಗಳೂ ಹೊಂದಿರುವ ಕಾರಣ, ಇವಿಎಂನ ಮಿತಿಗಳತ್ತ ಯಾರಾದರೂ ಬೆಟ್ಟು ಮಾಡಿದಾಗ ಸಾವಧಾನದಿಂದ ಅದನ್ನು ಪರಿಶೀಲಿಸಿ, ಅದರಿಂದ ಹೊರಬರುವುದು ಹೇಗೆಂದು ಚಿಂತಿಸುವ ಸಂಯಮವೂ ಚುನಾವಣಾ ಆಯೋಗದ್ದಾಗಿರಬೇಕು.

ಇನ್ನು ಮುಂಬರುವ ಚುನಾವಣೆಗಳಲ್ಲಿ ಬಳಸಲಾಗುವ ಮತಯಂತ್ರಗಳ ಕಾರ್ಯನಿರ್ವಹಣೆ ಕುರಿತು ಚುನಾವಣಾ ಸಿಬ್ಬಂದಿ, ಅಭ್ಯರ್ಥಿಗಳು ಮತ್ತವರ ಏಜೆಂಟರಲ್ಲದೆ ಮತದಾರರಲ್ಲೂ ಸಾಕಷ್ಟು ಅರಿವು ಮೂಡಿಸುವ ಹೊಣೆಗಾರಿಕೆಯಿಂದ ಆಯೋಗ ನುಣುಚಿಕೊಳ್ಳಬಾರದು. ಈ ನಿಟ್ಟಿನಲ್ಲಿ ಚುನಾವಣೆಗೆ ಕೆಲ ದಿನಗಳಿವೆ ಎಂದಾಗ ಕೈಗೊಳ್ಳುವ ಜಾಗೃತಿ ಕಾರ್ಯಕ್ರಮಗಳು ಎಷ್ಟು ಜನರನ್ನು ತಲುಪುತ್ತಿವೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ.

ಮತದಾನ ಮಾಡಲು ಬರುವ ಎಷ್ಟೋ ಅನಕ್ಷರಸ್ಥರು, ಹಿರಿಯ ಜೀವಗಳಿಗೆ ಮತ ಚಲಾಯಿಸಲು ಮತಯಂತ್ರದಲ್ಲಿನ ಯಾವ ಬಟನ್ ಅದುಮಬೇಕು ಎಂಬ ತಿಳುವಳಿಕೆ ಮೂಡಿಸಲು ಸಹ ಆಯೋಗ ಸೋತಿರುವುದಕ್ಕೆ ಪ್ರತಿ ಚುನಾವಣೆಯಲ್ಲೂ ಪುರಾವೆಗಳು ದೊರಕುತ್ತಲೇ ಇವೆ. ಮತಯಂತ್ರದ ಕುರಿತು ಜಾಗೃತಿ ಮೂಡಿಸುವ ಪ್ರಕ್ರಿಯೆ ನಿರಂತರವಾಗಿ ಚಾಲ್ತಿಯಲ್ಲಿದ್ದು, ದೇಶದ ಪ್ರತಿ ಮೂಲೆಯನ್ನೂ ಮುಟ್ಟದೆ ಹೋದಲ್ಲಿ ಹೀಗೆ ಯಾವ ಬಟನ್ ಅದುಮಬೇಕು ಎಂಬುದರ ಅರಿವಿಲ್ಲದವರು ಮತಗಟ್ಟೆ ಸಿಬ್ಬಂದಿ ಸೂಚಿಸುವ ಅಥವಾ ಸುಖಾಸುಮ್ಮನೆ ಯಾವುದಾದರೂ ಒಂದು ಬಟನ್ ಒತ್ತಿ ಹೋಗುವ ಅಪಸವ್ಯಗಳು ಜರುಗುತ್ತಲೆ ಇರುತ್ತವೆ.
ಮತಯಂತ್ರವನ್ನು ಹ್ಯಾಕ್ ಮಾಡಬಹುದು, ಯಾವುದೇ ಬಟನ್ ಒತ್ತಿದ್ರೂ ಒಂದೇ ಪಕ್ಷಕ್ಕೆ ಮತ ಚಲಾವಣೆಯಾಗುವಂತೆ ಮಾಡಬಹುದು ಅಂತೆಲ್ಲ ಹೇಳಿ ತಂತ್ರಜ್ಞಾನದ ಬಳಕೆ ಕುರಿತು ಕುರುಡು ವ್ಯಾಮೋಹ ಹೊಂದಿರುವ ಮಂದಿಯ ಅಪಹಾಸ್ಯಕ್ಕೆ ತುತ್ತಾಗುವ ಕೆಲ ರಾಜಕಾರಣಿಗಳ ಮಾತನ್ನು ಹೇಗೆ ಸ್ವೀಕರಿಸಬೇಕೆಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಆದರೆ, ಪ್ರತಿ ರಾಜಕೀಯ ಪಕ್ಷವೂ ತನ್ನದೇ ಒಳಿತಿಗಾಗಿ ಒಂದಿಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಿರುವ ಅಗತ್ಯವಂತೂ ಇದ್ದೇ ಇದೆ. ಮತ ಚಲಾವಣೆ ಮತ್ತು ಎಣಿಕೆ ವೇಳೆ ತಮ್ಮ ಪಕ್ಷದ ಅಭ್ಯರ್ಥಿಯ ಪ್ರತಿನಿಧಿಯಾಗಿ ಹಾಜರಿರುವ ಏಜೆಂಟರಿಗೆ ಮತಯಂತ್ರದ ಕಾರ್ಯನಿರ್ವಹಣೆ ಮತ್ತು ಚುನಾವಣೆ ನಡೆಸಲು ಅನುಸರಿಸಬೇಕಿರುವ ನಿಯಮಗಳ ಕುರಿತು ಸೂಕ್ತ ತಿಳುವಳಿಕೆ ನೀಡಿ ಅವರನ್ನು ಸಜ್ಜುಗೊಳಿಸದೆ ಹೋದಲ್ಲಿ ಕೊಂಚ ಮಟ್ಟಿಗಾದರೂ ಹಿನ್ನಡೆ ಅನುಭವಿಸುವ ಸಾಧ್ಯತೆಯಂತೂ ಸದಾ ಇದ್ದೇ ಇದೆ.

ಈ ಬಾರಿಯ ಚುನಾವಣಾ ಪ್ರಕ್ರಿಯೆ ವೇಳೆ ಕೆಲ ಸಿಬ್ಬಂದಿ ತಮ್ಮ ತಪ್ಪುಗಳನ್ನು ಮುಚ್ಚುವ ಸಲುವಾಗಿ ಮತ್ತು ತಮ್ಮ ಕೆಲಸವನ್ನು ಸರಳಗೊಳಿಸುವ ಉಮೇದಿನಲ್ಲಿ ಮಾಡಿದ ಅಡ್ಜೆಸ್ಟ್‌ಮೆಂಟುಗಳ ಅಡ್ಡಪರಿಣಾಮದ ಕುರಿತು ಗಮನಹರಿಸಿದರೆ, ಏಜೆಂಟರ ಪಡೆಯನ್ನು ಏಕೆ ಅಣಿಗೊಳಿಸಬೇಕೆನ್ನುವುದು ಮನದಟ್ಟಾಗಲಿದೆ. ತೀವ್ರ ಪೈಪೋಟಿಯಿಂದ ಕೂಡಿದ ಕೆಲ ಕ್ಷೇತ್ರಗಳಲ್ಲಿ ಒಂದೊಂದು ಮತಕ್ಕೂ ಮಹತ್ವವಿರುತ್ತದೆ. ಇಂತಹ ಕಡೆ, ಮತಗಟ್ಟೆ ಸಿಬ್ಬಂದಿ ಅಪ್ಪಿತಪ್ಪಿಏನಾದರೂ ಅಣಕು ಮತದಾನದ ನಂತರ ಕಂಟ್ರೋಲ್ ಯೂನಿಟ್‌ನಲ್ಲಿ ಕ್ಲಿಯರ್ ಬಟನ್ ಒತ್ತುವುದನ್ನು ಮರೆತು, ಆನಂತರ ಮಾಡಿದ ತಪ್ಪುಮುಚ್ಚಿಡುವ ಸಲುವಾಗಿ ನೈತಿಕವಲ್ಲದ ಮಾರ್ಗ ಅನುಸರಿಸಿದರೆ ಫಲಿತಾಂಶವೇ ಅದಲು ಬದಲಾಗುವ ಸಂಭವನೀಯ ಸಾಧ್ಯತೆಯೂ ಇದೆ. ರಾಜಕೀಯ ಪಕ್ಷಗಳ ಏಜೆಂಟ್‌ಗಳ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಅವರಿಗೆ ತರಬೇತಿ ನೀಡುವ ಜೊತೆಜೊತೆಗೆ, ಪ್ರಿಸೈಡಿಂಗ್ ಅಧಿಕಾರಿಗಳ ಕೈಪಿಡಿಯಲ್ಲಿರುವ ಅಂಶಗಳ ಕುರಿತು ಸೂಕ್ತ ತಿಳುವಳಿಕೆ ಮೂಡಿಸಿದರೆ ಚುನಾವಣಾ ಸಿಬ್ಬಂದಿಯ ಅಡ್ಜಸ್ಟ್‌ಮೆಂಟ್‌ಗಳ ಬಾಗಿಲುಗಳು ಬಹುತೇಕ ಮುಚ್ಚಲಿವೆ. ಆಗ ಚುನಾವಣಾ ಆಯೋಗಕ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಪರಿಣಾಮಕಾರಿಯಾದ ತರಬೇತಿ ನೀಡಿ, ಅವರ ಕಾರ್ಯಕ್ಷಮತೆ ಸುಧಾರಿಸುವ ಅನಿವಾರ್ಯತೆ ಎದುರಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳಲು, ಎದುರಾಳಿಗಳ ಅವಹೇಳನಕ್ಕೆ ಬೇಕಿರುವ ಬೆಂಬಲಿಗರ ಪಡೆಯನ್ನು ಸಿದ್ಧಗೊಳಿಸಿರುವ ರಾಜಕೀಯ ಪಕ್ಷಗಳು, ಪ್ರತಿ ಮತಗಟ್ಟೆಯಲ್ಲೂ ಸಮರ್ಥ ಏಜೆಂಟ್ ಇರುವಂತೆ ನೋಡಿಕೊಳ್ಳಲು ಕೂಡ ಅಷ್ಟೇ ಮುತುವರ್ಜಿ ತೋರಬೇಕಿದೆ.

ಚುನಾವಣಾ ಆಯೋಗದ ಹೊಣೆಗಾರಿಕೆ ಪಾರದರ್ಶಕವಾಗಿ ಚುನಾವಣೆ ನಡೆಸಬೇಕಿರುವುದೇ ವಿನಾ, ಇವಿಎಂನ ಪ್ರಚಾರ ರಾಯಭಾರಿಯಾಗಿ ಕಾರ್ಯನಿರ್ವಹಿಸುವುದಲ್ಲ. ಮತಯಂತ್ರ ಕಾರ್ಯನಿರ್ವಹಣೆ ಕುರಿತು ಚುನಾವಣಾ ಸಿಬ್ಬಂದಿ, ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಎಲ್ಲ ಮತದಾರರಿಗೂ ಅರಿವು ನೀಡಲು ಸಾಧ್ಯವಿಲ್ಲವೆನ್ನುವುದಾದರೆ, ಮುಂದಿರುವ ಪರ್ಯಾಯಗಳ ಕುರಿತು ಮುಕ್ತ ಮನಸ್ಸಿನಿಂದ ಪರಾಮರ್ಶಿಸುವುದು ಒಳಿತಲ್ಲವೇ? ಮತಯಂತ್ರ ಬಳಸುತ್ತಿರುವ ಒಂದೇ ಕಾರಣಕ್ಕೆ ಚುನಾವಣಾ ಪ್ರಕ್ರಿಯೆಗಳಿಗೆ ತೊಡಕುಂಟಾಗುತ್ತಿದ್ದರೆ, ಅದೂ ಕೂಡ ಗಂಭೀರ ವಿಚಾರವಲ್ಲವೇ?

ಮತಯಂತ್ರ ಎಲ್ಲ ರೀತಿಯ ಅಕ್ರಮಗಳಿಗೂ ಅನುವು ಮಾಡಿಕೊಡುತ್ತದೆ ಎಂಬ ವಾದ ಹೇಗೆ ಬಾಲಿಶವೋ ಹಾಗೆಯೇ ಮತಯಂತ್ರದ ಬಳಕೆಯಿಂದಷ್ಟೇ ಪಾರದರ್ಶಕವಾಗಿ ಚುನಾವಣೆ ನಡೆಸಲು ಸಾಧ್ಯವೆನ್ನುವುದು ಕೂಡ ಅಸಮಂಜಸವೇ ಸರಿ. ಮತಪತ್ರ ಅಥವಾ ಮತಯಂತ್ರ ಯಾವುದರ ಮೂಲಕವೇ ಚುನಾವಣೆ ನಡೆದರೂ, ಅಂತಿಮವಾಗಿ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಕನ್ನಡಿ ಹಿಡಿಯಬಹುದಾದುದು ಚುನಾವಣಾ ಸಿಬ್ಬಂದಿಯ ನಿಷ್ಪಕ್ಷಪಾತ ಧೋರಣೆ ಮಾತ್ರ!

Writer - ಎಚ್. ಕೆ. ಶರತ್, ಹಾಸನ

contributor

Editor - ಎಚ್. ಕೆ. ಶರತ್, ಹಾಸನ

contributor

Similar News